ಶಿವರಾತ್ರಿ ಆಚರಣೆಯ ಸಂದರ್ಭದಲ್ಲಿ ಸ್ಪೀಕರ್‌ಗಳನ್ನು ಅಳವಡಿಸುವ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿರುವ ಘಟನೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಇಚಕ್ ಬ್ಲಾಕ್‌ನ ಡುಮ್ರಾನ್ ಗ್ರಾಮದಲ್ಲಿ ನಡೆದಿದೆ. ಘರ್ಷಣೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇತರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಡುಮ್ರಾನ್ ಗ್ರಾಮದಲ್ಲಿ ಶಾಲೆಯ ಮುಂದೆ ಧಾರ್ಮಿಕ ಧ್ವಜಗಳು ಮತ್ತು ಧ್ವನಿವರ್ಧಕವನ್ನು ಅಳವಡಿಸಲಾಗಿತ್ತು. ಶಾಲೆ ಎದುರು ಹಾಕಬಾರದೆಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ, ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಹಿಂಸಾಚಾರಕ್ಕೆ ಕಾರಣವಾಯಿತು. ಎರಡೂ ಕಡೆಯವರು ಕಲ್ಲು-ಇಟ್ಟಿಗೆಗಳ ತೂರಾಟ ನಡೆಸಿದ್ದಾರೆ. ಕೆಲವರಿಗೆ ಗಾಯಗಳಾಗಿವೆ ಎಂದು ಇಚಕ್ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಸಂತೋಷ್ ಕುಮಾರ್ ಹೇಳಿದ್ದಾರೆ.
ಹಿಂಸಾಚಾರದ ಸಂದರ್ಭದಲ್ಲಿ ಮೂರು ಮೋಟಾರ್ ಸೈಕಲ್‌ಗಳು ಮತ್ತು ಒಂದು ಕಾರನ್ನು ಸುಟ್ಟುಹಾಕಲಾಗಿದೆ. ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹಜಾರಿಬಾಗ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.
ಏತನ್ಮಧ್ಯೆ, ‘ಸಮಸ್ಯೆಯನ್ನು ಪರಿಹರಿಸಲು’ ಎರಡು ಸಮುದಾಯಗಳ ಸದಸ್ಯರು ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ಇಚಕ್ ಬ್ಲಾಕ್ ಬಿಡಿಒ ಹೇಳಿದರು.
“ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಸುಮಾರು 150 ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಅಗತ್ಯವಿದ್ದರೆ ಹೆಚ್ಚಿನ ಸಿಬ್ಬಂದಿಯನ್ನು ಕರೆಸಲಾಗುವುದು” ಎಂದು ಬಿಡಿಒ ಹೇಳಿದರು.
ಈ ಹಿಂದೆ, ಮದರಸದೊಳಗೆ ‘ಮಿನಾರ್ ರೀತಿಯ ರಚನೆ’ಯ ಬಗ್ಗೆ ಎರಡೂ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯವಿತ್ತು ಎಂದು ಬಿಡಿಒ ಹೇಳಿದರು. ಮದರಸದ ಬಳಿ ಧ್ವನಿವರ್ಧಕಗಳನ್ನು ಅಳವಡಿಸಿದಾಗ ಪರಿಸ್ಥಿತಿ ಉಲ್ಬಣಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.