ಸದೃಢ ಆರೋಗ್ಯಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯಕವಾಗಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ (ದಿಶಾ) ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ನೆಹರೂ ಯುವ ಕೇಂದ್ರ ಹಾಗೂ ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಇಲ್ಲಿಯ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ʼಕ್ರೀಡೆಗಳು ದೇಹಕ್ಕೆ ವ್ಯಾಯಾಮ ನೀಡುತ್ತವೆ. ಮಾನಸಿಕ ಒತ್ತಡ ದೂರ ಮಾಡುತ್ತವೆ. ಮನಸ್ಸನ್ನು ಉಲ್ಲಸಿತಗೊಳಿಸುತ್ತವೆʼ ಎಂದು ತಿಳಿಸಿದರು.
ʼಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಯುವಕರು ಮೊಬೈಲ್‍ನಲ್ಲಿ ತಲ್ಲೀನರಾಗುತ್ತಿದ್ದು, ಕ್ರೀಡಾ ಚಟುವಟಿಕೆಗಳಿಂದ ವಿಮುಖರಾಗುತ್ತಿದ್ದಾರೆ. ಆಲಸ್ಯ, ಸೋಮಾರಿತನ ಅನೇಕ ರೋಗಿಗಳಿಗೆ ಕಾರಣವಾಗಲಿವೆ. ಹೀಗಾಗಿ ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ಕ್ರೀಡೆ ಪ್ರತಿಯೊಬ್ಬರ ನಿತ್ಯ ಜೀವನದ ಭಾಗವಾಗಬೇಕು. ಜಿಲ್ಲಾಮಟ್ಟದಲ್ಲಿ ವಿಜೇತರಾಗುವ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲೂ ಪ್ರತಿಭೆ ಪ್ರದರ್ಶಿಸಿ, ಜಿಲ್ಲೆಗೆ ಕೀರ್ತಿ ತರಬೇಕುʼ ಎಂದರು.
ʼರಾಷ್ಟ್ರಮಟ್ಟದ ಯುವ ಪ್ರಶಸ್ತಿ ಪುರಸ್ಕೃತ ಓಂಪ್ರಕಾಶ ರೊಟ್ಟೆ ಮಾತನಾಡಿ, ʼಉತ್ತಮ ಆರೋಗ್ಯ ಕಾಪಾಡುವಲ್ಲಿ ಆಹಾರದ ಪಾತ್ರ ಬಹುಮುಖ್ಯವಾಗಿದೆ. ಹೀಗಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು. ಜಂಕ್ ಆಹಾರದಿಂದ ದೂರವಿರಬೇಕುʼ ಕಿವಿಮಾತು ಹೇಳಿದರು.

ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ ಗಣಗೊಂಡ ಅಧ್ಯಕ್ಷತೆ ವಹಿಸಿದ್ದರು. ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರಕುಮಾರ ಗೋರಮೆ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ.ಪ್ರಭುಲಿಂಗ ಬಿರಾದಾರ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಸುಬ್ರಹ್ಮಣ್ಯಂ ಸಿ, ವಾಲಿಬಾಲ್ ತರಬೇತುದಾರ ಜೈಪ್ರಕಾಶ, ರೆಫ್ರಿ ಬಾಲಸುಬ್ರಹ್ಮಣಿಯನ್, ಅರವಿಂದ, ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ಮುಬಾರಕ್ ಮಂದಕನಳ್ಳಿ, ಸೋಮನಾಥ, ಸಚಿನ್, ಶ್ರೀಕಾಂತ, ಉದಯಕುಮಾರ, ಆತಿಶ್ ಇದ್ದರು. ಲಕ್ಷ್ಮಣ ನಿರೂಪಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ದಲಿತ ವಿದ್ಯಾರ್ಥಿ ಪರಿಷತ್ : ಭಾಲ್ಕಿ ತಾಲ್ಲೂಕು ನೂತನ ಪದಾಧಿಕಾರಿಗಳ ಆಯ್ಕೆ
ಜಿಲ್ಲಾಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ : ಯುವಕರ ವಿಭಾಗ : ವಾಲಿಬಾಲ್- ಚಿಟಗುಪ್ಪದ ಸುಭಾಷ್‍ಚಂದ್ರ ಬೋಸ್ ಯುವಕ ಸಂಘ (ಪ್ರಥಮ), ವೇಟ್ ಲಿಫ್ಟಿಂಗ್- ಶಾದುಲ್ ಶಾ (ಪ್ರಥಮ), ಬ್ಯಾಡ್ಮಿಂಟನ್- ಲಕ್ಷ್ಮಿಕಾಂತ (ಪ್ರಥಮ) ಹಾಗೂ ಯುವತಿಯರ ವಿಭಾಗ: ಕೊಕ್ಕೋ- ಚಿಟಗುಪ್ಪದ ಕ್ವಿನ್ಸ್ ಯುವತಿ ಮಂಡಳ (ಪ್ರಥಮ), 100 ಮೀ. ಓಟದ ಸ್ಪರ್ಧೆ- ಪೂಜಾ ರಮೇಶ (ಪ್ರಥಮ), ಸ್ಲೋ ಸೈಕ್ಲಿಂಗ್- ಚೇತನಾ (ಪ್ರಥಮ)