ದಲಿತ ಚಳುವಳಿಯ ಹೋರಾಟಗಾರರ ಹೆಜ್ಜೆ ಗುರುತುಗಳನ್ನು ಅವಲೋಕಿಸಿದಾಗ ಬುದ್ಧ-ಬಸವ-ಫುಲೆ-ಅಂಬೇಡ್ಕರ್ ರಂತಹ ಮಹಾತ್ಮರ ಜೀವನ ಹಾಗೂ ವಿಚಾರಧಾರೆಗಳು, ಲಕ್ಷ್ಮೀನಾರಾಯಣ ನಾಗವಾರ ರವರ ತಿಳುವಳಿಕೆಯನ್ನು ವಿಸ್ತರಿಸಿದವು ಎಂದು ಜವಳಿ ಸಕ್ಕರೆ ಅಭಿವೃದ್ಧಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ʼದಲಿತ ಚಳುವಳಿಯ ಹಾದಿಯಲ್ಲಿ ಲಕ್ಷ್ಮೀ ನಾರಾಯಣ್ ನಾಗವಾರರ ಹೆಜ್ಜೆ ಗುರುತುಗಳುʼ ನುಡಿನಮನ ಕಾರ್ಯಕ್ರಮದಲ್ಲಿ ಶಿಕ್ಷಣ ವಿದ್ಯಾರ್ಥಿ ಯುವಜನ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
“ದಲಿತ ಚಳುವಳಿಯ ಸಂಸ್ಥಾಪಕಪ್ರೊ. ಬಿ. ಕೃಷ್ಣಪ್ಪ, ದಲಿತ ಕವಿ ಡಾ. ಸಿದ್ದಲಿಂಗಯ್ಯ, ಸಾಹಿತಿ ದೇವನೂರು ಮಹದೇವ ಹಾಗೂ ಪ್ರಬುದ್ಧ ರಾಜಕಾರಣಿ ಬಿ ಬಸವಲಿಂಗಪ್ಪ ಹೀಗೆ ಹಲವಾರು ಸಾಹಿತಿಗಳು, ಚಿಂತಕರು ಮತ್ತು ಪ್ರಗತಿ ಪರರ ಮಾರ್ಗದರ್ಶನದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದಲ್ಲಿ ಗುರುತಿಸಿಕೊಂಡು ರಾಜ್ಯದ ಮೂಲೆ ಮೂಲೆಗಳಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿದರು. ದಲಿತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಪದಾಧಿಕಾರಿಯಾಗಿ ಸುಮಾರು ವರ್ಷಗಳ ಕಾಲ ರಾಜ್ಯವನ್ನು ಸುತ್ತಿ ವಿದ್ಯಾರ್ಥಿಗಳನ್ನು ಸಂಘಟಿಸಿ, ಸಂಘಟನಾ ಚತುರನಾಗಿ ಹೊರಹೊಮ್ಮಿದರು” ಎಂದರು.
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, “ದಲಿತ ಜನಾಂಗವನ್ನು ಮೊದಲ ಸಾಲಿಗೆ ತರಬೇಕು, ಶೋಷಿತ ಸಮುದಾಯಗಳಿಗೆ ಎಲ್ಲಾ ಹಕ್ಕು ಬಾದ್ಯತೆಗಳು ಸಿಗಬೇಕು. ಮನುಷ್ಯ ಜಾತಿ ತಾನೊಂದೇ ವಲಂ ಎನ್ನುವ ಪಂಪನ ಮಾತಿನಂತೆ ಮನುಷ್ಯ ಜಾತಿ ಒಂದೇ ಎಂದು ಹೋರಾಟದ ಹೆಜ್ಜೆ ಹಾಕಿದವರು ಲಕ್ಷ್ಮೀನಾರಯಣ ನಾಗವಾರ. ಆದ್ದರಿಂದ ಇವರನ್ನು ಸಂಘಟನಾ ಚೇತನ ಎಂದು ಹೇಳಬೇಕು. ಬುದ್ಧನ ಅನುಯಾಯಿಯಾಗಿ, ಬುದ್ಧನ ಸಿದ್ಧಾಂತ ಸಂದೇಶಗಳು ಅವರ ಮದುವೆಯಲ್ಲಿ ಮಂತ್ರವಾಗಿದ್ದವು. ಬುದ್ಧನ ಸಂದೇಶವನ್ನು ಓದುತ್ತಾ ಅಳವಡಿಸಿಕೊಳ್ಳುತ್ತಾ ತನ್ನ ಸಂಸಾರದ ಬದುಕಿಗೆ ಹೆಜ್ಜೆ ಇಟ್ಟಿದ್ದರು. ದಸಂಸ ಚಳುವಳಿಯ ಎಲ್ಲಾ ರಾಜ್ಯ ಮುಖಂಡರು, ರೈತ ಸಂಘಟನೆ ರಾಜ್ಯ ಮುಖಂಡರು, ಸರ್ವೋದಯ ಅಹಿಂದ ಹಾಗೂ ಇತರೆ ಸಂಘಟನೆಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು” ಎಂದು ನೆನೆದರು.
“ರಾಜ್ಯ ಸರ್ಕಾರ ಇವರ ಸೈದ್ಧಾಂತಿಕ ಹೋರಾಟದ ಬದ್ಧತೆ, ಸರಳ ಸಜ್ಜನಿಕೆಯನ್ನು ಗಮನಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ಬುದ್ದ-ಬಸವ-ಗಾಂಧಿ ಪ್ರಶಸ್ತಿ, ಬಿ.ಬಸವಲಿಂಗಪ್ಪ ಪ್ರಶಸ್ತಿ, ದಲಿತ ಚೇತನ ಪ್ರಶಸ್ತಿ, ಟಿಪ್ಪು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ” ಎಂದು ಶ್ಲಾಘಿಸಿದರು.
ಇದನ್ನು ಓದಿ: ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳಿದ್ದ ವಿಜಯಪುರದ ಇಬ್ಬರ ಸಾವು
ಕಾರ್ಯಕ್ರಮದಲ್ಲಿ ಬಸವರಾಜ ಸೂಳಿಬಾವಿ, ಲಡಾಯಿ ಪ್ರಕಾಶನ ಗದಗ, ಎಫ್.ವೈ. ದೊಡ್ಡಮನಿ, ಶೋಭಾ ಕಟ್ಟಿಮನಿ, ಡಾ. ಪ್ರಭುಗೌಡ ಲಿಂಗದಳ್ಳಿ, ಎಸ್.ಎಂ. ಪಾಟೀಲ (ಗಣಿಹಾರ), ರಮೇಶ ಆಸಂಗಿ, ರವಿ ನಾಕ್ಕೋಡಿ, ಅಭಿಷೇಕ ಚಕ್ರವರ್ತಿ, ಸಿದ್ದು ರಾಯಣ್ಣವರ, ಸಂಜು ಕಂಭಾಗಿ, ವಿನಾಯಕ ಗುಣಸಾಗರ ಅಶೋಕ ಚಲವಾದಿ ರಾವುತ ತಳಕೇರಿ, ಡಾ. ಜಾನಕಮ್ಮ ಲಕ್ಷ್ಮೀನಾರಾಯಣ ನಾಗವಾರ, ಶ್ಯಾಮರಾವ ಘಾಟಗೆ, ಚಂದ್ರಕಾಂತ, ಕೆಂಪಣ್ಣ ಸಾಗ್ಯ, ಆನೇಕಲ ವೆಂಟಕೇಶ ಮೂರ್ತಿ, ಚಂದ್ರು ಇದ್ದರು.
