ರಾಜ್ಯ ಸರ್ಕಾರ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುವ ಮೂಲಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಇದರ ವಿರುದ್ಧ ದಲಿತಪರ ಸಂಘಟನೆಗಳಿಂದ ಶೀಘ್ರವೇ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ಅನಿಲ್ ಕುಮಾರ್ ತಿಳಿಸಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “2024-25ನೇ ಸಾಲಿಗೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಗೆ ಸುಮಾರು 39,121 ಕೋಟಿ ಅನುದಾನ ಮೀಸಲಿಡಲಾಗಿತ್ತು. ಈ ಪೈಕಿ ಕೇವಲ ಶೇ.56 ರಷ್ಟು ಹಣ ಮಾತ್ರ ಖರ್ಚು ಮಾಡಲಾಗಿದೆ. ಇದರಲ್ಲಿ ಶೇ.36 ರಷ್ಟು ಅಂದರೆ 14,280 ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಇದರಲ್ಲಿ 3825 ಕೋಟಿಯನ್ನು ಗೃಹಲಕ್ಷ್ಮಿ ಯೋಜನೆಗೆ ವ್ಯಯಿಸಲಾಗಿದೆ. ಇನ್ನೂ 4057 ಕೋಟಿ ಅನುದಾನವನ್ನು ಇದೇ ಯೋಜನೆಗೆ ಮೀಸಲಿಡಲಾಗಿದೆ. ಒಟ್ಟು ಅನುದಾನದಲ್ಲಿ ಶೇ.20 ರಷ್ಟು ಮಾತ್ರ ದಲಿತರಿಗೆ ಖರ್ಚು ಮಾಡಿದೆ” ಎಂದು ಮಾಹಿತಿ ನೀಡಿದರು.
ಕಳೆದ ಬಿಜೆಪಿ ಸರ್ಕಾರ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆಯ 7ಡಿ ತಿದ್ದುಪಡಿ ಮಾಡಿ ಅನುದಾನದ ಹಣವನ್ನು ಅನ್ಯ ಯೋಜನೆಗಳಿಗೆ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿತ್ತು. ದಲಿತಪರ ಸಂಘಟನೆಗಳ ತೀವ್ರ ಹೋರಾಟದ ಬಳಿಕ 7ಡಿ ರದ್ದು ಮಾಡಿತ್ತು. ಅಂದು ಬಿಜೆಪಿ ಮಾಡಿದ ಮೋಸವನ್ನು ಪ್ರಸ್ತುತ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ದಲಿತರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರನ್ನಾಗಿ ಮಾಡಲು ಹಾಗೂ ಇತರೆ ಸಮಾಜದ ನಡುವಿನ ಅರ್ಥಿಕ ಅಸಮಾನತೆ ಕಡಿಮೆ ಮಾಡುವ ಉದ್ದೇಶದಿಂದ ಜಾರಿ ಮಾಡಲಾಗಿರುವ ಈ ಯೋಜನೆಯನ್ನು ಸರ್ಕಾರವೇ ಬುಡಮೇಲು ಮಾಡಲು ಹೊರಟಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಯಚೂರು | ಒಳ ಮೀಸಲಾತಿ ಜಾರಿಯಾಗದೇ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ; ಹೋರಾಟಕ್ಕೆ ಸಜ್ಜು
ಈ ವೇಳೆ ಜಿಲ್ಲಾಧ್ಯಕ್ಷ ಜೆ.ಅಬ್ರಾಹಂ ಹೊನ್ನಟಗಿ, ಜಯಪ್ಪ ಸಿರವಾರ್, ಜನಾರ್ಧನ ಹಳ್ಳಿಬೆಂಚಿ, ತಾಯಪ್ಪ ಹೆಗ್ಗಸನಹಳ್ಳಿ ಇದ್ದರು.
