ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿದೆ.
ವಿಮಾನ ನಿಲ್ದಾಣದ ಒಳಗಿನ ತಪಾಸಣೆ ಪ್ರದೇಶದಲ್ಲಿ (ಚೆಕ್-ಇನ್) ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕಕಾರಿ ವಾತಾವರಣ ನಿರ್ಮಾಣವಾಗಿತ್ತು. ವಿಮಾನ ಹತ್ತಲು ತೆರಳುತ್ತಿದ್ದ ಪ್ರಯಾಣಿಕರು ಭೀತಿಗೆ ಒಳಗಾಗಿದ್ದರು. ಮೂರು ಅಗ್ನಿಶಾಮಕ ದಳಗಳು, ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲು ಯಶಸ್ವಿಯಾಗಿದ್ದಾರೆ.
ರಾತ್ರಿ 9:12ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ರಾತ್ರಿ 9:40ರ ವೇಳೆಗೆ ಸಂಪೂರ್ಣವಾಗಿ ನಂದಿಸಲಾಗಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಈ ದುಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ʻಹವಾನಿಯಂತ್ರಣ ವ್ಯವಸ್ಥೆಯಲ್ಲಿ ಕಾಣಿಸಿಕೊಂಡ ದೋಷವೇ ಬೆಂಕಿ ಅವಘಡಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ನಿರ್ಧಿಷ್ಟ ಕಾರಣ ತನಿಖೆಯ ನಂತರವಷ್ಟೇ ತಿಳಿಯಲಿದೆ ಎಂದು ತುರ್ತು ಸೇವೆ, ಸುರಕ್ಷತೆ ಸಚಿವ ಸುಜಿತ್ ಬೋಸ್ ತಿಳಿಸಿದ್ದಾರೆ. ಈ ಕುರಿತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಕಾರ (ಎಎಐ)ತನಿಖೆ ಪ್ರಾರಂಭಿಸಿದೆ.
ಈ ಸುದ್ದಿ ಓದಿದ್ದೀರಾ?: ಗುಜರಾತ್ | ಉದ್ಘಾಟನೆಗೂ ಮುನ್ನವೇ ಮುರಿದು ಬಿತ್ತು ಸೇತುವೆ
ಬೆಂಕಿ ಅವಘಡದಿಂದಾಗಿ ಸುಮಾರು 1 ಗಂಟೆ ಕಾಲ ಪ್ರಯಾಣಿಕರು ವಿಮಾನ ನಿಲ್ದಾಣ ಪ್ರವೇಶಿಸುವುದನ್ನು ತಡೆಯಲಾಗಿತ್ತು. ಕೆಲ ವಿಮಾನಗಳ ಹಾರಾಟ ಕೂಡ ವಿಳಂಬವಾಯಿತು. ರಾತ್ರಿ 10.30ಕ್ಕೆ ಚೆಕ್-ಇನ್ ಸೇವೆ ಪುನರಾರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.