ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬೆನ್ನಲ್ಲೇ ನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕಲು ನಿರ್ಧಾರ ಮಾಡಿದೆ. ಅದರಂತೆ ನೈತಿಕ ಪೊಲೀಸ್‌ಗಿರಿ ತಡೆಗೆ ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಕಾರ್ಯಾರಂಭವಾಗಿದೆ.
ಸಿಸಿಬಿ ವಿಭಾಗದ ಎಸಿಪಿ ನೇತೃತ್ವದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ಕೆಲಸ ಮಾಡಲಿದ್ದು, ಸಿಎಸ್ವಿ ಇನ್ಸ್ಪೆಕ್ಟರ್ ಸೇರಿದಂತೆ ಐವರು ಸಿಬ್ಬಂದಿಯೊಂದಿಗೆ ಆ್ಯಂಟಿ ಕಮ್ಯೂನಲ್ ವಿಂಗ್ ಕಾರ್ಯಾರಂಭಿಸಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.
“ಮಂಗಳೂರು ನಗರದ ಸಿಸಿಬಿ ಎಸಿಪಿ ಉಸ್ತುವಾರಿಯಲ್ಲಿ “ಆ್ಯಂಟಿ ಕಮ್ಯುನಲ್ ವಿಂಗ್” ತಂಡ ರಚನೆ ಮಾಡಲಾಗಿದ್ದು, ನಗರದಲ್ಲಿ ನಡೆಯಬಹುದಾದ ಅನೈತಿಕ ಪೊಲೀಸ್‌ಗಿರಿ ಸಮಸ್ಯೆಯನ್ನು ನಿಭಾಯಿಸುವುದು ಇದರ ಕರ್ತವ್ಯವಾಗಿದೆ” ಎಂದು ತಿಳಿಸಿದರು.
“ಈ ಹಿಂದೆ ವರದಿಯಾಗಿರುವ ಕೋಮು ವಿಚಾರಕ್ಕೆ ಸಂಬಂಧಿಸಿದ ಎಲ್ಲ ಕೊಲೆ, ಕೊಲೆ ಪ್ರಯತ್ನ, ದೊಂಬಿ ಪ್ರಕರಣಗಳು, ನೈತಿಕ ಪೊಲೀಸ್‌ಗಿರಿ ಮತ್ತು ಗೋವುಗಳ ಕಳ್ಳತನ, ಅಕ್ರಮ ಗೋ-ಸಾಗಾಟ, ಗೋ-ವಧೆ ಮುಂತಾದ ಪ್ರಕರಣಗಳನ್ನು ಈ ವಿಂಗ್ ಪರಿಶೀಲನೆ ನಡೆಸಲಿದೆ. ಅವುಗಳಲ್ಲಿನ ಆರೋಪಿತರ ಚಲನವಲನಗಳ ಬಗ್ಗೆ ನಿತ್ಯ ನಿಗಾವಹಿಸುವುದು, ಅವರ ವಿರುದ್ಧ ಭದ್ರತಾ ಕಾಯ್ದೆಯಡಿ ಮುಚ್ಚಳಿಕೆ ಪಡೆದುಕೊಳ್ಳುವುದು, ಕೋಮು ವಿಚಾರಕ್ಕೆ ಸಂಬಂಧಪಟ್ಟಂತೆ ಕಾರ್ಯಾಚರಿಸುತ್ತಿರುವ ಎಲ್ಲ ಸಂಘಟನೆಗಳ ಬಗ್ಗೆ ಮಾಹಿತಿಯನ್ನು ಆ್ಯಂಟಿ ಕಮ್ಯುನಲ್ ವಿಂಗ್ ಸಂಗ್ರಹ ಮಾಡಲಿದೆ” ಎಂದು ಮಾಹಿತಿ ನೀಡಿದರು.
“ಯಾವುದೇ ಧರ್ಮದ ಸಂಘಟನೆಗಳು ಹಾಗೂ ಗುಂಪುಗಳು ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಫೇಸ್‌ಬುಕ್ ‘ಬ್ಯಾನ್’ ಮಾಡುತ್ತೇವೆ: ಹೈಕೋರ್ಟ್ ಎಚ್ಚರಿಕೆ
ಕೋಮು ಆಧಾರಿತ ನೈತಿಕ ಪೊಲೀಸ್‌ಗಿರಿಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಈ ಹಿಂದೆ ಸ್ವತಃ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದು, ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ನೂತನ ಪಡೆಯಾದ ಆ್ಯಂಟಿ ಕಮ್ಯೂನಲ್ ವಿಂಗ್ ಸ್ಥಾಪಿಸುವ ಅಗತ್ಯವಿದೆ ಎಂದು ಮಂಗಳೂರಿಗೆ ಭೇಟಿ ನೀಡಿದ ವೇಳೆ ಹೇಳಿದ್ದರು.
ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ರಾಜ್ಯಾದ್ಯಂತ ಅಥವಾ ಇತರ ಕೋಮು ಸೂಕ್ಷ್ಮ ಜಿಲ್ಲೆಗಳಲ್ಲಿ ಕೂಡಾ ಆರಂಭ ಮಾಡಲಾಗುತ್ತಾ ಎಂಬುವುದರ ಕುರಿತಾಗಿ ಯಾವುದೇ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ.