ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ 702 ಜನವಸತಿಗಳ 5 ಪುರಸಭೆಗಳಿಗೆ ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕಿನ 343 ಜನವಸತಿಗಳ ಹಾಗೂ 6 ಪುರಸಭೆಗಳಿಗೆ ಕುಡಿಯುವ ನೀರು ಒದಗಿಸುವ ಡಿಬಿಒಟಿ ಯೋಜನೆ-1ಯಡಿ ಪೈಪಲೈನ್ ಆಳವಡಿಸುವ ಕಾಮಗಾರಿಗೆ ಜಿಲ್ಲಾಧಿಕಾರಿ ಟಿ ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಈ ಕುರಿತು ಪ್ರಕಟಣೆ ಹೊರಡಿಸಿದ್ದು, “ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು ಅತ್ಯಂತ ಅವಶ್ಯಕವಾಗಿರುವುದರಿಂದ ಪೈಪ್‌ಲೈನ್ ಕಾಮಗಾರಿಯನ್ನು ಭೂಮಿಯ ಆಳದಲ್ಲಿ ಅಳವಡಿಸಲಾಗುವುದರಿಂದ ಭೂಸ್ವಾಧೀನ ಪ್ರಕ್ರಿಯೆ ಅವಶ್ಯಕತೆ ಇರುವುದಿಲ್ಲ. ಆದರೆ ಕೆಲವರು ತಕರಾರು ಮಾಡಿ ಕಾಮಗಾರಿಯನ್ನು ಸ್ಥಗಿತಗೊಳಿಸುತ್ತಿದ್ದರಿಂದ ಈ ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು” ಎಂದು ಹೇಳಿದರು.
“ಗ್ರಾಮೀಣ ಜನವಸತಿಗಳಿಗೆ ನೀರು ಪೂರೈಸುವ ಹಿತದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿಗಳಿಗೆ ಸಾರ್ವಜನಿಕರಿಂದ ಅಡ್ಡಿಯಾಗದಂತೆ ನೋಡಿಕೊಂಡು ಕಾಮಗಾರಿ ಕೈಗೊಳ್ಳಬೇಕು. ಈ ಯೋಜನೆಯು ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಿದ್ದು, ಸ್ಥಳೀಯ ಸಮುದಾಯಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪ್ರಯೋಜನಕಾರಿ ಆಗಿರುವುದರಿಂದ ವಿಳಂಬ ಅಥವಾ ಹಸ್ತಕ್ಷೇಪವಿಲ್ಲದೇ ಕೆಲಸ ಮುಂದುವರೆಯುವುದು ನಿರ್ಣಾಯಕವಾಗಿದೆ” ಎಂದು ತಿಳಿಸಿದರು.
“ಯಾವುದೇ ಸ್ಥಳದಲ್ಲಿ ಯಾವುದೇ ವ್ಯಕ್ತಿ ಕಾಮಗಾರಿಗೆ ಅಡ್ಡಿಪಡಿಸುವುದು ಅಥವಾ ನಿಲ್ಲಿಸುವುದು, ಯಾರಿಗಾದರೂ ಕೆಲಸ ಮಾಡುವವರಿಗೆ ಅಡೆತಡೆ ಮಾಡುವುದು, ಕೈಯಿಂದ ಹೊಡೆದು ಗಾಯ ಮಾಡುವುದು, ಬಡಿಗೆ ಅಥವಾ ಇತರೆ ವಸ್ತುಗಳಿಂದ ಹೊಡೆಯುವುದು, ಕೆಲಸ ಮಾಡುವವರಿಗೆ ಜೀವನ ಬೆದರಿಕೆ ಹಾಕುವುದು ಕಂಡುಬಂದಲ್ಲಿ ಬಿಎನ್‌ಎಸ್ ಕಲಂ 132 ಅಡಿ ಎರಡು ವರ್ಷ ಕಾರಾವಾಸ ಅಥವಾ ದಂಡ, ಬಿಎನ್ಎಸ್ 126(1)ರನ್ವಯ ಒಂದು ತಿಂಗಳು ಶಿಕ್ಷೆ ಅಥವಾ ₹5000 ದಂಡ, ಬಿಎನ್‌ಎಸ್ ಕಲಂ 15(2) ರನ್ವಯ ಒಂದು ವರ್ಷ ಕಾರಾವಾಸ ಅಥವಾ ₹10,000 ದಂಡ ಬಿಎನ್‌ಎಸ್ ಕಲಂ 118(1)ರನ್ವಯ ಮೂರು ವರ್ಷ ಕಾರಾವಾಸ ಅಥವಾ ₹20,000 ದಂಡ, ಬಿಎನ್ ಎಸ್ ಕಲಂ 352 ರನ್ವಯ ಎರಡು 351(2) 2 ವಿಧಿಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಶೈಕ್ಷಣಿಕ ಹಂತದಲ್ಲಿಯೇ ಜೀವನದ ಗುರಿ ನಿರ್ಧರಿಸಿ : ಎಂ.ಎಸ್ ರವಿಪ್ರಕಾಶ್
“ಕಾರಾವಾಸ ಅಥವಾ ದಂಡ ಹಾಗೂ ಬಿಎನ್ಎಸ್ ಜಿಲ್ಲಾ ಪ್ರಾಧಿಕಾರವು ನಿರ್ಧರಿಸಿದಂತೆ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ನಿಯಂತ್ರಿಸುವ ನಿಯಮಗಳಿಗೆ ಅನುಸಾರ ದಂಡ ಅಥವಾ ಇತರ ಕಾನೂನು ಕ್ರಮಗಳು ಒಳಗೊಂಡಿರುತ್ತವೆ” ಎಂದು ಹೇಳಿದರು.
“ಸಾರ್ವಜನಿಕರು ಈ ಯೋಜನೆಗೆ ಸಂಪೂರ್ಣ ಸಹಕಾರ ನೀಡಬೇಕು. ಈ ಕುರಿತು ಯಾವುದೇ ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ವಿಜಯಪುರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ” ಎಂದು ತಿಳಿಸಿದ್ದಾರೆ.