“ವಚನಗಳನ್ನು ತಿದ್ದುವ ಕೆಲಸ ನಿಲ್ಲಿಸಿ. ನಮ್ಮ ಅಸ್ಮಿತೆಗೆ ಕೈ ಹಾಕಬೇಡಿ. ನಿಮ್ಮ ಅಸ್ಮಿತೆಯನ್ನು ನಾವು ಗೌರವಿಸುತ್ತೇವೆ. ʼವಚನ ದರ್ಶನʼ ಪುಸ್ತಕ ಬಿಡುಗಡೆಯಾಗಬಾರದಿತ್ತು. ಇನ್ನು ಮುಂದೆ ಅಂತಹ ಕೆಲಸಕ್ಕೆ ಕೈ ಹಾಕುವುದು ನಿಲ್ಲಬೇಕು” ಎಂದು ಸಚಿವ ಎಂ ಬಿ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.
ಗುರುವಾರ ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಮಹಾಸಭಾ, ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಜಂಟಿಯಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ʼವಚನ ದರ್ಶನʼ ಮಿಥ್ಯ v/s ಸತ್ಯʼ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ವಚನ ದರ್ಶನ ಪುಸ್ತಕ ಬಿಡುಗಡೆಯ ಹಿಂದೆ ಸದುದ್ದೇಶ ಇದ್ದಿದ್ದರೆ ನಾವೂ ಬೆಂಬಲಿಸುತ್ತಿದ್ದೆವು. ಆದರೆ ಅದರ ಹಿಂದೆ ದುರುದ್ದೇಶ ಇಟ್ಟುಕೊಂಡು, ಅನರ್ಥ ಕೊಡುವುದು, ತಿರುಚುವುದು, ಬೇರೆ ಅಜೆಂಡಾ ಇಟ್ಟುಕೊಂಡಿದ್ದರೆ ಅದಕ್ಕೆ ಪ್ರತ್ಯುತ್ತರ ಕೊಡಲೇಬೇಕು. ಪುಸ್ತಕ ಬರೆಯುವವರು ನಮ್ಮವರು, ಬಿಡುಗಡೆ ನಮ್ಮ ಮಠದಲ್ಲಿ, ಆದರೆ ಬಿಡುಗಡೆ ಮಾಡೋರು ಬೇರೆ. ನಮ್ಮ ಸ್ವಾಮೀಜಿಗಳಿಂದ ಬಿಡುಗಡೆ ಮಾಡಿಸುತ್ತಿಲ್ಲ. ಇದರ ಉದ್ದೇಶವೇನು ಎಂದು ಪ್ರಶ್ನಿಸಿದರು.
ಬಸವಧರ್ಮ ಕನ್ನಡದ ಧರ್ಮ. ಕಲ್ಯಾಣದಲ್ಲಿ ಕ್ರಾಂತಿ ಆಗಿತ್ತು. ವಚನಗಳನ್ನು ಸುಟ್ಟು ಹಾಕಲಾಗಿತ್ತು. ಲಕ್ಷಾಂತರ ವಚನಗಳನ್ನು ಕಳೆದುಕೊಂಡೆವು. ಸಂಶೋಧಕ ಫ ಗು ಹಳಕಟ್ಟಿ ಅವರು ಕಿರಾಣಿ ಅಂಗಡಿ, ಮಠ, ಮನೆಗಳಲ್ಲಿ ಇದ್ದ ವಚನಗಳನ್ನು ಸಂಗ್ರಹಿಸಿದ ಕಾರಣ ನೂರೈವತ್ತು ಶರಣರು ಬೆಳಕಿಗೆ ಬಂದರು. ಇಲ್ಲದಿದ್ದರೆ ಗೊತ್ತೇ ಆಗುತ್ತಿರಲಿಲ್ಲ. ಇದು ನಮ್ಮ ಆಸ್ತಿ, ಇದನ್ನು ತಿರುಚುವ ಕೆಲಸಕ್ಕೆ ಕೈ ಹಾಕಬೇಡಿ ಎಂದು ಎಚ್ಚರಿಸಿದರು.
ಇಂತಹ ಕೃತ್ಯಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ನೀಡಬೇಕಿದೆ. ಇದು ಇನ್ನು ಮುಂದುವರಿಯಕೂಡದು. ವೀರಶೈವ ಲಿಂಗಾಯತ ಮಹಾಸಭಾ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ನಡುವೆ ಮೂರನೆಯವರು ಬಂದು ಹಾಳು ಮಾಡಲು ಬಿಡಬಾರದು. ಅಂಥವರಿಗೆ ಕೀಳುಮಟ್ಟದ ಹೇಳಿಕೆ ನೀಡದೇ ಘನತೆಯಿಂದ ಸತ್ಯವನ್ನು ಹೇಳೋಣ ಎಂದರು.

ಉಪಜಾತಿಗಳು ಒಂದಾಗಬೇಕು ಎಂದು ಭಾಷಣ ಮಾಡುತ್ತೇವೆ. ಗ್ರಾಮೀಣ ಜನರಿಗೆ ಔದ್ಯೋಗಿಕ ಮತ್ತು ಶೈಕ್ಷಣಿಕ ಮೀಸಲಾತಿ ಬೇಕು. ನಮ್ಮ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಅದೇ ಗುರಿ ಇತ್ತು. ಸರ್ಕಾರದ ಅವಧಿ ಮುಗಿಯುತ್ತ ಬಂದಿತ್ತು. ಎರಡೂ ಕಡೆಯಿಂದ ಸ್ವಲ್ಪ ತಪ್ಪುಗಳಾದವು. ಒಕ್ಕಲಿಗ ಸಮುದಾಯವನ್ನು ನೋಡಿ ನಾವು ಕಲಿಯಬೇಕು. ಅಲ್ಲಿ ನೂರಾನಾಲ್ಕು ಉಪಜಾತಿಗಳಿವೆ. ಆದರೆ ಅವರೆಲ್ಲ 3ಎ ಅಡಿ ಬರುತ್ತಾರೆ. ಎಲ್ಲ ಜಾತಿ ಪಂಗಡಗಳು ಒಂದೇ ಹೆಸರಿನ ಅಡಿ ಬರುತ್ತವೆ. ಸ್ವಾಮಿಗಳೂ ಒಬ್ಬರೇ ಇದ್ದಾರೆ. ಕೇಂದ್ರ ಸರ್ಕಾರದ ಹಿಂದುಳಿದ ವರ್ಗ ಪಟ್ಟಿಯಲ್ಲಿ ಬರುತ್ತಾರೆ. ನಾವೂ ಇದೇ ರೀತಿ ಎಲ್ಲ ಉಪಜಾತಿಗಳನ್ನು ಒಂದೇ ಹೆಸರಿನಡಿ ತಂದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಇಲ್ಲದಿದ್ದರೆ ಹೀಗೇ ಮುಂದುವರಿಯುತ್ತದೆ. ಜಾತಿ ಗಣತಿಯನ್ನು ಕೆಲವರು ವಿರೋಧಿಸುತ್ತಾರೆ. ಲಿಂಗಾಯತರು ಎರಡು ಕೋಟಿ ಮೂರು ಕೋಟಿ ಇದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಗಣತಿಯ ಸಮಯದಲ್ಲಿ ಬಣಜಿಗ, ಸಾದರ, ಗಾಣಿಗ ಅಂತ ಹೇಳುತ್ತಾರೆ. ಯಾರೂ ವೀರಶೈವ ಲಿಂಗಾಯತ ಎಂದು ಬರೆಸಲ್ಲ. ಮತ್ತೆ ನಮ್ಮ ಸಂಖ್ಯೆ ಕಡಿಮೆ ಬರದೇ ಇರುತ್ತದಾ? ಮತ್ತೊಮ್ಮೆ ಜಾತಿಗಣತಿ ಮಾಡಬೇಕು ಅಂತಾರೆ. ಮತ್ತೆ ಇದನ್ನೇ ಬರೆಸುತ್ತಾರೆ. ಆಗ ನಮ್ಮ ಸಂಖ್ಯೆ ಇನ್ನೂ ಕಡಿಮೆ ಬರುತ್ತದೆ. ನಮ್ಮ ಎಲ್ಲಾ ಒಳಪಂಗಡಗಳನ್ನು ವೀರಶೈವ ಲಿಂಗಾಯತದ ಅಡಿಯಲ್ಲಿ ನಮೂದಿಸುವಂತೆ ಮಾಡಬೇಕಿದೆ ಎಂದು ಹೇಳಿದರು.
ಡಾ ತೋಂಟದ ಸಿದ್ದಲಿಂಗ ಸ್ವಾಮೀಜಿ, ಶಿವರುದ್ರ ಮಹಾಸ್ವಾಮಿ, ಶ್ರೀಕಂಠ ಸ್ವಾಮಿ, ಮೃತ್ಯುಂಜಯಸ್ವಾಮಿ, ಪ್ರಭು ಚನ್ನಬಸವ ಸ್ವಾಮಿ, ಬಸವೇಶ್ವರಿ ಮಾತಾಜಿ, ಹಿರಿಯ ಸಾಹಿತಿ ಗೊ ರು ಚನ್ನಬಸಪ್ಪ, ಪ್ರೊ ವೀರಭದ್ರಯ್ಯ, ಯೋಜನಾ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ, ಡಾ ಶಿವಾನಂದ ಜಾಮದಾರ್, ಕೃತಿಕಾರರಾದ ಡಾ ಆರ್ ಟಿ ಚಂದ್ರಶೇಖರ್ ಮತ್ತು ಮುಕ್ತಾ ಬೆಳಗಲಿ ಉಪಸ್ಥಿತರಿದ್ದರು.