ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಗೆ ಸದನ ಸಮಿತಿ ಸೂಚಿಸಿದ್ದ ತಿದ್ದುಪಡಿಗಳಿಗೆ ಗುರುವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಜಂಟಿ ಸದನ ಸಮಿತಿಯು ಸೂಚಿಸಿದ್ದ 23 ತಿದ್ದುಪಡಿಗಳ ಪೈಕಿ 14 ತಿದ್ದುಪಡಿಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಜಂಟಿ ಸದನ ಸಮಿತಿಯ ಪರಿಶೀಲನೆಗಾಗಿ ಒಪ್ಪಿಸಲಾಗಿತ್ತು.
ಆದರೆ, ಮಾರ್ಚ್ 10ರಂದು ಸಂಸತ್ ಕಲಾಪ ಪುನಾರಂಭಗೊಂಡಾಗ ಈ ತಿದ್ದುಪಡಿ ಮಸೂದೆಯನ್ನು ಸದನದ ಮುಂದೆ ಮಂಡಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ಫೆಬ್ರವರಿ 13ರಂದು ಜಂಟಿ ಸದನ ಸಮಿತಿಯು ತನ್ನ ವರದಿಯನ್ನು ಲೋಕಸಭೆಗೆ ಸಲ್ಲಿಸಿತ್ತು. ಹೀಗಿದ್ದೂ, ಲೋಕಸಭೆಗೆ ಸಲ್ಲಿಸಲಾಗಿರುವ ವರದಿಯಲ್ಲಿ ನಮ್ಮ ಭಿನ್ನಮತದ ಟಿಪ್ಪಣಿಗಳ ಅಧ್ಯಾಯವನ್ನು ತೆಗೆದು ಹಾಕಲಾಗಿದೆ ಎಂದು ಜಂಟಿ ಸದನ ಸಮಿತಿಯಲ್ಲಿದ್ದ ವಿಪಕ್ಷಗಳ ಸಂಸದರು ಆರೋಪಿಸಿದ್ದರಿಂದ, ಜಂಟಿ ಸದನ ಸಮಿತಿಯ ವರದಿಯೂ ಕೂಡ ವಿವಾದಕ್ಕೀಡಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಳೆಗೇರಿಗಳ ಜನ ನೀರು ನೆರಳು ಬೆಳಕಿಲ್ಲದೆ ನರಳಬೇಕಿರುವುದು ನಾಗರಿಕ ಸಮಾಜದ ನಾಚಿಕೆಗೇಡು
ಆದರೆ, ಈ ಆರೋಪಗಳನ್ನು ಕೇಂದ್ರ ಸರಕಾರ ಅಲ್ಲಗಳೆದಿತ್ತಾದರೂ, ಸಮಿತಿಗೆ ಕಳಂಕ ತಗಲುವ ಸಾಧ್ಯತೆ ಇದ್ದಾಗ ಅಧ್ಯಾಯಗಳನ್ನು ತೆಗೆದು ಹಾಕುವ ಅಧಿಕಾರ ಜಂಟಿ ಸದನ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗಿದೆ ಎಂದು ಸಮರ್ಥಿಸಿಕೊಂಡಿತ್ತು.
ನಂತರ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಾಗೂ ಪ್ರತಿಭಟನಾನಿರತ ಸಂಸದರೊಂದಿಗೆ ನಡೆದಿದ್ದ ಸಭೆಯಲ್ಲಿ ವಿಪಕ್ಷಗಳ ಸದಸ್ಯರ ಭಿನ್ನಮತದ ಟಿಪ್ಪಣಿಗಳನ್ನು ಮೂಲ ಹಾಗೂ ಪೂರ್ಣ ರೂಪದಲ್ಲಿ ವರದಿಯಲ್ಲಿ ಸೇರ್ಪಡೆ ಮಾಡಲು ನಿರ್ಧರಿಸಲಾಗಿತ್ತು.
