ರಾಜ್ಯದಲ್ಲಿ ಕೊಪ್ಪಳ, ಹಾಸನ, ಹಾವೇರಿ, ಮಂಡ್ಯ, ಚಾಮರಾಜನಗರ, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪಿಸಲಾಗಿದ್ದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರ ತೀರ್ಮಾನಿಸಿರುವ ಕ್ರಮವನ್ನು ಕೂಡಲೇ ಹಿಂಪಡೆಯಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ರಾಯಚೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.
“9 ವಿವಿಗಳನ್ನು ಮುಚ್ಚುವ ಸರ್ಕಾರದ ಈ ಅವೈಜ್ಞಾನಿಕ ನಡೆಯು ಅಕ್ಷಮ್ಯ ಅಪರಾಧವಾಗಿದೆ. 9 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಬೋಧಕರು ಹಾಗೂ ಇತರೆ ಸಿಬ್ಬಂದಿಗಳ ಹೊಣೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಾನವಾಗಿ ಹೊತ್ತುಕೊಳ್ಳಬೇಕು” ಎಂದು ಕಿಡಿಕಾರಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ಜಿ ವೀರೇಶ್ ಮಾತನಾಡಿ, “ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಜಮೀನಿನ ವೆಚ್ಚ ಬಿಟ್ಟು 342 ಕೋಟಿ ರೂ. ಅಂದಾಜು ಮೊತ್ತ ತಗುಲಲಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವೇತನ, ಮೂಲ ಸೌಕರ್ಯ, ಸಲಕರಣೆಗಳು, ವಾಹನಗಳು, ಪೀಠೋಪಕರಣ ಮತ್ತು ಇತರೆ ವಸ್ತುಗಳ ಖರೀದಿಸಲು ಅಗತ್ಯವಿರುವ ಹಣಕಾಸಿನ ನೆರವನ್ನು ಮಾರ್ಚ್ ತಿಂಗಳಲ್ಲಿ ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಪ್ರಕಟಿಸಬೇಕು. ಆ ಮೂಲಕ 9 ವಿಶ್ವವಿದ್ಯಾಲಯಗಳನ್ನು ಮತ್ತು ಅಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಸಂರಕ್ಷಿಸಬೇಕು” ಎಂದು ಮನವಿ ಮಾಡಿದರು.
“ಹಿಂದಿನ ಬಿಜೆಪಿ ಸರ್ಕಾರವು ಈ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮುನ್ನ ಯಾವುದೇ ಪೂರ್ವ ತಯಾರಿ ನಡೆಸಿರಲಿಲ್ಲ. ಇದರಿಂದ ಸ್ವಂತ ಜಾಗ ಮತ್ತು ಖಾಯಂ ಬೋಧಕರು ಮತ್ತು ಮೂಲಭೂತ ಸೌಕರ್ಯಗಳಿಲ್ಲದೆ ಸಮಸ್ಯೆಗಳು ತಾಂಡವಾಡುತ್ತಿದ್ದವು ಎಂಬ ಕಾರಣಕ್ಕೆ ತರಾತುರಿಯಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಕಾಲೇಜುಗಳನ್ನು ಸಂಯೋಜಿಸಲಾಗಿತ್ತು. ವಿದ್ಯಾರ್ಥಿಗಳನ್ನು ವರ್ಗಾಯಿಸಿ ಬಿಜೆಪಿ ಸರ್ಕಾರ ಅಲ್ಲಿಗೆ ಹಣಕಾಸಿನ ನೆರವು ನೀಡಿರಲಿಲ್ಲ” ಎಂದು ಆರೋಪಿಸಿದರು.
“ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಈಗಾಗಲೇ ಸ್ಥಾಪನೆಯಾಗಿ ತಳವೂರಿದ್ದ ವಿಶ್ವವಿದ್ಯಾಲಯಗಳನ್ನು ವಿಭಜಿಸಿ ಅಧ್ಯಯನಕ್ಕೆಂದು ಬರುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಯೂ ಇಳಿಮುಖವಾಗಿ ವಿಶ್ವವಿದ್ಯಾಲಯಗಳ ಆರ್ಥಿಕ ಸಂಪನ್ಮೂಲಕ್ಕೆ ಪೆಟ್ಟು ಬಿದ್ದು ಪ್ರಾಧ್ಯಾಪಕರ ವೇತನ ಪಾವತಿಸದೇ, ಸರ್ಕಾರ ಅನುದಾನವನ್ನೆ ನೀಡದೆ ಹಣಕಾಸು ಮೂಲವನ್ನು ಸೃಷ್ಟಿಸಿಕೊಳ್ಳಲು ವಿಶ್ವವಿದ್ಯಾಲಯಗಳ ಮೇಲೆ ಒತ್ತಡ ಹೇರಲಾಯಿತು. ಹಿಂದಿನ ಬಿಜೆಪಿ ಸರ್ಕಾರ ಕೇಂದ್ರದ ಒತ್ತಡಕ್ಕೆ ಮಣಿದು ಖಾಸಗೀಕರಿಸುವ ಭಾಗವಾಗಿತ್ತು” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಮುಡಾ ಪ್ರಕರಣ ತನಿಖೆ ಎದುರಿಸಲು ಸಿದ್ಧ: ಕುಮಾರ್ ನಾಯಕ
ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರಗಳು ತಮ್ಮ ಪ್ರತಿಷ್ಠೆಗಾಗಿ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿವೆ. ರಾಜಕೀಯ ಪಕ್ಷಗಳ ಸೈದ್ಧಾಂತಿಕ ವೈರತ್ವದ ಪೈಪೋಟಿಗೆ ಸಿಕ್ಕಿ ಒಟ್ಟು ಶಿಕ್ಷಣ ವ್ಯವಸ್ಥೆ ಅಧ್ವಾನವಾಗಿದೆ ಎಂದು ಕಟುವಾಗಿ ಟೀಕಿಸಿದರು.
