ಬಹುನಿರೀಕ್ಷಿತ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದ್ದು, ಯೋಜನೆಯ ಲಾಭ ಪಡೆಯುತ್ತಿದ್ದಾರೆ.
“ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜೂನ್ 11ರಂದು ಮೊದಲ ದಿನ 303 ಬಸ್‌ಗಳಲ್ಲಿ 5,454 ಮಂದಿ ಮಹಿಳೆಯರು ಪ್ರಯಾಣಿಸಿದ್ದರು. ಸೋಮವಾರ ಈ ಸಂಖ್ಯೆ 25,446ಕ್ಕೆ ಏರಿದೆ, ಮೂರನೇ ದಿನದಂದು 48,722 ಮಂದಿ ಮಹಿಳೆಯರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ” ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.
“ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯಕ್ಕೆ ತೆರಳುವ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಈ ಮಾರ್ಗದಲ್ಲಿ ಎಲ್ಲ ಬಸ್ಸುಗಳು ಭರ್ತಿಯಾಗಿ ಸಂಚರಿಸುತ್ತಿವೆ. ಬೆಂಗಳೂರು, ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೋಗುವ ದೂರದ ಮಾರ್ಗದ ಬಸ್‌ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ” ಎಂದು ಹೇಳಿದ್ದಾರೆ.
ಶಕ್ತಿ ಯೋಜನೆಯ ಸದ್ಬಳಕೆ ಅಗಾಧವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಮುಖ್ಯ ಕಚೇರಿಗೆ ಪ್ರತಿಕ್ರಿಯೆಯನ್ನು ಒದಗಿಸುತ್ತಿದ್ದೇವೆ. ಹೆಚ್ಚಿನ ಬಸ್ಸುಗಳನ್ನು ಪರಿಚಯಿಸುವುದರಿಂದ ಬಸ್ಸುಗಳ ಖರೀದಿ ಮತ್ತು ಸಿಬ್ಬಂದಿ ನೇಮಕಾತಿ ಮಾಡಬೇಕಾಗುತ್ತದೆ” ಎಂದು ಅವರು ಹೇಳಿದರು.
“ಉತ್ತರ ಕರ್ನಾಟಕ ಜಿಲ್ಲೆಗಳ ಮಹಿಳಾ ಕಾರ್ಮಿಕರು ಈ ಯೋಜನೆಯ ಸೇವೆಯನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಊರಿಗೆ ಒಂದು ಸುತ್ತು ಪ್ರಯಾಣ ಮಾಡಬೇಕೆಂದಿದ್ದರೆ ₹800ರಿಂದ ₹1,000 ವ್ಯಯ ಮಾಡಬೇಕಾಗಿತ್ತು. ಇದೀಗ ಅಷ್ಟು ಹಣವನ್ನು ಉಳಿಸಲು ಸಾಧ್ಯವಾಗುತ್ತಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಪುತ್ತೂರು ವಿಭಾಗದಲ್ಲಿ ಮೊದಲ ದಿನ 341 ಟ್ರಿಪ್ ಮೂಲಕ 6,200 ಮಂದಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಸೋಮವಾರ ಮತ್ತು ಮಂಗಳವಾರ ಧರ್ಮಸ್ಥಳ, ಸುಬ್ರಹ್ಮಣ್ಯ ಮಾರ್ಗಗಳಲ್ಲಿ ಜನದಟ್ಟಣೆ ಕಂಡುಬಂದಿದೆ” ಎಂದು ಕೆಎಸ್ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿಯವರನ್ನು ಬಡವರ ವಿರೋಧಿಗಳು ಎಂದು ಕರೆಯದೆ ಬೇರೇನು ಹೇಳಬೇಕು: ಸಿದ್ದರಾಮಯ್ಯ ತರಾಟೆ
ಹಾಸನ ಮತ್ತು ಚಿಕ್ಕಮಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಕೆಎಸ್ಆರ್‌ಟಿಸಿ ಬಸ್ಸುಗಳೂ ಭರ್ತಿಯಾಗಿವೆ ಎಂದು ತಿಳಿದುಬಂದಿದೆ.
“ವಾರಾಂತ್ಯದಲ್ಲಿ ದೇವಾಲಯದಲ್ಲಿ ಭಾರೀ ಜನಸಂದಣಿ ದಾಖಲಾಗಿದೆ. ಆದರೆ, ಉಚಿತ ಬಸ್ ಸೇವೆಯಿಂದಾಗಿ ಅಲ್ಲ. ಮಂಗಳವಾರ ಬೆಳಗ್ಗೆ ನಾವು ಆಶ್ಲೇಷ ಬಲಿ ಸೇವೆಗಾಗಿ ವಿಶೇಷ ಪೂಜೆ ಆಯೋಜಿಸಿದ್ದೆವು. ಈ ವೇಳೆ ತುಂಬಾ ನೂಕುನುಗ್ಗಲು ಇತ್ತು. ಬಳಿಕ ನಿಯಮಿತ ದರ್ಶನಕ್ಕೆ ಹೆಚ್ಚಿನ ನೂಕುನುಗ್ಗಲು ಇರಲಿಲ್ಲ” ಎಂದು ಕುಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಮ್ ಸುಲ್ಲಿ ಹೇಳಿದರು.