ಅಮೆರಿಕದ ಫೆಡರಲ್ (ಸರ್ಕಾರಿ) ಏಜೆನ್ಸಿಗಳಿಗೆ ಇತ್ತೀಚೆಗೆ ನೇಮಕಗೊಂಡಿದ್ದ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಆದೇಶಕ್ಕೆ ಫೆಡರಲ್ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ ಎಂದು ವರದಿಯಾಗಿದೆ.
ಉದ್ಯೋಗಿಗಳನ್ನು ವಜಾಗೊಳಿಸಲು ಟ್ರಂಪ್‌ಗೆ ಅಮೆರಿಕ ಸರ್ಕಾರದ ದಕ್ಷತೆ ಇಲಾಖೆ (DOGE) ಮುಖ್ಯಸ್ಥ ಎಲಾನ್ ಮಸ್ಕ್ ಸಲಹೆ ನೀಡಿದ್ದರು. ಅವರ ಸಲಹೆಯಂತೆ, ನೇಮಕಗೊಂಡು ಒಂದು ವರ್ಷ ಪೂರೈಸದ, ಒಂದು ವರ್ಷಕ್ಕೂ ಕಡಿಮೆ ಅನುಭವ ಹೊಂದಿರುವ ಎಲ್ಲ ಪ್ರೊಬೇಷನರಿ ಉದ್ಯೋಗಿಗಳನ್ನು ವಜಾಗೊಳಿಸಬೇಕು ಎಂದು ಫೆಡರಲ್ ಏಜೆನ್ಸಿಗಳಿಗೆ ಟ್ರಂಪ್ ಸರ್ಕಾರ ಆದೇಶಿಸಿತ್ತು. ಆಡಳಿತ ವೆಚ್ಚವನ್ನು ಕಡಿತಗೊಳಿಸಲು ಉದ್ಯೋಗಿಗಳನ್ನು ಸಾಮೂಹಿಕ ವಜಾಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು.
ಆದರೆ, ಉದ್ಯೋಗಿಗಳನ್ನು ವಜಾಗೊಳಿಸುವ ಅಧಿಕಾರಿ ʼಅಮೆರಿಕದ ಸಿಬ್ಬಂದಿ ನಿರ್ವಹಣೆʼ ಇಲಾಖೆಗೆ ಇಲ್ಲವೆಂದು ಸ್ಯಾನ್ ಫ್ರಾನ್ಸಿಸ್ಕೋದ ಜಿಲ್ಲಾ ನ್ಯಾಯಾಧೀಶ ವಿಲಿಯಂ ಅಲ್ಸುಪ್ ಹೇಳಿದ್ದಾರೆ. ಟ್ರಂಪ್ ಅದೇಶಕ್ಕೆ ತಡೆ ನೀಡಿದ್ದಾರೆ. ಉದ್ಯೋಗಿಗಳನ್ನು ವಜಾಗೊಳಿಸುವ ವಿಚಾರವಾಗಿ ಉದ್ಯೋಗಿಗಳಿಗೆ ಕಳಿಸಲಾಗಿರುವ ಇ-ಮೇಲ್‌ಗಳನ್ನು ಹಿಂಪಡೆಯುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ರಕ್ಷಣಾ ಇಲಾಖೆಯು ತನ್ನಲ್ಲಿರುವ 5,400 ಪ್ರೊಬೇಷನರಿ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿತ್ತು. ತನ್ನ ಉದ್ಯೋಗಿಗಳಿಗೆ ವಜಾಗೊಳಿಸಿರುವುದಾಗಿ ಇ-ಮೇಲ್ ಕಳಿಸಿತ್ತು. ಆದರೆ, ಆ ಇ-ಮೇಲ್‌ಗಳನ್ನು ಕೋರ್ಟ್ ಅಮಾನ್ಯಗೊಳಿಸಿದೆ. ಉದ್ಯೋಗಿಗಳನ್ನು ಸೇವೆಯಲ್ಲಿ ಮುಂದುವರೆಸುವಂತೆಯೂ ಸೂಚಿಸಿದೆ.