“ಪ್ರಸ್ತುತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (SCSP) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆ (TSP) ಒದಗಿಸಿದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವುದನ್ನ ಕೂಡಲೇ ನಿಲ್ಲಿಸಬೇಕು. ಈ ಕ್ರಮವನ್ನು ರದ್ದುಗೊಳಿಸಬೇಕು” ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಬಸವರಾಜ್ ಕೌತಾಳ್ ಆಗ್ರಹಿಸಿದ್ದಾರೆ.
ಸರ್ಕಾರದ ಕ್ರಮವನ್ನ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ರಾಜ್ಯ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು ಜನರ ಪರವಾಗಿವೆ. 2013ರಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ ಜಾರಿಗೆ ಬಂದಿದೆ. ಅವತ್ತಿನಿಂದ ಇಲ್ಲಿಯವರೆಗೂ ಕೂಡ ಈ ಕಾಯ್ದೆ ನಾನಾ ಇಲಾಖೆಗಳಲ್ಲಿ ಜಾರಿಯಲ್ಲಿದೆ. 2013 ರಿಂದ 2024ರವೆಗೂ ಈ ಯೋಜನೆಗೆ ಪ್ರತಿವರ್ಷ ಸಾವಿರಾರೂ ಕೋಟಿ ನಿಗದಿ ಮಾಡುತ್ತಿದ್ದಾರೆ. 2024-2025ನೇ ಸಾಲಿನಲ್ಲಿ 39 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದರು. ಈ ಅನುದಾನದಲ್ಲಿ ವಿಶೇಷವಾಗಿ 5 ಗ್ಯಾರೆಂಟಿ ಯೋಜನೆಗಳಿಗೆ 14 ಸಾವಿರ ಕೋಟಿ ರೂಪಾಯಿಯನ್ನು ಬಳಸಿಕೊಂಡು ಈ ಕಾಯ್ದೆಯ ಮೂಲ ಆಶಯಗಳನ್ನ ನಾಶ ಮಾಡಿದ್ದಾರೆ. ಎಸ್‌ಸಿ/ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೋಸ್ಕರ ಈ ಕಾಯ್ದೆ ಬಂದಿದೆ. ಆದರೆ, ಈಗ ಇದು ದುರ್ಬಳಕೆಯಾಗುತ್ತಿದೆ. ಈ ಕಾಯ್ದೆಯಲ್ಲಿ ಆಗುತ್ತಿರುವ ದುರ್ಬಳಕೆಯನ್ನ ನಿಲ್ಲಿಸಬೇಕು” ಎಂದರು.
“ಈ ಕಾಯ್ದೆಯ ಹಣವನ್ನ ಗ್ಯಾರಂಟಿಗಳಿಗೆ ಬಳಕೆ ಮಾಡಬಾರದು. ಈ ಯೋಜನೆಗಾಗಿ ಮೀಸಲಿಟ್ಟಿದ್ದ ಹಣದ ಬಗ್ಗೆ ಸಮಗ್ರ ಅಧ್ಯಯನ, ಮರುಮೌಲ್ಯಮಾಪನವಾಗಬೇಕು. ಈ ಹಣದಿಂದ ಈ ಸಮುದಾಯಕ್ಕೆ ಎಷ್ಟರ ಮಟ್ಟಿಗೆ ಪಾಲು ಸಿಕ್ಕಿದೆ. ಈ ಹಣದಿಂದ ಈ ಸಮುದಾಯ ಅಭಿವೃದ್ಧಿ ಆಗಿದೆಯಾ? ಎಂಬ ಬಗ್ಗೆ ತಿಳಿದುಕೊಳ್ಳಬೇಕು. ಈ ಬಗ್ಗೆ ಮರುಮೌಲ್ಯಮಾಪನ ಮಾಡಿ ಶ್ವೇತಪತ್ರ ಹೊರಡಿಸಬೇಕು. 25 ರಿಂದ 30% ಹಣವನ್ನ ಎಸ್‌ಇಪಿನಲ್ಲಿ ಉನ್ನತ ಶಿಕ್ಷಣ, ಪ್ರಾಥಮಿಕ ಶಿಕ್ಷಣಕ್ಕೆ, ಹಾಸ್ಟೆಲ್‌ಗಳಿಗೆ ಮೀಸಲಿಟ್ಟು ಖರ್ಚು ಮಾಡಬೇಕು. ವಿದ್ಯಾರ್ಥಿಗಳಿಗೆ ಸರಿಯಾಗಿ ಸ್ಕಾಲರ್‌ಶಿಪ್ ಸಿಗುತ್ತಿಲ್ಲ. ಇನ್ನಿತರೆ ಹಲವಾರು ನ್ಯೂನ್ಯತೆಗಳು ಇವೆ. ಇದನ್ನ ಖಂಡಿಸುತ್ತೇವೆ. ಈ ಕಾಯ್ದೆಯ ಆಶಯ ಇರುವುದೇ, ಕಟ್ಟಕಡೆಯ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕೆಂಬ ದೃಷ್ಟಿಯಲ್ಲಿ ಈ ಕಾಯ್ದೆಯಿದೆ. ಕಟ್ಟಕಡೆಯ ವ್ಯಕ್ತಿಗಳು ಮುಖ್ಯವಾಹಿನಿಗೆ ಬರಬೇಕೆಂಬುದು ಈ ಕಾಯ್ದೆಯ ಉದ್ದೇಶವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಚಲಿಸುತ್ತಿದ್ದ ಕಾರಿಗೆ ಬೆಂಕಿ; ನಾಲ್ವರು ಅಪಾಯದಿಂದ ಪಾರು
“ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಯೇ ಈ ಕಾಯ್ದೆಯ ಮುಖ್ಯ ಉದ್ದೇಶ. ಕಳೆದ 10 ವರ್ಷದಲ್ಲಿ 2 ಲಕ್ಷದ 20 ಸಾವಿರ ಕೋಟಿಯನ್ನ ಪರಿಶಿಷ್ಟರ ಅಭಿವೃದ್ಧಿಗೆ ಹಂಚಿಕೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಇಡೀ ರಾಜ್ಯದಲ್ಲಿ ಒಂದು ಕೋಟಿ 8 ಲಕ್ಷ ಜನರ ಅಭಿವೃದ್ಧಿ ಶೂನ್ಯವಾಗಿದೆ. 101 ಎಸ್ ಸಿ, 48-52 ಎಸ್ ಟಿ ಸಾಮಾನ್ಯ ಜನರು ಸಾಲ, ಉದ್ಯೋಗ ಪಡೆದುಕೊಳ್ಳಲೂ ಸಾಧ್ಯವಾಗಿಲ್ಲ. ಎಸ್ ಸಿ / ಎಸ್ ಟಿಯಲ್ಲಿ ನಿರುದ್ಯೋಗ ಜನರಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಎಲ್ಲವನ್ನೂ ಸರಿಪಡಿಸಿ ಸಮಾಜದ ಅಭಿವೃದ್ಧಿ ಮಾಡಬೇಕು” ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ ನರಸಿಂಹಮೂರ್ತಿ ಹೇಳಿದರು.
“ಎಸ್‌ಸಿಎಸ್‌ಪಿ/ ಟಿಎಸ್‌ಪಿ ಹಣ ಪಡೆದು ಗ್ಯಾರಂಟಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗ್ಯಾರೆಂಟಿ ಯೋಜನೆಗಳಿಗೆ ಈ ಹಣ ಬಳಕೆ ಮಾಡಿಕೊಳ್ಳುತ್ತಿರುವುದು ಯಾಕೆ ಎಂಬುದು ತಿಳಿಯುತ್ತಿಲ್ಲ. ಇದರ ಅವಶ್ಯಕತೆ ಏನು ಎಂಬುದು ತಿಳಿಯುತ್ತಿಲ್ಲ. ಎಸ್‌ಸಿ/ಎಸ್‌ಟಿ ಮಹಿಳೆಯರು ಉದ್ಯೋಗ ಇಲ್ಲದೇ, ಮನೆಯಲ್ಲಿಯೇ ಉಳಿದಿದ್ದಾರೆ. ಈ ಹಣ ಬಳಕೆ ಮಾಡಿಕೊಂಡು ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಉದ್ಯೋಗ ಕೊಡಿಸುವ ಯೋಜನೆ ಮಾಡಬೇಕು. ಹಲವು ಮಕ್ಕಳಿಗೆ ಸ್ಕಾಲರ್‌ಶಿಪ್ ಹಣ ಬಂದಿಲ್ಲ” ಎಂದು ಸ್ಲಂ ಜನಾಂದೋಲನ ಮಹಾಲಕ್ಷ್ಮೀ ಹೇಳಿದರು.
ಹಕ್ಕೊತ್ತಾಯಗಳು
೧.ಎಸ್‌ಸಿಎಸ್‌ಪಿ/ ಟಿಎಸ್‌ಪಿ ಯೋಜನೆಯ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸುವುದನ್ನ ಕೂಡಲೇ ರದ್ದುಗೊಳಿಸಬೇಕು.
೨.ಎಸ್‌ಸಿಎಸ್‌ಪಿ/ ಟಿಎಸ್‌ಪಿ ಕಾಯ್ದೆಯ ಕಲಂ7ರಡಿಯನ್ನ ರದ್ದುಪಡಿಸಿದಂತೆ 7ಬಿ ಮತ್ತು 7ಸಿಗೆ ಕೂಡಾ ತಿದ್ದುಪಡಿ ಮಾಡಿ ರದ್ದುಪಡಿಸಬೇಕು.
೩.ಅನುಚ್ಛೇದ 46ರಂತೆ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಬಳಸಬೇಕೆಂಬ ಸಂವಿಧಾನದ ಆಶಯವನ್ನ ಜಾರಿಗೊಳಿಸಬೇಕು.
೪.2014ರಿಂದ 2025ರವೆಗೆ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಯೋಜನೆಯ ಅಡಿಯಲ್ಲಿ ಈಗಾಗಲೇ ಖರ್ಚಾಗಿರುವ ಹಣಕ್ಕೆ ಮೌಲ್ಯಮಾಪನ ಮಾಡಿ ಅಭಿವೃದ್ಧಿಯ ಶ್ವೇತಪತ್ರ ಹೊರಡಿಸಬೇಕು.
೫.ಎಲ್ಲ ಇಲಾಖೆಗಳ ಅಡಿಯಲ್ಲಿ ಬರುವ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಹಣವನ್ನು ಪರಿಶಿಷ್ಠರ ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಿಸಿ ಸಮುದಾಯದ ಅಭಿವೃದ್ಧಿ ಯೋಜನೆಗಳಿಗೆ ಹಂಚಿ ಜಾರಿಗೆ ತರಬೇಕು.
೬.ಪರಿಶಿಷ್ಟರ ಅಭಿವೃದ್ಧಿಗೆಂದು ನೇಮಕವಾಗಿರುವ ಅಭಿವೃದ್ಧಿ ನಿಗಮ ಮತ್ತು ಮಂಡಳಿಗಳಿಗೆ ಈಗಿರುವ ಜನಸಂಖ್ಯೆಗನುಗುಣವಾಗಿ ಅನುದಾನ ಹಂಚಿಕೆಯಾಗಬೇಕು.