ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಕಥೆ ಆಧಾರಿತ ಸಿನಿಮಾ ‘ಡೇರ್ ಡೆವಿಲ್ ಮುಸ್ತಾಫಾ’ ಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ʻಡೇರ್ ಡೆವಿಲ್ ಮುಸ್ತಾಫಾ’ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ಪ್ರೇಮಿಗಳು ಮಾತ್ರವಲ್ಲದೆ ವಿಮರ್ಶಕರಿಂದಲೂ ಮೆಚ್ಚುಗೆ ಪಡೆದು ಯಶಸ್ವಿಯಾಗಿ 50ನೇ ದಿನದತ್ತ ದಾಪುಗಾಲಿಟ್ಟಿದೆ. ಶಶಾಂಕ್ ಸೋಗಾಲ್ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಶಿಶಿರ್ ಬೈಕಾಡಿ, ಆದಿತ್ಯ ಆಶ್ರೀ, ಸುಪ್ರೀತ್ ಭಾರದ್ವಾಜ್, ಆಶಿತ್ ಶ್ರೀವತ್ಸಾ, ಅಭಯ್, ಮಂಡ್ಯ ರಮೇಶ್, ಉಮೇಶ್, ಪ್ರೇರಣಾ ಮುಂತಾದ ಕಲಾವಿದರು ‘ಡೇರ್ಡೆವಿಲ್ ಮುಸ್ತಫಾ’ ಸಿನಿಮಾದಲ್ಲಿ ನಟಿಸಿದ್ದಾರೆ.
ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಚಿತ್ರತಂಡ, ಸಿನಿಮಾ ವೀಕ್ಷಿಸಲು ಮುಖ್ಯಮಂತ್ರಿಗಳನ್ನು ಆಹ್ವಾನಿಸಿತ್ತು. ಧರ್ಮ ಸಹಿಷ್ಣುತೆ, ಸಹಬಾಳ್ವೆ, ಕೋಮು ಸಾಮರಸ್ಯ ಸಾರುವ, ಸಮಭಾವದ ಪಾಠ ಹೇಳುವ ʼಡೇರ್ ಡೆವಿಲ್ ಮುಸ್ತಾಫಾʼ ಸಿನಿಮಾವನ್ನು ಜನ ಸಾಮಾನ್ಯರು, ವಿದ್ಯಾರ್ಥಿಗಳು ವೀಕ್ಷಿಸಲು ಅನುಕೂಲವಾಗುವಂತೆ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಮನವಿ ಸಲ್ಲಿಸಿತು. ಲೇಖಕ ಅನಂತ್, ನಿರ್ದೇಶಕ ಶಶಾಂಕ್ ಹಾಗೂ ಚಿಂತಕ ಪ್ರೊ.ನಟರಾಜ್ ಹುಳಿಯಾರ್ ಸಿಎಂ ಭೇಟಿ ವೇಳೆ ಉಪಸ್ಥಿತರಿದ್ದರು.

ಇದಲ್ಲದೆ ಕೆಲವು ದಿನಗಳ ಹಿಂದಷ್ಟೆ ʼಡೇರ್ ಡೆವಿಲ್ ಮುಸ್ತಾಫಾʼ ಸಿನಿಮಾ ತಂಡ ಮತ್ತಷ್ಟು ಪ್ರೇಕ್ಷಕರನ್ನು ಸೆಳೆಯಲು ಸಿನಿಮಾದ ಟಿಕೆಟ್ ದರವನ್ನು ಕಡಿಮೆಗೊಳಿಸಿದೆ. ಚಿತ್ರಮಂದಿರಗಳಲ್ಲಿ ಸಿನಿಮಾದ ಸಾಮಾನ್ಯ ಟಿಕೆಟ್ ದರ 50 ರೂಪಾಯಿ ಮತ್ತು ಬಾಲ್ಕನಿ ಟಿಕೆಟ್ ದರ 70 ರೂಪಾಯಿ ನಿಗದಿಪಡಿಸಲಾಗಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರವನ್ನು 99 ರೂಪಾಯಿಗೆ ಕಡಿಮೆಗೊಳಿಸಲಾಗಿದೆ. ಎಲ್ಲರಿಗೂ ಕೈಗೆಟುಕುವ ದರದಲ್ಲಿ ಎಲ್ಲರ ನೆಚ್ಚಿನ ಸಿನಿಮಾದ ಟಿಕೆಟ್ ನೀಡಲಾಗುತ್ತಿದೆ.