ಭಾರತ-ಚೀನಾ ಗಡಿಭಾಗದ ಗಾಲ್ವಾನ್ ಕಣಿವೆಯಲ್ಲಿ ಉಭಯ ರಾಷ್ಟ್ರಗಳ ಸೈನಿಕರ ನಡುವೆ ಸಶಸ್ತ್ರ ದಾಳಿ ನಡೆದು, 20 ಮಂದಿ ಭಾರತೀಯ ಯೋದರು ಹತ್ಯೆಯಾದ ಘಟನೆ ನಡೆದು ಇಂದಿಗೆ (ಜೂನ್ 15) ಮೂರು ವರ್ಷಗಳಾಗಿವೆ. ಇದು, ಕಳೆದ ಐದು ದಶಕಗಳಲ್ಲಿ ಮೊದಲ ಬಾರಿಗೆ ಉಭಯ ರಾಷ್ಟ್ರಗಳ ನಡುವೆ ನಡೆದ ಷರ್ಘಣೆಯಾಗಿತ್ತು. ಆ ಘಟನೆಯನ್ನು ನೆನಪಿಸಿಕೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಮೂರು ವರ್ಷಗಳ ಹಿಂದೆ ಗಾಲ್ವಾನ್ ಕಣಿವೆಯಲ್ಲಿ 20 ವೀರರು ಮಾಡಿದ ತ್ಯಾಗಕ್ಕೆ ಭಾರತವು ಗೌರವಗಳನ್ನು ಸಲ್ಲಿಸುತ್ತದೆ. ಇದೇ ಸಮಯದಲ್ಲಿ, ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಲ್ಲಿ ಮೋದಿ ವಿಫಲವಾಗಿದೆ. ಪರಿಣಾಮ, ನಾವು 65ರಲ್ಲಿ 26 ಪೆಟ್ರೋಲಿಂಗ್ ಪಾಯಿಂಟ್‌ಗಳನ್ನು (ಪಿಪಿ) ಕಳೆದುಕೊಂಡಿದ್ದೇವೆ” ಎಂದು ಖರ್ಗೆ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನಾವು ಗಡಿ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಹಲವಾರು ಬಾರಿ ಪ್ರಸ್ತಾಪಿಸಲು ಪ್ರಯತ್ನಿಸಿದ್ದೇವೆ. ಆದರೆ, ಮೋದಿ ಸರ್ಕಾರವು ದೇಶದ ದಿಕ್ಕು ತಪ್ಪಿಸುತ್ತಿದೆ. ಭಾರತೀಯರನ್ನು ಕತ್ತಲೆಯಲ್ಲಿಡಲು ಯತ್ನಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.
“ಗಾಲ್ವಾನ್‌ನಲ್ಲಿ ಚೀನಾದ ಸೈನಿಕರು ಭಾರತದ ಗಡಿ ಪ್ರವೇಶಿಲ್ಲವೆಂದು ಹೇಳುವ ಮೂಲಕ ಚೀನಾಕ್ಕೆ ಮೋದಿ ಜಿ ‘ಕ್ಲೀನ್ ಚಿಟ್’ ನೀಡಿದ್ದಾರೆ. ಇದು ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತಂದಿದೆ” ಎಂದು ಅವರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಉತ್ತರಾಖಂಡದಲ್ಲಿ ‘ಕೋಮುವಾದಿ’ ಮಹಾಪಂಚಾಯತ್; ಅನುಮತಿ ನೀಡದಂತೆ ನಿವೃತ್ತ ಅಧಿಕಾರಿಗಳ ಒತ್ತಾಯ
“ಜವಾಬ್ದಾರಿಯುತ ಪ್ರತಿಪಕ್ಷವಾಗಿ, ಚೀನಾದ ವಿಸ್ತರಣಾ ನೀತಿಯ ವಿರುದ್ಧ ದೇಶವನ್ನು ಒಗ್ಗೂಡಿಸಿ ಮೋದಿ ಸರ್ಕಾರಕ್ಕೆ ಸತ್ಯದ ಕನ್ನಡಿ ತೋರಿಸುವುದು ನಮ್ಮ ಕೆಲಸವಾಗಿದೆ. ನಾವು ಅದನ್ನು ಮಾಡುತ್ತೇವೆ” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
ಅಂದಹಾಗೆ, 2020ರ ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಮಾರಣಾಂತಿಕ ಘರ್ಷಣೆ ನಡೆದಿತ್ತು. ಇದೀಗ, ಕೇಂದ್ರ ಸರ್ಕಾರವು ಸುಮಾರು 3,500 ಕಿಮೀ ಉದ್ದದ ಎಲ್‌ಎಸಿ ಉದ್ದಕ್ಕೂ ಮಿಲಿಟರಿ ಮೂಲಸೌಕರ್ಯ, ಕಣ್ಗಾವಲು ಮತ್ತು ಯುದ್ಧ ಸಲಕರಣೆಗಳನ್ನು ಹೆಚ್ಚಿಸಿದೆ. ಈ ಬಗ್ಗೆ ರಕ್ಷಣಾ ಸಂಸ್ಥೆಯ ಮೂಲಗಳು ಬುಧವಾರ ತಿಳಿಸಿವೆ.