ಈ ದಿನ ಸಂಪಾದಕೀಯ | ಯಾದಗಿರಿ ಬಾಲಕಿಯರ ಅನುಮಾನಾಸ್ಪದ ಸಾವು; ಸಂಶಯಕ್ಕೆ ತೆರೆ ಎಳೆಯಬೇಕಿದೆ ಪೊಲೀಸ್‌ ಇಲಾಖೆ

Date:

Advertisements

ಇಡೀ ಪ್ರಕರಣ ಗೋಜಲಿನ ಗೂಡಾಗಿದೆ. ಆದರೆ ಇದನ್ನು ಭೇದಿಸುವ ಕೆಲಸ ಪೊಲೀಸ್‌ ಇಲಾಖೆ ಮಾಡಬೇಕಿದೆ. ಪೊಲೀಸರ ಬೇಜವಾಬ್ದಾರಿತನ, ನಿಷ್ಪಕ್ಷಪಾತವಲ್ಲದ ನಡವಳಿಕೆಗಳು ಸಹಜವಾಗಿಯೇ ಅನುಮಾನ ಮೂಡಿಸಿದೆ. ಕನಿಷ್ಠಪಕ್ಷ ಇದು ಕೊಲೆಯೋ, ಆಕಸ್ಮಿಕ ಸಾವೋ ಎಂಬುದನ್ನಾದರೂ ಕಾಲಹರಣ ಮಾಡದೇ ಸ್ಪಷ್ಟಪಡಿಸಬೇಕಿದೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ಇಂದಿರಾನಗರದ ಅಲೆಮಾರಿ ಬುಡ್ಗಜಂಗಮ ಸಮುದಾಯಕ್ಕೆ ಸೇರಿದ ಇಬ್ಬರು ಹೆಣ್ಣುಮಕ್ಕಳ ಸಂಶಯಾಸ್ಪದ ಸಾವು ಬೆಳಕಿಗೆ ಬಂದು ಹದಿನೈದು ದಿನಗಳ ಮೇಲಾಗಿದೆ. ಆದರೆ, ಅದು ಕೊಲೆಯೇ, ಆಕಸ್ಮಿಕ ಸಾವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬಾಲಕಿಯರನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿ ಕೆರೆಗೆ ಎಸೆಯಲಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದುವರೆಗೆ ಆರೋಪಿಗಳ ಬಂಧನವಾಗಿಲ್ಲ. ಆರೋಪಿಗಳನ್ನು ಬಂಧಿಸಬೇಕು ಎಂದು ಹಲವು ಪ್ರಗತಿಪರ ಸಂಘಟನೆಗಳು ಒತ್ತಾಯಿಸಿ ಪ್ರತಿಭಟನೆ ನಡೆಸಿವೆ. ಪುಟ್ಟ ಹಳ್ಳಿಯೊಂದರಲ್ಲಿ ನಡೆದ ಈ ಸಾವಿನ ಪ್ರಕರಣವನ್ನು ಭೇದಿಸಲಾಗದಷ್ಟು ನಮ್ಮ ಪೊಲೀಸರು ಅಸಮರ್ಥರೇ ಎಂಬ ಪ್ರಶ್ನೆ ಕೇಳಬೇಕಾಗಿದೆ. ಅಥವಾ ಪ್ರಾಣ ಕಳೆದುಕೊಂಡ ಮಕ್ಕಳು ಅಲೆಮಾರಿಗಳು, ದಿಕ್ಕಿಲ್ಲದವರು, ಬಡವರು ಎಂಬ ನಿರ್ಲಕ್ಷ್ಯವೇ?

Advertisements

ಫೆ. 12ರಂದು ಚಿಂದಿ ಆಯಲು ಹೋಗಿದ್ದ 15 ಮತ್ತು 19 ವರ್ಷ ವಯೋಮಾನದ ಇಬ್ಬರು ಯುವತಿಯರು ಗುರುಮಠಕಲ್‌ನ ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆದರೆ ಕಾಣೆಯಾಗಿ 24 ಗಂಟೆ ಕಳೆಯುವುದಕ್ಕೂ ಮುನ್ನ ಅವರ ಶವಗಳು ಕೆರೆಯಲ್ಲಿ ತೇಲುತ್ತಿದ್ದವು. ಮೃತದೇಹದಲ್ಲಿ ಗಾಯದ ಗುರುತುಗಳಿದ್ದವು. ಹಾಗಾಗಿ ಕೊಲೆ ಮಾಡಿ ಕೆರೆಗೆ ಎಸೆಯಲಾಗಿದೆ ಎಂಬ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು. ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಬಾಲಕಿಯರನ್ನು ಕರೆದೊಯ್ದಿದ್ದನ್ನು ನೋಡಿರುವುದಾಗಿ ಪ್ರತ್ಯಕ್ಷದರ್ಶಿ ಹೇಳಿರುವುದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಾಣೆಯಾದ ದಿನ ಅವರ ಚಿಂದಿ ಆಯುವ ಚೀಲ, ಚಪ್ಪಲಿಗಳು ಕೆರೆದಂಡೆಯಲ್ಲಿ ಪತ್ತೆಯಾಗಿದ್ದವು. ಮರುದಿನ ಶವ ಪತ್ತೆಯಾಗಿದೆ. ಸೈದಾಪುರ ಠಾಣಾ ಪೊಲೀಸರ ವರದಿಯ ಪ್ರಕಾರ ಒಬ್ಬಾಕೆಗೆ ಮೂರ್ಛೆ ರೋಗವಿತ್ತು. ಮೂರ್ಛೆ ಬಂದು ನೀರಿಗೆ ಬಿದ್ದಿದ್ದಾಳೆ. ಜೊತೆಗಿದ್ದಾಕೆ ಆಕೆಯನ್ನು ರಕ್ಷಿಸಲು ಹೋಗಿ ಮೃತಪಟ್ಟಿದ್ದಾಳೆ.

ಇಡೀ ಪ್ರಕರಣ ಗೋಜಲಿನ ಗೂಡಾಗಿದೆ. ಆದರೆ ಇದನ್ನು ಭೇದಿಸುವ ಕೆಲಸ ಪೊಲೀಸ್‌ ಇಲಾಖೆ ಮಾಡಬೇಕಿದೆ. ಪೊಲೀಸರ ಬೇಜವಾಬ್ದಾರಿತನ, ನಿಷ್ಪಕ್ಷಪಾತವಲ್ಲದ ನಡವಳಿಕೆಗಳು ಸಹಜವಾಗಿಯೇ ಅನುಮಾನ ಮೂಡಿಸಿದೆ. ಕನಿಷ್ಠಪಕ್ಷ ಇದು ಕೊಲೆಯೋ ಆಕಸ್ಮಿಕ ಸಾವೋ ಎಂಬುದನ್ನಾದರೂ ಕಾಲಹರಣ ಮಾಡದೇ ಸ್ಪಷ್ಟಪಡಿಸಬೇಕಿದೆ. ರಾಜ್ಯ ಮಹಿಳಾ ಆಯೋಗ ಭರ್ತಿ ಹದಿನೈದು ದಿನಗಳ ನಂತರ ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡು ಪೊಲೀಸ್ ಅಧೀಕ್ಷಕರಿಗೆ ವರದಿಯನ್ನು ಕೇಳಿದೆ. ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಹಾಗೂ ಸರ್ಕಾರದ ಕಾರ್ಯದರ್ಶಿಯವರಿಗೆ ಪತ್ರ ಬರೆದು ಮೃತ ಯುವತಿಯರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಕೋರಿದ್ದಾರೆ.

ಫೆ. 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ ಹಲವಾರು ಸಂಘಟನೆಯ ಕಾರ್ಯಕರ್ತರು, ನಿರ್ಭಯಾಳಿಗೆ ಒಂದು ನ್ಯಾಯ ಅಲೆಮಾರಿಗಳಿಗೆ ಒಂದು ನ್ಯಾಯ ಆಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳೆಯರ ಪರ, ಬಡವರ ಪರ ಕಾಳಜಿ ಇರುವ ಮುಖ್ಯಮಂತ್ರಿ. ಅವರು ತಕ್ಷಣ ಈ ಅಲೆಮಾರಿ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲೆಮಾರಿಗಳು ಎಂಬ ಕಾರಣಕ್ಕೆ ಈ ಬಾಲಕಿಯರ ಸಾವು ಕ್ಷುಲ್ಲಕವಾಗಬಾರದು. ಅತ್ಯಾಚಾರಗೈದು ಕೊಲೆ ಮಾಡಿ ಬಿಸಾಕಿರುವುದು ನಿಜವೇ ಆಗಿದ್ದರೆ, ಆರೋಪಿಗಳನ್ನು ಹೆಡೆಮುರಿ ಕಟ್ಟಿ ಕಾನೂನಿನ ಅಡಿ ಶಿಕ್ಷಿಸುವ ಜವಾಬ್ದಾರಿಯನ್ನು ಸರ್ಕಾರ ಹೊರಬೇಕಿದೆ.

ಮುಖ್ಯವಾಗಿ ಅಲೆಮಾರಿಗಳು ಯಾಕೆ ಅಲೆಮಾರಿಗಳಾದರು ಎಂಬುದನ್ನು ಸರ್ಕಾರಗಳು ಯೋಚಿಸಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದವು. ಇನ್ನೂ ಎಲ್ಲ ಪ್ರಜೆಗಳಿಗೂ ಸೂರು ನೀಡುವುದಕ್ಕೆ ಯಾವ ಸರ್ಕಾರಗಳಿಗೂ ಸಾಧ್ಯವಾಗಿಲ್ಲ. ಎಷ್ಟೇ ಸಮೀಕ್ಷೆಗಳು ನಡೆದರೂ ಸೂರಿಲ್ಲದ, ವಿಳಾಸವಿಲ್ಲದ ಜನ ನಮ್ಮ ನಡುವೆಯೇ ಚಿಂದಿ ಆಯುತ್ತ, ವಸ್ತುಗಳನ್ನು ಮಾರುತ್ತ, ಊರಿಂದೂರಿಗೆ ನಡೆಯುತ್ತ ಜೀವನ ಕಳೆಯುತ್ತಿದ್ದಾರೆ. ಯಾರ ನೆರವಿನ ಹಸ್ತವೂ ಅವರ ಕಡೆ ಚಾಚಿಲ್ಲ. ಯೋಜನೆಗಳ ಮೇಲೆ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸುತ್ತಲೇ ಇದ್ದಾರೆ. ಅಲೆಮಾರಿಗಳ ಕಲ್ಯಾಣಕ್ಕೆಂದೇ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ನಿಗಮ ಏನು ಮಾಡುತ್ತಿದೆ? ಕನಿಷ್ಠ ಅಲೆಮಾರಿ ಹೆಣ್ಣುಮಕ್ಕಳಿಗೆ ಶಿಕ್ಷಣ, ಸುರಕ್ಷತೆ ನೀಡುವ ಕೆಲಸ ತುರ್ತಾಗಿ ಆಗಬೇಕಿದೆ.

ದೇಶದಲ್ಲಿ ನಿರಂತರವಾಗಿ ಹೆಣ್ಣುಮಕ್ಕಳ ಅತ್ಯಾಚಾರ ಕೊಲೆಗಳಾಗುತ್ತಿವೆ. ಭಾರೀ ಸುದ್ದಿಯಾಗಿ, ಜನಾಕ್ರೋಶಕ್ಕೆ ಭಯಗೊಂಡ ಸರ್ಕಾರಗಳು ತಕ್ಷಣ ಕಾನೂನು ಪ್ರಕ್ರಿಯೆ ತನಿಖಾ ವರದಿಗಳನ್ನು ತಯಾರಿಸುತ್ತವೆ. ಕೋರ್ಟ್‌ಗಳೂ ತ್ವರಿತವಾಗಿ ನ್ಯಾಯ ತೀರ್ಮಾನ ಮಾಡುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಕೋಲ್ಕತ್ತದ ಟ್ರೈನಿ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ. ದೇಶದಾದ್ಯಂತ ಬೀದಿಗಿಳಿದ ವೈದ್ಯರು, ರಾಜಕೀಯ ಪಕ್ಷಗಳು ಆರೋಪಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದವು. ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಐದೇ ತಿಂಗಳಲ್ಲಿ ಸಿಬಿಐ ತನಿಖೆ ನಡೆದು ಆರೋಪಿಗೆ ಜೀವಾವಧಿ ಶಿಕ್ಷೆಯ ತೀರ್ಪು ಪ್ರಕಟವಾಗಿದೆ. ಈ ಪ್ರಕರಣ ಮತ್ತು ನಡೆದ ಪ್ರತಿಭಟನೆಗಳು ತ್ವರಿತವಾಗಿ ನಡೆದ ಕಾನೂನು ಪ್ರಕ್ರಿಯೆ ಹನ್ನೆರಡು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ ಪ್ರಕರಣವನ್ನು ನೆನಪಿಗೆ ತಂದಿತ್ತು. ಒಂದೇ ವರ್ಷದಲ್ಲಿ ವಿಚಾರಣೆ ನಡೆದು ಆರು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಪ್ರಕಟವಾಗಿತ್ತು. ಆದರೆ, ಹನ್ನೆರಡು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳದ್ದು ಸಾಮೂಹಿಕ ಅತ್ಯಾಚಾರ-ಕೊಲೆ ಎಂಬುದು ಪೊಲೀಸರು, ಪೋಸ್ಟ್‌ ಮಾರ್ಟಂ ವರದಿಗಳು ಹೇಳಿದ್ದರೂ, ಸಿಐಡಿ, ಸಿಬಿಐ ತನಿಖೆ ನಡೆಸಿದರೂ ಅಪರಾಧಿಗಳು ಪತ್ತೆಯಾಗಿಲ್ಲ. ಭಾರೀ ಪ್ರತಿಭಟನೆ ನಡೆದರೂ ಸಾಕ್ಷ್ಯಾಧಾರದ ಕೊರತೆಯಿಂದ ಆ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಸಕಾಲದಲ್ಲಿ ಸಾಕ್ಷಿ ಸಂಗ್ರಹಿಸದ ಪೊಲೀಸರ ತಲೆದಂಡವೂ ಆಗಿಲ್ಲ ಎಂಬುದು ವ್ಯವಸ್ಥೆಯ ವ್ಯಂಗ್ಯ. ಮರುತನಿಖೆ ಕೋರಿದ್ದ ಅರ್ಜಿಯನ್ನೂ ವಜಾಗೊಳಿಸಿದೆ ಹೈಕೋರ್ಟ್.

ಬಹುತೇಕ ಪ್ರಕರಣಗಳಲ್ಲಿ ಸಹಜ ಎಂಬಂತೆ ಈ ಸಮಾಜ, ಪೊಲೀಸರು, ಸರ್ಕಾರ, ಕೋರ್ಟುಗಳು ನಡೆದುಕೊಳ್ಳುತ್ತಿವೆ. ಉತ್ತರಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ನಿತ್ಯವೂ ವರದಿಯಾಗುತ್ತಿದೆ. ಹಥಾರಸ್‌ ಮತ್ತು ಉನ್ನಾವೊ ಅತ್ಯಾಚಾರ ಪ್ರಕರಣಗಳು ಭಾರೀ ಪ್ರತಿಭಟನೆಯ ಕಾರಣದಿಂದಲೇ ಗಂಭೀರವಾಗಿ ಪರಿಗಣಿಸಿತ್ತು. ಉಳಿದಂತೆ ದಲಿತರು, ಆದಿವಾಸಿಗಳು, ಬಡ ವರ್ಗದ ಹೆಣ್ಣುಮಕ್ಕಳ ಮೇಲೆ ನಿತ್ಯವೂ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಒಂದು ಕಲಮಿನ ಸುದ್ದಿಯಷ್ಟೇ ಆಗಿ ಹೋಗುತ್ತಿದೆ. ಜಾರ್ಖಂಡ್‌ನಲ್ಲಿ ಎರಡು ದಿನಗಳ ಹಿಂದೆಯಷ್ಟೇ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಹದಿನೆಂಟು ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ ವರದಿಯಾಗಿದೆ.

ಪೋಕ್ಸೊದಂತಹ ಕಠಿಣ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿಯೂ ಕಾಲಮಿತಿಯಲ್ಲಿ ಕಾನೂನು ಪ್ರಕ್ರಿಯೆ ನಡೆದು ತೀರ್ಪು ನೀಡಲಾಗುತ್ತಿಲ್ಲ. ಸಮಾಜವೂ ಅಷ್ಟೇ… ಜಾತಿ, ಧರ್ಮ, ಪಕ್ಷ ನೋಡಿ ಖಂಡಿಸುವ ಕೆಟ್ಟ ಚಾಳಿಗೆ ಬಿದ್ದಿದೆ. ಇನ್ನು ಮುಖ್ಯವಾಹಿನಿಯ ಮಾಧ್ಯಮಗಳು ತಮ್ಮ ವೃತ್ತಿಧರ್ಮ, ಸಾಮಾಜಿಕ ಜವಾಬ್ದಾರಿ ಮರೆತು ಬಹಳ ವರ್ಷಗಳೇ ಆಗಿವೆ. ಈ ಎಲ್ಲದರ ನಡುವೆ ಅಲೆಮಾರಿಗಳು, ದಲಿತರು, ಹಣಬಲ, ಜಾತಿಬಲ ಇಲ್ಲದ ಕುಟುಂಬಗಳ ನೆರವಿಗೆ ಸರ್ಕಾರವೇ ನಿಲ್ಲಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X