ತಮಿಳುನಾಡಿನ ಜನರು ತ್ರಿಭಾಷ ಸೂತ್ರ ಹೇರಿಕೆ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವಂತೆ ತಮಿಳು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆಕೊಟ್ಟಿದ್ದಾರೆ. ಕೇಂದ್ರದ ರಾಜ್ಯಗಳ ಮೇಲೆ ತನ್ನ ಧೋರಣೆಯನ್ನು ಹೇರಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ಶಿಕ್ಷಣದಲ್ಲಿ ತ್ರಿಭಾಷ ಸೂತ್ರ ಜಾರಿಗೆ ತರಲು ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಲು ಮುಂದಾಗಿದೆ. ಈ ಎರಡೂ ವಿಷಯಗಳು ಕೇಂದ್ರ ಮತ್ತು ರಾಜ್ಯ ಅದರಲ್ಲೂ ದಕ್ಷಿಣ ರಾಜ್ಯಗಳ ನಡುವಿನ ವಿವಾದವಾಗಿ ಮಾರ್ಪಟ್ಟಿದೆ.ತ್ರಿಭಾಷ ಸೂತ್ರದ ಮೂಲಕ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುವುದು ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಾಡಿ ಸಂಸತ್ನಲ್ಲಿ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವನ್ನು ಕಡಿಮೆ ಮಾಡುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪಿತೂರಿ ಎಂದು ಆರೋಪಿಸಲಾಗಿದೆ.
ಕೇಂದ್ರದ ಈ ಎರಡೂ ನಡೆಗಳ ವಿರುದ್ಧ ತಮಿಳುನಾಡು ಸರ್ಕಾರ ಭಾರೀ ಹೋರಾಟ ನಡೆಸುತ್ತಿದೆ. ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಕೇಂದ್ರದ ಹುನ್ನಾರವನ್ನು ಬಿಚ್ಚಿಡುತ್ತಿದ್ದಾರೆ. ಶುಕ್ರವಾರ, ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸ್ಟಾಲಿನ್, ಕೇಂದ್ರ ಸರ್ಕಾರದ ವಿರುದ್ಧದ ಹೋರಾಟದಲ್ಲಿ ತಮಿಳು ಜನರು ಭಾಗಿಯಾಗಬೇಕೆಂದು ಕರೆಕೊಟ್ಟಿದ್ದಾರೆ.
“ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರ ಮುಂದಾಗಿದೆ. ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು ದಕ್ಷಿಣದ ರಾಜ್ಯಗಳು ಜವಾಬ್ದಾರಿಯುತ ಕ್ರಮಗಳನ್ನು ತೆಗೆದುಕೊಂಡಿವೆ. ಜನಸಂಖ್ಯೆಯನ್ನು ನಿಯಂತ್ರಿಸಿದ ಕಾರಣಕ್ಕೆ ದಕ್ಷಿಣ ರಾಜ್ಯಗಳನ್ನು ಕೇಂದ್ರವು ದಂಡಿಸಬಾರದು. ಇಂತಹ ನಿರ್ಣಯಗಳು ತಮಿಳುನಾಡಿನ ಸ್ವಾಭಿಮಾನ, ಸಾಮಾಜಿಕ ಯೋಜನೆಗಳು ಹಾಗೂ ಜನರ ಕಲ್ಯಾಣದ ಮೇಲೆ ಪರಿಣಾಮ ಬೀರುತ್ತದೆ” ಎಂದು ಸ್ಟಾಲಿನ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ‘ಗ್ಯಾರಂಟಿ ಯೋಜನೆ’ಗಳು ಚುನಾವಣಾ ಸಮಯದಲ್ಲಷ್ಟೇ ಗ್ಯಾರಂಟಿ!
“ನಾವು ಭಾಷಾ ಹೋರಾಟದ ಪ್ರವರ್ತಕರು, ಇಡೀ ರಾಷ್ಟ್ರಕ್ಕೆ ಭಾಷಾ ಹೋರಾಟದ ದಾರಿ ಹಾಕಿಕೊಟ್ಟಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿವರಿಸಲಾದ ತ್ರಿಭಾಷಾ ಸೂತ್ರವು ‘ಹಿಂದಿ ಹೇರಿಕೆ’ಯ ಹುನ್ನಾರವನ್ನು ಹೊಂದಿದೆ. ಈ ನೀತಿಯು ನಮ್ಮ ಹಕ್ಕಿನ ‘ಅನುದಾನ’ವನ್ನು ತಡೆಹಿಡಿಯುವ ಮಟ್ಟಿಗೆ ಈಗಾಗಲೇ ಪರಿಣಾಮ ಬೀರಿದೆ” ಎಂದು ಅವರು ಹೇಳಿದ್ದಾರೆ.
“ನಮ್ಮ ರಾಜ್ಯವನ್ನು ರಕ್ಷಿಸಲು ಪ್ರತಿಯೊಬ್ಬರೂ ಮುಂದೆ ಬರಬೇಕು. ಹೋರಾಟದಲ್ಲಿ ಭಾಗಿಯಾಗಬೇಕು” ಎಂದು ಸ್ಟಾಲಿನ್ ಕರೆಕೊಟ್ಟಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಅವರು ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣ ರಾಜ್ಯಗಳ ಸ್ಥಾನಗಳು ಕಡಿಮೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಅವರು ಹೇಳಿಕೆಯನ್ನು ‘ವಿಶ್ವಾಸಾರ್ಹವಲ್ಲ’ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
“ಕೇಂದ್ರ ಗೃಹ ಸಚಿವರ ಅಸ್ಪಷ್ಟ ಹೇಳಿಕೆಗಳನ್ನು ನೋಡಿದರೆ, ಅವರಿಗೆ ಸರಿಯಾದ ಮಾಹಿತಿ ಇದ್ದಂತಿಲ್ಲ. ಕ್ಷೇತ್ರ ಪುನರ್ವಿಂಗಡಣೆಯು ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡುವ ಉದ್ದೇಶ ಹೊಂದಿದೆ ಎಂಬುದು ಕಾಣುತ್ತಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.