ಶಿವಮೊಗ್ಗ ಜಿಲ್ಲಾದ್ಯಂತ ಅಪಘಾತಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಪರಿಣಾಮ ಅಪಘಾತ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಹೊಸ ಅಭಿಯಾನವೊಂದನ್ನು ಆರಂಭಿಸಿದೆ.
ವಾಹನಗಳಿಗೆ ರಿಫ್ಲೆಕ್ಟೀವ್ ಸ್ಟಿಕರ್ ಅಂಟಿಸುವ ಅಭಿಯಾನ ಶುರು ಮಾಡಲಾಗಿದೆ. ಇದು ರಾತ್ರಿ ವೇಳೆ ಸಂಭವಿಸಬಹುದಾದ ಅಪಘಾತಗಳನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದರು. ಆನಂದಪುರ ಪೊಲೀಸ್ ಠಾಣೆ ಮುಂಭಾಗದಲ್ಲಿ ವಾಹನಗಳಿಗೆ ಪ್ರತಿಫಲಿತ ಸ್ಟಿಕರ್ ಅಂಟಿಸುವ ಮೂಲಕ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದರು.
“ಕಳೆದ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ 363 ಜನ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಇದನ್ನು ಕೂಲಂಕಷವಾಗಿ ತನಿಖೆ ಮಾಡಿದಾಗ ಈ ಅಪಘಾತಗಳೆಲ್ಲ ರಾತ್ರಿ ಸಮಯದಲ್ಲೇ ಹೆಚ್ಚು ಸಂಭವಿಸಿದ್ದು ಗಮನಕ್ಕೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ವಾಹನಗಳಿಗೆ ರಿಫ್ಲೆಕ್ಟೀವ್ ಸ್ಟಿಕರ್ ಇಲ್ಲದೆ ಇರುವುದು ಎಂದು ವರದಿಗಳು ಹೇಳಿವೆ.

ಇದರಿಂದ ಪ್ರತಿ ವಾಹನಗಳ ಹಿಂದೆ ರಿಫ್ಲೆಕ್ಟೀವ್ ಸ್ಟಿಕರ್ ಅಳವಡಿಸಿ ರಾತ್ರಿಯ ಸಮಯದಲ್ಲಿ ವಾಹನಗಳ ಅಪಘಾತವನ್ನು ತಡೆಗಟ್ಟುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ?: ಸಾಗರ | ಅಧಿಕಾರ ಕೊಟ್ಟ ಜನರ ಋಣ ತೀರಿಸುತ್ತೇನೆ: ಶಾಸಕ ಗೋಪಾಲಕೃಷ್ಣ ಬೇಳೂರು
ಈ ವೇಳೆ ಸಾಗರದ ಡಿವೈಎಸ್ಪಿ ಗೋಪಾಲ್ ಕೃಷ್ಣ ನಾಯಕ್, ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ಮತ್ತು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯುವರಾಜ್ ಕಂಬಳಿ ಮತ್ತು ಸಿಬ್ಬಂದಿ ವರ್ಗದವರು ಇದ್ದರು.

ಇದೆಲ್ಲಾ ಬರೀ ನಾಟಕ. ಪೊಲೀಸರಿಗೆ ಏನಾದರೂ ಜವಾಬ್ದಾರಿ ಇದ್ದರೆ: ಜನಗಳು ಹೈಯ್ ಭೀಮ್ ಹಾಕಿ ಗಾಡಿ ಓಡಿಸುವುದನ್ನು ನಿಲ್ಲಿಸಲಿ ಹಾಗೆಯೇ ಹಿಂದಿನ ಕಾಲದಲ್ಲಿ ಇದ್ದಂತೆ ಗಾಡಿ ದೀಪದ ಮೇಲಿನ ಅರ್ಧ ಭಾಗವನ್ನು ಕಪ್ಪು ಬಣ್ಣದಿಂದ ಮುಚ್ಚಲಿ. ಆಗ ಗಾಡಿ ಬೆಳಕು ನೆಲಕ್ಕೆ ಬೀಳುತ್ತದೆ ಎದುರಿಗೆ ಬರುವ ಸವಾರನಿಗೆ ಅಲ್ಲ.