17 ವರ್ಷದ ಬಾಲಕನನ್ನು ಆತನ ತಾಯಿ ಕೊಲೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ತನ್ನ ಮಗನಿಗೆ ಮತ್ತೊಂದು ವರ್ಷ ದೊಡ್ಡವನಾಗುವುದು ಇಷ್ಟವಿರಲಿಲ್ಲ. ಹೀಗಾಗಿ, ತನ್ನನ್ನು ಕೊಲ್ಲುವಂತೆ ಆತನೇ ಹೇಳಿದ್ದ. ಅವನ ಮಾತಿನಂತೆ ಕೊಲೆ ಮಾಡಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಮೆರಿಕದ ಮಿಚಿಗನ್‌ನಲ್ಲಿ ಘಟನೆ ನಡೆದಿದೆ. 39 ವರ್ಷದ ಮಹಿಳೆ ಕೇಟೀ ಲೀ ಎಂಬಾಕೆ ತನ್ನ ಮಗ ಆಸ್ಟಿನ್ ಪಿಕಾರ್ಟ್ (17) ನನ್ನು ಕೊಲೆ ಮಾಡಿದ್ದಾರೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ ಅಂತ್ಯದಲ್ಲಿ ಆಸ್ಟಿನ್‌ಗೆ 18 ವರ್ಷ ತುಂಬುತ್ತಿತ್ತು. ಆದರೆ, ಆಸ್ಟಿನ್‌ಗೆ ತಾನು ಮತ್ತೊಂದು ವರ್ಷ ದೊಡ್ಡವನಾಗುವುದು ಇಷ್ಟವಿರಲಿಲ್ಲ. ಆತ ತನ್ನನ್ನು ಕೊಲ್ಲುವಂತೆ ಕೇಳಿಕೊಂಡಿದ್ದ ಎಂದು ಹೇಳಲಾಗಿದೆ.
ಆತನನ್ನು ಕೊಲ್ಲುವ ಮುನ್ನ ಆಸ್ಟಿನ್ ಮತ್ತು ಕೇಟೇ ಲೀ ಒಟ್ಟು ಮದ್ಯ ಸೇವಿಸಿದ್ದರು. ಬಳಿಕ, ಚಾಕುವಿನಿಂದ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ತನ್ನ ಮಗನ ಮಾತಿನಂತೆ ತಾನೇ ಕೊಲೆ ಮಾಡಿದ್ದಾಗಿ ಕೇಟೇ ಲೀ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮಗನನ್ನು ಕೊಲೆ ಮಾಡಿದ ಬಳಿಕ ಕೇಟೇ ಲೀ ಅವರೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧನದ ಸಮಯದಲ್ಲಿ ತನ್ನನ್ನೂ ಕೊಲ್ಲುವಂತೆ ಮಹಿಳೆ ಬೇಡಿಕೊಂಡಳು ಎಂದು ಪೊಲೀಸರು ತಿಳಿಸಿದ್ದಾರೆ.