ರಾಜ್ಯ ಬಜೆಟ್‌ನಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಶೇ.30ರಷ್ಟು ಅನುದಾನ ಮೀಸಲಿಡಬೇಕು ಮತ್ತು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಶೈಕ್ಷಣಿಕ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು ಎಂದು ಆಗ್ರಹಿಸಿ ಎಸ್‌ಎಫ್‌ಐ ಹೊಸಪೇಟೆ ತಾಲೂಕು ಸಮಿತಿ ನೇತೃತ್ವದಲ್ಲಿ ಶಾಸಕ ಎಚ್ ಆರ್ ಗವಿಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಶಿವರೆಡ್ಡಿ ಮಾತನಾಡಿ, “ವಿಜಯನಗರವು ಹೊಸ ಜಿಲ್ಲೆಯಾಗಿದ್ದು ಇಲ್ಲಿ ಸುಮೂರು 7 ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಶೈಕ್ಷಣಿಕ ಸೌಲಭ್ಯ ಪಡೆಯುತಿದ್ದಾರೆ. ಆದರೆ ಜಿಲ್ಲೆಯಲ್ಲಿ ಅಗತ್ಯ ಕಾಲೇಜುಗಳು ಇಲ್ಲದೇ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ವಲಸೆ ಹೋಗುತಿದ್ದಾರೆ. ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯವಸ್ಥೆಗಳು ಮೂಲಸೌಕರ್ಯದಿಂದ ಕುಂಠಿತಗೊಂಡಿವೆ. ವಿಷಯವಾರು ಶಿಕ್ಷಕರ ಕೊರತೆ ಮತ್ತು ಕುಡಿಯುವ ನೀರು ಮತ್ತು ಶೌಚಾಲಯ, ಆವರಣಗಳಿಲ್ಲ. ಇವೆಲ್ಲ ಮೂಲಸೌಕರ್ಯ ಒದಗಿಸುವ ಮೂಲಕ ಕಟ್ಟಡಗಳ ತೀವ್ರ ದುರಸ್ತಿ ಕಾರ್ಯ ನೆರವೇರಿಸಬೇಕು” ಎಂದು ಒತ್ತಾಯಿಸಿದರು.
“ಸರ್ಕಾರಿ ಶಾಲೆಗಳ ಅವ್ಯವಸ್ತೆಯನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಶಾಲೆಗಳು ಎಲ್‌ಕೆಜಿ ಮತ್ತು ಪ್ರೌಢ ಶಿಕ್ಷಣದವರೆಗೆ ವಂತಿಕೆ ಹೆಸರಲ್ಲಿ ವಿದ್ಯಾರ್ಥಿ ಪೋಷಕರಿಂದ ಹಣ ವಸೂಲಿಗೆ ನಿಂತಿವೆ. ಇದನ್ನು ಸರ್ಕಾರ ತಡೆಯುವುದು ಜರೂರಿದೆ” ಎಂದು ಆಗ್ರಹಸಿದರು.

ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಪವನ್ ಮಾತನಾಡಿ, “ಜಿಲ್ಲೆಯಲ್ಲಿ ಅತಿಹೆಚ್ಚು ಗ್ರಾಮೀಣ ಪ್ರದೇಶದ ಬಡರೈತ, ದಲಿತ ಮಕ್ಕಳು ಶೇ.50ರಷ್ಟು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳು ಇರುವುದರಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಲ್ಲಿ ಹೆಣಗುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗಾಗಿ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಈ ಹಿಂದೆ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು ಹಾಗೂ ಜಿಲ್ಲಾಧಿಕಾರಿಗೂ ಮನವಿ ನೀಡಿದ್ದೇವೆ. ಅದರಭಾಗವಾಗಿ ಇಂದಿರಾ ಕ್ಯಾಂಟೀನ್ ಮತ್ತು ಸರ್ಕಾರಿ ಕಾನೂನು ಪದವಿ ಕಾಲೇಜು ಮುಂಜೂರು ಮಾಡಲಾಗಿದೆ. ಇದು ಸ್ವಾಗತಾರ್ಹ” ಎಂದು ಹೇಳಿದರು.
ತಾಲೂಕು ಅಧ್ಯಕ್ಷೆ ಲಕ್ಷ್ಮಿ ಮಾತನಾಡಿ, “ಹೊಸಪೇಟೆ ನಗರದಲ್ಲಿ ಅಗತ್ಯವಿರುವ ಕಾಲೇಜುಗಳನ್ನು ಆರಂಭಿಸಬೇಕು ಮತ್ತು ನಮ್ಮ ಬೆಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಶಾಸಕರ ವ್ಯಾಪ್ತಿಯಲ್ಲಿ ಬರವಂಥ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಒತ್ತಾಯಿಸಿದರು.
“ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಾಲೇಜುಗಳ ಸಮೀಪದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಶೀಘ್ರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು. ಸರ್ಕಾರಿ ಕಾನೂನು ಪದವಿ ಕಾಲೇಜು ಎಂಜಿನಿಯರ್ ಕಾಲೇಜು, ಮೆಡಿಕಲ್ ಕಾಲೇಜು, ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಅತಿ ಬೇಗನೆ ಪ್ರಾರಂಭಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಪುಣ್ಯಸ್ಮರಣೆ
“ರಾಜ್ಯದಲ್ಲಿ 9 ಹೊಸ ವಿಶ್ವ ವಿದ್ಯಾಲಯ ಮುಚ್ಚಲು ಮುಂದಾಗಿರುವ ಕ್ರಮ ಖಂಡನೀಯ. ಸರ್ಕಾರವು ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು. ರಾಜ್ಯದ 8ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಬೇಕು. ವಿದ್ಯಾರ್ಥಿಗಳ ವೇತನ ಬಿಡುಗಡೆ ಮಾಡಬೇಕು. ಹಾಸ್ಟೆಲ್ ವಿದ್ಯಾರ್ಥಿಗಳ ಭತ್ಯೆಯನ್ನು ₹3,000ಕ್ಕೆ ಹೆಚ್ಚಿಸಬೇಕು” ಎಂದು ಒತ್ತಾಯಿಸಿದರು.
“ಹೊಸಪೇಟೆ ನಗರದ ಬಸ್ ನಿಲ್ದಾಣದಿಂದ ಕಾಲೇಜುಗಳಿಗೆ ತಲುಪಲು ನಾಲ್ಕೈದು ಕಿಲೋಮೀಟರ್ ದೂರವಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹೊಸಪೇಟೆ ನಗರದಲ್ಲಿ ಬಸ್ ಬಿಡಬೇಕು” ಎಂದು ಮನವಿ ಮಾಡಿದರು.