ಪ್ರಕರಣವೊಂದರ ವಿಚಾರಣೆಗೆ ಸಹಕರಿಸಲು ನಿರಾಕರಿಸಿರುವ ಫೇಸ್‌ಬುಕ್‌ಗೆ ಭಾರತದಲ್ಲಿ ಅದರ ಚಟುವಟಿಕೆಗಳನ್ನು ನಿರ್ಬಂಧಿಸುವ ಎಚ್ಚರಿಕೆಯನ್ನು ಕರ್ನಾಟಕ ಹೈಕೋರ್ಟ್ ನೀಡಿದೆ.
ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪದ ಮೇಲೆ ಭಾರತೀಯ ಪ್ರಜೆಯನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸಿ, ಜೈಲಿನಲ್ಲಿಟ್ಟಿದ್ದಾರೆ. ಆ ಪ್ರಕರಣದ ತನಿಖೆಯನ್ನು ಕರ್ನಾಟಕ ಪೊಲೀಸರು ನಡೆಸುತ್ತಿದ್ದಾರೆ. ತನಿಖೆಗೆ ನೆರವು ನೀಡುವಂತೆ ಪೊಲೀಸರು ಫೇಸ್‌ಬುಕ್‌ಗೆ ಮನವಿ ಮಾಡಿದ್ದರು. ಆದರೆ, ಫೇಸ್‌ಬುಕ್ ಸಹಕಾರ ನೀಡಲು ನಿರಾಕರಿಸಿತ್ತು. ಇದನ್ನು ಗಮನಿಸಿರುವ ಹೈಕೋರ್ಟ್, ಫೇಸ್‌ಬುಕ್ ಚಟುವಟಿಕೆಗಳನ್ನು ನಿರ್ಬಂರ್ಧಿಸುವುದಾಗಿ ಎಚ್ಚರಿಕೆ ನೀಡಿದೆ.
ಮಂಗಳೂರು ಸಮೀಪದ ಬಿಕರ್ನಕಟ್ಟೆ ನಿವಾಸಿ ಕವಿತಾ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಪೀಠವು ವಿಚಾರಣೆ ನಡೆಸಿದೆ. “ಅಗತ್ಯ ಮಾಹಿತಿಯೊಂದಿಗೆ ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಒಂದು ವಾರದಲ್ಲಿ ಸಲ್ಲಿಸಬೇಕು” ಎಂದು ಫೇಸ್‌ಬುಕ್‌ಗೆ ನಿರ್ದೇಶಿಸಿದೆ.
“ಸುಳ್ಳು ಪ್ರಕರಣದಲ್ಲಿ ಭಾರತೀಯ ಪ್ರಜೆಯನ್ನು ಬಂಧಿಸಿರುವ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಮಾಹಿತಿಯನ್ನು ನೀಡಬೇಕು. ಮಂಗಳೂರು ಪೊಲೀಸರು ಕೂಡ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸಬೇಕು” ಎಂದು ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಜೂನ್ 22ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ ಏನು?
ಅರ್ಜಿದಾರೆ ಕವಿತಾ ಅವರ ಪತಿ ಶೈಲೇಶ್ ಕುಮಾರ್ (52) ಅವರು ಸೌದಿ ಅರೇಬಿಯಾದಲ್ಲಿ 25 ವರ್ಷಗಳಿಂದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಅನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಕೆಲವು ಪೋಸ್ಟ್‌ನಲ್ಲಿ ಸೌದಿ ಅರೇಬಿಯಾ ರಾಜನ ವಿರುದ್ಧ ಸಂದೇಶಗಳೂ ಇದ್ದವು. ಆ ಕಾರಣಕ್ಕಾಗಿ, ಸೌದಿ ಪೊಲೀಸರು ಶೈಲೇಶ್ ಅವರನ್ನು ಬಂಧಿಸಿದ್ದಾರೆ.
ಆದರೆ, ಆ ಪೋಸ್ಟ್‌ಗಳನ್ನು ತನ್ನ ಪತಿ ಶೈಲೇಶ್ ಹಾಕಿಲ್ಲ. ಅವರ ಹೆಸರಿನಲ್ಲಿ ಅಪರಿಚಿತರು ನಕಲಿ ಫೇಸ್‌ಬುಕ್ ಖಾತೆ ತೆರೆದು, ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಿದ್ದಾರೆ ಎಂದು ಕವಿತಾ ಹೇಳಿದ್ದಾರೆ. ಆ ಬಗ್ಗೆ, ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಉತ್ತರಾಖಂಡದಲ್ಲಿ ‘ಕೋಮುವಾದಿ’ ಮಹಾಪಂಚಾಯತ್; ಅನುಮತಿ ನೀಡದಂತೆ ನಿವೃತ್ತ ಅಧಿಕಾರಿಗಳ ಒತ್ತಾಯ
ತನಿಖೆ ಕೈಗೆತ್ತಿಕೊಂಡಿರುವ ಮಂಗಳೂರು ಪೊಲೀಸರು ಫೇಸ್‌ಬುಕ್‌ಗೆ ಪತ್ರ ಬರೆದು ನಕಲಿ ಫೇಸ್‌ಬುಕ್ ಖಾತೆ ತೆರೆದಿರುವ ಬಗ್ಗೆ ಮಾಹಿತಿ ಕೇಳಿದ್ದರು. ಆದರೆ, ಫೇಸ್‌ಬುಕ್ ಪೊಲೀಸರಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2021ರಲ್ಲಿ, ಅರ್ಜಿದಾರರು ತನಿಖೆಯ ವಿಳಂಬವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಕವಿತಾ ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದರು.