ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬರಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಕಾಂಪೌಂಡ್ ಇಲ್ಲದೇ ಪುಂಡ-ಪುಡಾರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ತಾಲೂಕಿನಲ್ಲಿ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಈ ಶಾಲೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.
ಪ್ರತಿವರ್ಷ ಗ್ರಾಮದ ವಿದ್ಯಾರ್ಥಿಗಳು ಅಗ್ರಸ್ಥಾನದಲ್ಲಿ ಅಂಕಪಡೆದು ಕೊಪ್ಪಳ ಜಿಲ್ಲೆಯಲ್ಲಿ ಹೆಸರು ಮಾಡುತ್ತಿದ್ದಾರೆ. ಆದರೆ, ಶಾಲೆಗೆ ಸುತ್ತಲೂ ಕಾಂಪೌಂಡ್ ಇಲ್ಲ. ಶಾಲೆಯ ಆಟದ ಮೈದಾನ ಊರಿನ ಜಾನುವಾರುಗಳ ನಿತ್ಯವೂ ಮೇಯುವ ಹುಲ್ಲುಗಾವಲು ಪ್ರದೇಶವಾಗಿದೆ. ರೈತರ ಒಕ್ಕಲ ಕಣವಾಣಿಗಿದೆ. ರಾತ್ರಿಯಾದರೆ ಕುಡಕರ ಕೂಟವಾಗಿ, ಮದ್ಯಪಾನದ ಬಾಟಲಿಯ ಗೂಡಾಗಿದೆ. ನಸುಕಿನ ಜಾವ ಗ್ರಾಮಸ್ಥರ ಬಯಲು ಶೌಚಾಲಯ, ಗಂಡುಮಕ್ಕಳ ಮತ್ತು ಹೆಣ್ಣುಮಕ್ಕಳ ಶೌಚಾಲಯದ ಕೊಠಡಿಗಳು ತುಂಬಿ ದುರ್ವಾಸನೆ ಬೀರುತ್ತಿವೆ.

ಹೆಣ್ಣುಮಕ್ಕಳ ಶೌಚಾಲಯ ಇದ್ದರೂ ಕೇವಲ ನಾಮಕಾವಸ್ಥೆಗೆ ಅಷ್ಟೆ. ಅದಕ್ಕೆ ನೀರಿನ ವ್ಯವಸ್ಥೆ ಇಲ್ಲ. ಮಕ್ಕಳು ಕುಳಿತು ಊಟ ಮಾಡಲು ಸುಸಜ್ಜಿತವಾದ ಸಭಾಂಗಣವಿದ್ದರೂ ಬಳಕೆಗೆ ಅನುಕೂಲ ಇಲ್ಲ. ಮೈದಾನದ ತುಂಬಾ ಜಾನುವಾರುಗಳ ಇಕ್ಕೆ, ಸಗಣೆಯ ಗುಂಪೆಗಳು ಕಂಡುಬರುತ್ತವೆ. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಶಾಲೆಯ ಮುಖ್ಯೋಪಾಧ್ಯಾಯರು ಸಮಸ್ಯೆಯ ಕುರಿತು ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿ, “ಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಿಸಲು, ವಿಶೇಷವಾಗಿ ವಿದ್ಯಾರ್ಥಿನಿಯರ ಶೌಚಾಲಯ ನಿರ್ಮಿಸಿಕೊಡಲು ಸಾಕಷ್ಟು ಬಾರಿ ಶಾಲೆಯ ವತಿಯಿಂದ ಗ್ರಾಮ ಪಂಚಾಯತಿಗೆ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿ ಸಲ್ಲಿಸಿದ್ದೇವೆ. ಅಲ್ಲದೇ, ನಮ್ಮ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಯಾವೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸಿಲ್ಲ” ಎಂದರು.

ಶಾಲೆಯ ವಿದ್ಯಾರ್ಥಿನಿ ಮಾತಾನಾಡಿ, “ಶೌಚಾಲಯ ಇವೆ; ಆದರೆ, ಅವು ಬಳಕೆಗೆ ಯೋಗ್ಯವಿಲ್ಲದವು. ನೀರಿನ ವ್ಯವಸ್ಥೆ ಇಲ್ಲ, ಊರಿನ ಜನ ಬಂದು ಅಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡಿ ಹೋಗುತ್ತಾರೆ. ರಾತ್ರಿ ಆದ್ರೆ ಗ್ರೌಂಡ್‌ನಲ್ಲಿ, ಶಾಲೆಯ ಕಟ್ಟೆಯ ಮೇಲೆ ಪುಂಡ ಪೋಕರಿಗಳು ಸಾರಾಯಿ ಕುಡಿದ ಬಾಟಲಿಗಳ ತುಂಡಾದ ಚೂರಗಳನ್ನು ಬೆಳಗಾದರೆ ನಾವೇ ಸ್ವಚ್ಛ ಮಾಡಬೇಕು” ಎಂದು ಬೇಸರ ವ್ಯಕ್ತಪಡಿಸಿದರು.
ಕೆವಿಎಸ್ ಸಂಘಟನೆಯ ಕಾರ್ಯದರ್ಶಿ ಮಾತನಾಡಿ, “ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ಇಲ್ಲಿ ನಡೆಯಬಾರದ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರೂ ಏನೇನೋ ಕಾರಣ ಹೇಳುತ್ತಾರೆ. ಶಾಲಾ ಕಟ್ಟಡ ಬೇರೆಯ ಸರ್ವೇ ನಂಬರಲ್ಲಿದೆ ಅದಕ್ಕಾಗಿ ಕಾಂಪೌಂಡ್ ನಿರ್ಮಿಸಲು ತಾಂತ್ರಿಕ ದೋಷಗಳು ಇವೆ ಎಂದು ಸಬೂಬು ಹೇಳುತ್ತಾರೆ” ಎಂದರು.

ಬರಗೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಈದಿನ ಡಾಟ್ ಕಾಂನೊಂದಿಗೆ ಮಾತನಾಡಿ, “ಸರ್ವೇ ನಂಬರ್ ಅದಲು ಬದಲಾಗಿದೆ. ಅದರ ಚಕ್‌ಬಂದಿಗಾಗಿ ಸರ್ವೇ ಮಾಡಿಸಿ, ಕಾಂಪೌಂಡ್ ನಿರ್ಮಿಸಲು ವ್ಯವಸ್ಥೆ ಮಾಡುತ್ತೇವೆ. ಅದಕ್ಕಾಗಿಯೇ 40 ಲಕ್ಷ ಅನುದಾನ ಮೀಸಲಿಡಲಾಗಿದೆ. ಕಟ್ಟಡ ಚಕ್‌ಬಂದಿ ಅದಲು ಬದಲಾಗಿರುವುದನ್ನ ಹಾಗೂ ಕೆಲವು ತಾಂತ್ರಿಕ ದೋಷಗಳನ್ನು ಸರಿಪಡಿಸಿ ಈಗಾಗಲೇ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲಿ ಶಾಲೆಗೆ ಕಾಂಪೌಂಡ್ ಜತೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ನಿರ್ಮಿಸಿಕೊಡುತ್ತೇವೆ” ಎಂದು ಭರವಸೆಯಿತ್ತರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ, “ಪಹಣಿಯಲ್ಲಿ ಸರ್ವೇ ನಂಬರ್ ವ್ಯತ್ಯಾಸ ಆಗಿರುದನ್ನ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅಲ್ಲಿ ಪಹಣಿಪತ್ರ ಸರಿಪಡಿಸಿದ ನಂತರ ಕಾಂಪೌಂಡ್ ಕಟ್ಟಿಸುವ ವ್ಯವಸ್ಥೆ ಮಾಡಿಸುತ್ತೇವೆ” ಎಂದರು.
ಇದನ್ನೂ ಓದಿ: ಕೊಪ್ಪಳ | ಶುಲ್ಕ ಪಾವತಿ ಸಮಸ್ಯೆ ಬಗೆಹರಿಸಲು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಒತ್ತಾಯ
ಇವೆಲ್ಲವೂ ಕೇವಲ ಭರವಸೆಗಳಾಗಿಯೇ ಉಳಿಯುತ್ತವೆಯೋ ಅಥವಾ ಬರಗೂರು ಶಾಲೆಗೆ ಕಾಂಪೌಂಡ್ ಭಾಗ್ಯ ದೊರೆಯುವುದೋ ಕಾದು ನೋಡಬೇಕಿದೆ.


ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್