ಸುತ್ತಾಟ | ಜಪಾನಿನ ಫುಜಿಸಾನ್ ಶಿಖರದಲ್ಲೊಂದು ಸೂರ್ಯೋದಯ

Date:

Advertisements

ಸುಮಾರು 3,776 ಮೀಟರ್ ಎತ್ತರವಿರುವ ಮೌಂಟ್ ಫ್ಯೂಜಿ ಜಪಾನ್‌ನ ಅತಿ ಎತ್ತರದ ಪರ್ವತ ಮತ್ತು ದೇಶದ ಪ್ರತಿಷ್ಠಿತ ಪರ್ವತವೂ ಹೌದು. ಜಪಾನಿನ ಪೋಸ್ಟ್ ಕಾರ್ಡ್‌ಗಳಲ್ಲಿ ಅಮರ ಛಾಪನ್ನು ಪಡೆದಿರುವ ಫುಜಿ ಬಹು ಸುಂದರ ಪರ್ವತ. ಇದು ಟೋಕಿಯೊದಿಂದ ನೈಋತ್ಯಕ್ಕೆ ಸುಮಾರು 100 ಕಿಲೋಮೀಟರ್ ದೂರದಲ್ಲಿದೆ ಮತ್ತು ಚಾರಣಿಗರಿಗೆ ಮತ್ತು ಪರ್ವತಾರೋಹಿಗಳಿಗೆ ಜನಪ್ರಿಯವಾದ ತಾಣವಾಗಿದೆ. ಇದೊಂದು ಜ್ವಾಲಾಮುಖಿ ಪರ್ವತ.

ಜಪಾನ್ ಪುಟ್ಟ ದೇಶ, ಬಲು ಸುಂದರ ದೇಶ. ನಾವು ಹೆಚ್ಚಾಗಿ ಕೇಳುವುದೇ ಟೋಕಿಯೋದ ಬ್ಯುಸಿ ನಗರವಾಸ, ಜಪಾನಿನ ಅತೀ ವೇಗದ ಶಿಂಕೆನ್ಸೆನ್ ರೈಲು, ಕ್ಯೋಟೋದ ಐತಿಹಾಸಿಕ, ಸಾಂಸ್ಕೃತಿಕ, ಶಾಂತ ಮತ್ತು ಪರಂಪರೆಯ ಮೇರುನೋಟ, ಹಿರೋಷಿಮಾ ಮತ್ತು ನಾಗಾಸಾಕಿಯ ಕರಾಳ ಇತಿಹಾಸ. ಆದರೆ ಈ ಎಲ್ಲಕ್ಕಿಂತಲೂ ವಿಭಿನ್ನವಾಗಿಯೂ, ತೀರಾ ಆಳವಾದ ಅನುಭವವನ್ನು ಜಪಾನ್ ತೆರೆದಿಡುತ್ತದೆ—ಅದು ನನಗೆ ಅರಿವಾದದ್ದು ಮೌಂಟ್ ಫುಜಿ ಚಾರಣದ ಅವಿಸ್ಮರಣೀಯ ಕ್ಷಣಗಳಲ್ಲಿ.

ಸರಿ ಸುಮಾರು 3,776 ಮೀಟರ್ ಎತ್ತರವಿರುವ ಮೌಂಟ್ ಫ್ಯೂಜಿ ಜಪಾನ್‌ನ ಅತಿ ಎತ್ತರದ ಪರ್ವತ ಮತ್ತು ದೇಶದ ಪ್ರತಿಷ್ಠಿತ ಪರ್ವತವೂ ಹೌದು. ಜಪಾನಿನ ಪೋಸ್ಟ್ ಕಾರ್ಡ್‌ಗಳಲ್ಲಿ ಅಮರ ಛಾಪನ್ನು ಪಡೆದಿರುವ ಫುಜಿ ಬಹು ಸೌಂದರ ಪರ್ವತ. ಇದು ಟೋಕಿಯೊದಿಂದ ನೈಋತ್ಯಕ್ಕೆ ಸುಮಾರು 100 ಕಿಲೋಮೀಟರ್ ದೂರದಲ್ಲಿದೆ ಮತ್ತು ಚಾರಣಿಗಳಿಗೆ ಮತ್ತು ಪರ್ವತಾರೋಹಿಗಳಿಗೆ ಜನಪ್ರಿಯವಾದ ತಾಣವಾಗಿದೆ. ಇದೊಂದು ಜ್ವಾಲಾಮುಖಿ ಪರ್ವತ. ಇದು ಸುಮಾರು 100,000 ವರ್ಷಗಳ ಹಿಂದೆ ಪ್ರಾರಂಭವಾದ ಜ್ವಾಲಾಮುಖಿ. ಶತಮಾನಗಳಿಂದ ಈ ಜ್ವಾಲಾಮುಖಿ ಜಪಾನೀಸ್ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ ಮತ್ತು ಜಪಾನಿನ ಸಾಹಿತ್ಯ, ಸಿನಿಮಾ, ಕಲೆ, ಕಾವ್ಯ ಮತ್ತು ಕೃತಿಗಳಲ್ಲಿ ಅಮರವಾಗಿದೆ. ಮೌಂಟ್ ಫ್ಯೂಜಿ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಕೂಡ. ಪ್ರತಿ ವರ್ಷ ಲಕ್ಷಾಂತರ ಚಾರಣಿಗರನ್ನು ಆಕರ್ಷಿಸುತ್ತದೆ. ಅಂತಹ ಭವ್ಯ ಸೌಂದರ್ಯ ಮೌಂಟ್ ಫುಜಿ.

Advertisements

ಜಪಾನ್ ಬಗ್ಗೆ ಓದಿದ್ದು, ಕೇಳಿದ್ದು, ಟೀವಿಯಲ್ಲಿ ನೋಡಿದ್ದು ಬಿಟ್ಟರೆ, ಜಪಾನ್ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ಎರಡನೇ ಮಹಾಯುದ್ಧದ ಇತಿಹಾಸವಷ್ಟೇ ತಿಳಿದಿತ್ತು. ಮತ್ತೆ ಜಪಾನ್ ಬಗ್ಗೆ ಕುತೂಹಲ ಮೂಡಿಸಿದ್ದು ಜಪಾನೀಸ್ ಸಿನಿಮಾಗಳು. ಅಲ್ಲಿನ ಅತೀ ಆಧುನಿಕತೆ, ಸ್ವಚ್ಛತೆ, ಮೌನ ಕವಿದ ಪ್ರಕೃತಿ, ಶಿಸ್ತುಪಾಲಕ ಜನರು, ಅವರ ವಿಭಿನ್ನ ಉಡುಗೆ ತೊಡುಗೆ (ಕ್ಯೋಟೋದಲ್ಲಿ ಕಿಮೋನೋ ಧರಿಸಿದ ಜಪಾನಿನ ಮಹಿಳೆಯರು ಹಾಗೂ ಪುರುಷರು ಬಹು ಸಂಖ್ಯೆಯಲ್ಲಿ ಕಾಣಸಿಗುತ್ತಾರೆ), ವಿಶಿಷ್ಟ ಆಹಾರ ಪದ್ಧತಿಗಳು—ಇವೆಲ್ಲವೂ ನನ್ನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತು. ಅಲ್ಲಿನ ಪ್ರಕೃತಿ, ಜನರ ಉಡುಗೆ ತೊಡುಗೆ, ಅವರ ಆಹಾರ ಪದಾರ್ಥ ಎಲ್ಲವೂ ವಿಭಿನ್ನ. ಜಪಾನಿನ ಚಹಾ ಕುಡಿಯುವ ಪದ್ದತಿಯೇ ಬೇರೆ. ಸುಶಿ ಬಿಟ್ಟು ಕೂಡ, ಜಪಾನಿನ ಅನೇಕ ಖಾದ್ಯಗಳು ಬಹು ಪ್ರಸಿದ್ಧ. ಜೊತೆ ಜೊತೆಗೆ ಜಪಾನಿನ ಪ್ರಕೃತಿ ಸೌಂದರ್ಯವನ್ನು, ಬೆರಗಿನ ಚೆರ್ರಿ ಬ್ಲಾಸಮ್ ವೈಭವವನ್ನು ನನ್ನ ಮನಸ್ಸಿನಲ್ಲಿ ಮೂಡಿಸಿಕೊಟ್ಟಿದ್ದು, ಅಲ್ಲಿನ ಸಾಂಸ್ಕೃತಿಕ ವೈಶಿಷ್ಟ್ಯವನ್ನು ನನ್ನೊಳಗೆ ಕುತೂಹಲವಾಗಿ ಬೆಳೆಸಿದ್ದು ಕೂಡ ಜಪಾನೀಸ್ ಸಿನಿಮಾಗಳು. ಮೆಮೋಯರ್ಸ್ ಆಫ್ ಗೀಶ , ಸೆವೆನ್ ಸಮುರಾಯ್, ರಾಶೊಮನ್, ಇಕಿರು, ಲೆಟರ್ಸ್ ಫ್ರಮ್ ಈವೊ ಜಿಮಾ, ಡಿಪಾರ್ಚುರ್ಸ್ ಮುಂತಾದ ಸಿನಿಮಾಗಳು ಜಪಾನನ್ನು ವಿಭಿನ್ನ ರೀತಿಯಲ್ಲಿ ತೋರಿಸಿದ್ದವು. Geisha ಅನ್ನುವ ಪದ್ಧತಿ ಹೇಗೆ ಮಹಿಳಾ ಶೋಷಣೆಗೆ ಸಾಕ್ಷಿಯಾಗಿದೆ ಅನ್ನುವುದನ್ನೂ ಕೂಡ ಅರಿತುಕೊಂಡಿದ್ದೆ. ಜಪಾನಿನಲ್ಲಿ ಇಂದಿಗೂ ಕೂಡ ಪುರುಷ ಪ್ರಧಾನ ಸಮಾಜವೇ. ಆ ಚಿತ್ರಗಳಲ್ಲಿ ಕಂಡ ದೃಶ್ಯಗಳಲ್ಲಿ, ನೆನಪಿನಲ್ಲಿ ನಿಂತ ಸಂಭಾಷಣೆಗಳಲ್ಲಿ, ಜೀವಂತವಾಗಿದ್ದ ಭಾವನೆಗಳಲ್ಲಿ, ನಾನು ಜಪಾನಿನ ಹೊಸ ಮುಖವೊಂದನ್ನು ಕಂಡೆ ಎಂದು ಹೇಳಬಹುದು. ಜಪಾನ್ ಕೇವಲ ಒಂದು ದೇಶವಲ್ಲ, ಒಂದು ಜೀವನ ರೀತಿಯಾಗಿದೆ, ಸಂಪ್ರದಾಯ ಮತ್ತು ನವೀನತೆ ಸಮಾನಾಂತರವಾಗಿ ಸಾಗುವ ಅಪರೂಪದ ಲೋಕವಾಗಿದೆ ಎಂದು ಜಪಾನಿನ ಸಿನಿಮಾಗಳು ತೋರಿಸಿಕೊಟ್ಟಿದ್ದವು. ಇವೆಲ್ಲವೂ ಕೂಡ ಜಪಾನಿನ ಭೇಟಿ ಮಾಡಬೇಕು ಎಂದು ಮನದಲ್ಲಿ ಆಸೆಯೊಂದನ್ನು ಮೂಡಿಸಿತ್ತು.

WhatsApp Image 2025 02 28 at 7.57.22 PM

ಕೆಲವೊಮ್ಮೆ ಚಾರಣ ನೆಪ ಮಾತ್ರ, ಇನ್ನೊಂದು ಸಂಸೃತಿಯನ್ನು ಅರಿಯುವ, ಅದು ತಳವೂರಿದ ಮೂಲಗಳನ್ನು ಸವಿಯುವ, ಪರಭಾಷೆ, ಪರ ಸಂಸ್ಕೃತಿ, ಪರ ವಿಚಾರಧಾರೆಯ ಹೊಸದೊಂದು ಜಗತ್ತಿನ ಭಾಗವಾಗುವ ಅವಕಾಶ ಇಂತಹ ಪ್ರಯಾಣಗಳಿಂದ ಮಾತ್ರ ಸಾಧ್ಯ. ಆ ಸುತ್ತಾಟದ ಹಾದಿಗಳಲ್ಲಿ ಕೇವಲ ಚಾರಣ ನಡೆಯುವುದಿಲ್ಲ, ಎಷ್ಟೋ ಸಲ ಹೊಸ ಬದುಕಿನ ಪ್ರಜ್ಞೆ ಚಿಗುರುವುದು ಕೂಡ ಸಹಜ. I hike to clear my mind ಎನ್ನುವವರು ಎಷ್ಟೋ ಮಂದಿ ಇದ್ದಾರೆ.

2016ರಲ್ಲಿ ಜಪಾನ್‌ ಪ್ರವಾಸದ ಭಾಗವಾಗಿ, ಫುಜಿ ಪರ್ವತಾರೋಹಣದ ತಯಾರಿ ಮಾಡುತಿದ್ದೆ. ಜಪಾನ್ ತನ್ನ ಶಿಸ್ತು ಮತ್ತು ಸುರಕ್ಷತೆಗೆ ಪ್ರಸಿದ್ಧವಾದ ದೇಶವಾಗಿರುವುದರಿಂದ, ಇಲ್ಲಿ ಪ್ರಯಾಣಿಸುವುದು ಬಹಳ ಸುರಕ್ಷಿತ ಮತ್ತು ಏಕಾಂಗಿಯಾಗಿ ಹೈಕಿಂಗ್ ಮಾಡುವ ಪ್ರವಾಸಿಗರೂ ನಿರ್ಭಯವಾಗಿ ಪ್ರಯಾಣಿಸಬಹುದು.

ಫುಜಿ ಪರ್ವತವು 3,776 ಮೀಟರ್ ಎತ್ತರ ಹೊಂದಿದ್ದರೂ, ಸರಾಸರಿ ದೈಹಿಕ ಸಾಮರ್ಥ್ಯ ಇರುವವರು (Basic Fitness) ಯತ್ನಿಸಬಹುದು. ಇದು ಕೇವಲ ಪ್ರವಾಸಿ ತಾಣವಲ್ಲ, ಹತ್ತಲು ಸವಾಲಿನ ಪರ್ವತವೂ ಹೌದು. ಚಪ್ಪಲಿ ಧರಿಸಿ ಸುಲಭವಾಗಿ ನಡೆದಾಡಬಹುದಾದ ಹಾದಿ ಅಲ್ಲ, ಅಥವಾ ನೇರವಾಗಿ ವಾಹನದಿಂದ ತಲುಪಬಹುದಾದ ಸ್ಥಳವೂ ಅಲ್ಲ. ಹೀಗಾಗಿ, ಸಮರ್ಪಕ ತಯಾರಿ, ಉತ್ತಮ ದೈಹಿಕ ಸ್ಥಿತಿ ಮತ್ತು ಹತ್ತಲು ಅಗತ್ಯವಾದ ಮೂಲಭೂತ ತರಬೇತಿ, ಹೈಕಿಂಗ್ ಶೂ, ಹೈಕಿಂಗ್ ಪೋಲ್, ಬೆಚ್ಚನೆಯ ಜಾಕೆಟ್ ಅವಶ್ಯಕ.

ಚಾರಣದ ಸಮಯದಲ್ಲಿ ಸರಿಯಾದ ಉಡುಪು ತುಂಬಾ ಮಹತ್ವದ್ದಾಗಿದೆ. ಥರ್ಮಲ್ ಶರ್ಟ್, ಟಿ-ಶರ್ಟ್, ವಿಂಡ್‌ಸ್ಟಾಪರ್, ವಿಂಟರ್ ಡೌನ್ ಜಾಕೆಟ್, ಥರ್ಮಲ್ ಪ್ಯಾಂಟ್, ಹೈಕಿಂಗ್ ಸಾಕ್ಸ್, ಸ್ಕಾರ್ಫ್, ಕೈಗವಸುಗಳು ಮತ್ತು ವಿಂಡ್ ಶೀಟರ್ ಪ್ಯಾಕಿಂಗ್‌ನಲ್ಲಿ ಅವಶ್ಯಕ. ಶಿಖರದ ಬಳಿ ಮಳೆಯಾಗುವುದು ಸಾಮಾನ್ಯ, ಇದನ್ನು “ವಿಂಡ್ ಶವರ್” ಎಂದು ಕರೆಯಲಾಗುತ್ತದೆ. ಫುಜಿಯಲ್ಲಿ, ನೀವು ಚಾರಣ ಆರಂಭಿಸುವ ವೇಳೆ ತಾಪಮಾನ 15°C ರಷ್ಟಿದೆ. ಸ್ವಲ್ಪ ಹಾದಿ ಕಳೆದ ಮೇಲೆ ಹಗಲಿನ ವೇಳೆಯಲ್ಲಿಯೂ ಸಹ ತಾಪಮಾನವು ಸಾಮಾನ್ಯವಾಗಿ 10°C ಗಿಂತ ಕಡಿಮೆ ಇರುತ್ತದೆ. ಬೆಳಗಿನ ಜಾವ ತಾಪಮಾನವು 0°C ಮತ್ತು 4°C ನಡುವೆ ಇರುತ್ತದೆ ಮತ್ತು ಆಗಾಗ್ಗೆ ರಭಸದ ಹಿಮಗಾಳಿ ಬೀಸುತ್ತದೆ.

ಪ್ರಯಾಣದ ಆರಂಭ – ಟೋಕಿಯೋದಿಂದ ಫುಜಿಯ ಪಾದದವರೆಗೆ

ನಮ್ಮ ಪ್ರಯಾಣ ಜಪಾನಿನ ರಾಜಧಾನಿ ಟೋಕಿಯೋದಿಂದ ಆರಂಭವಾಯಿತು. ಮೊದಲು ಟೋಕಿಯೋದಿಂದ ಫುಜಿ ನಗರವನ್ನು ತಲುಪಿ, ಅಲ್ಲಿಂದ ಫುಜಿ 5ನೇ ಸ್ಟೇಷನ್ ಕಡೆಗೆ ಪ್ರಯಾಣಿಸಬೇಕು. ಈ ಚಾರಣವು ಅಲ್ಲಿ ಪ್ರಾರಂಭಗೊಳ್ಳುತ್ತದೆ. ಟೋಕಿಯೋ, ಜಪಾನಿನ ಅತ್ಯಂತ ಆಧುನಿಕ ನಗರವಾಗಿದ್ದು, ವಿಶಾಲವಾದ ರೋಡುಗಳು, ಎಲ್ಲೆಲ್ಲೂ ಬೆಳಕು, ರಾರಾಜಿಸುವ ಬಣ್ಣ ಬಣ್ಣದ ಹೊನಲು ಬೆಳಕು, ಎತ್ತರದ ಕಟ್ಟಡಗಳು, ಮತ್ತು ಕಾರ್ಯಚಟುವಟಿಕೆಯಿಂದ ಕೂಡಿದ ವಾತಾವರಣದಿಂದ ಸದಾ ಕಂಗೊಳಿಸುತ್ತಿರುತ್ತದೆ. ಆದರೆ ಫುಜಿ ಇದಕ್ಕೆ ಸಂಪೂರ್ಣ ವಿರುದ್ಧ—ಇದು ಪ್ರಕೃತಿಯ ಸೌಂದರ್ಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತದೆ. ಟೋಕಿಯೋ ನಗರದ ಕಿಕ್ಕಿರಿದ ರಸ್ತೆಗಳು, ಕಾರ್ಖಾನೆಗಳ ಹಬ್ಬಿದ ಗದ್ದಲದಿಂದ ದೂರ, ಫುಜಿಯು ತಾಜಾ ಗಾಳಿ, ಹಸಿರು ಹೊಲಗಳು, ಮತ್ತು ಶುದ್ಧ ಪರಿಸರದೊಂದಿಗೆ ಮನಸ್ಸಿಗೆ ಹೊಸ ಉಲ್ಲಾಸ ನೀಡುವಂತಹ ತಾಣ. ಪರ್ವತದ ದಾರಿ ತುಂಬಾ ದೂರವಿದ್ದರೂ, ಪರ್ವತಕ ಶಿಖರದ ಮೊದಲ ನೋಟ ನಮ್ಮನ್ನು ಇನ್ನಷ್ಟು ಉತ್ಸುಕರನ್ನಾಗಿಸಿತು.

೧೧೧ 1

ನಾನು ಆಯ್ಕೆ ಮಾಡಿಕೊಂಡ ಮಾರ್ಗವು ಜಪಾನಿನ ಫುಜಿ ಪರ್ವತವನ್ನು ಏರುವ ಅತ್ಯಂತ ಜನಪ್ರಿಯ ಮತ್ತು ಮನಮೋಹಕ ಹಾದಿಯಾದ ಯೋಶಿದಾ ಹಾದಿ (ಟ್ರೇಲ್). ಫುಜಿ ಚಾರಣಕ್ಕೆ ಪ್ರಸಿದ್ಧ ನಾಲ್ಕು ಪ್ರಮುಖ ಹಾದಿಗಳಿವೆ ಮತ್ತು ಅವುಗಳಲ್ಲಿ ಜನಪ್ರಿಯ ಮಾರ್ಗ ಯೋಶಿದಾ ಹಾದಿ.

  1. ಯೋಶಿದಾ ಹಾದಿ: ಈ ಹಾದಿ ಫುಜಿ ಪರ್ವತಕ್ಕೆ ಚಾರಣ ಮಾಡಲು ಅತ್ಯಂತ ಸುಂದರ ಮತ್ತು ಜನದಟ್ಟಣೆಯ ಹಾದಿಯಾಗಿ ಪರಿಗಣಿಸಲಾಗುತ್ತದೆ.
  2. ಫ್ಯೂಜಿನೋಮಿಯಾ ಹಾದಿ: ಈ ಮಾರ್ಗದಲ್ಲಿ ಆರೋಹಣ ಮತ್ತು ಅವರೋಹಣ ಎರಡೂ ಒಂದೇ ಹಾದಿಯಲ್ಲಿಯೇ ನಡೆಯುತ್ತವೆ. ಆದರೆ ಇದು ಅತ್ಯಂತ ಕಡಿದಾದ ಹಾದಿಯಾಗಿರುವುದರಿಂದ, ಪರ್ವತಾರೋಹಣ ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದರಲ್ಲಿ ಚಾರಣ ಮಾಡಲು ಅನುಭವದ ಅಗತ್ಯವಿದೆ.
  3. ಸುಬಾಶಿರಿ ಹಾದಿ: ಇದು ಚಾರಣದ ಕೊನೆಯ ಹಂತದಲ್ಲಿ ಯೋಶಿದಾ ಹಾದಿಯೊಂದಿಗೆ ಸೇರುವುದರಿಂದ, ಅಂತಿಮ ಹಂತದಲ್ಲಿ ಸಾಕಷ್ಟು ಜನದಟ್ಟಣೆ ಕಂಡುಬರುತ್ತದೆ.
  4. ಗೊಟೆಂಬಾ ಹಾದಿ: ಇದು ಫುಜಿ ಪರ್ವತ ಏರುವ ಅತಿ ದೀರ್ಘವಾದ ಹಾದಿ. ಜನಸಂಚಾರ ಕಡಿಮೆ ಇರುವ ಈ ಮಾರ್ಗವನ್ನು ಹತ್ತಲು 7-10 ಗಂಟೆಗಳಷ್ಟು ಸಮಯ ಬೇಕಾಗುತ್ತದೆ. ಇದಲ್ಲದೆ, ಏಳನೇ ನಿಲ್ದಾಣದವರೆಗೆ ಶೌಚಾಲಯಗಳು ಅಥವಾ ಮೌಂಟನ್ ಹಟ್‌ಗಳಿಲ್ಲ.
    ಪ್ರತಿಯೊಂದು ಹಾದಿಗೂ ತನ್ನದೇ ಆದ ವೈಶಿಷ್ಟ್ಯವಿದ್ದು, ಪ್ರಯಾಣಿಕರು ತಮ್ಮ ಅನುಭವದ ಮಟ್ಟ ಮತ್ತು ಆರಾಮದ ಆಧಾರದ ಮೇಲೆ ಆಯ್ಕೆ ಮಾಡಬಹುದು.

ಪರ್ವತಾರೋಹಣದ ಅನುಭವವನ್ನು ಇನ್ನಷ್ಟು ಸುಲಭ ಮತ್ತು ಆರಾಮದಾಯಕವಾಗಿಸಲು, ಫುಜಿ ಪರ್ವತದ ಸಮೀಪ ತಂಗುವ ಸೌಲಭ್ಯವಿದೆ. ಚಾರಣಿಗರ ತಂಗುದಾಣಗಳನ್ನು 1-2 ತಿಂಗಳ ಮುಂಚಿತವಾಗಿ ಆನ್‌ಲೈನ್ ಮೂಲಕ ಮುಂಗಡ ಕಾಯ್ದಿರಿಸ ಬೇಕಾಗುತ್ತೆ. ಈ ಪೂರ್ವ ಸಿದ್ಧತೆಗಳು ಹೈಕಿಂಗ್ ಅನುಭವವನ್ನು ಸುಗಮಗೊಳಿಸುವುದರ ಜೊತೆಗೆ, ಸುರಕ್ಷಿತ ಮತ್ತು ನೆನಪಿನಲ್ಲಿರಬಹುದಾದ ಪ್ರವಾಸಕ್ಕೆ ಸಹಕಾರಿಯಾಗುತ್ತವೆ.

WhatsApp Image 2025 02 28 at 7.57.21 PM

ಲಾಜಿಸ್ಟಿಕ್ಸ್:
ಮೌಂಟ್ ಫುಜಿ ಹತ್ತಲು ವರ್ಷಕ್ಕೆ ಕೇವಲ ಎರಡು ತಿಂಗಳು ಮಾತ್ರ ಅವಕಾಶವಿದ್ದು, ಸಾಮಾನ್ಯವಾಗಿ ಜುಲೈ ಮಧ್ಯದಿಂದ ಸೆಪ್ಟೆಂಬರ್ ಮಧ್ಯದವರೆಗೆ ಇದು ನಿರ್ದಿಷ್ಟವಾಗಿರುತ್ತದೆ. ಪ್ರತಿ ವರ್ಷ, ಹವಾಮಾನ ಪರಿಸ್ಥಿತಿಗಳನ್ನು ಆಧರಿಸಿ ನಿಖರವಾದ ದಿನಾಂಕಗಳನ್ನು ಘೋಷಿಸಲಾಗುತ್ತದೆ. ಈ ಚಾರಣ ಕಾಲದಲ್ಲಿ ಸುಮಾರು 300,000 ಪ್ರವಾಸಿಗರು ಫುಜಿಯನ್ನು ಹತ್ತಲು ಆಗಮಿಸುತ್ತಾರೆ, ಇದರಿಂದ ಅತಿಯಾದ ಜನದಟ್ಟಣೆ ಉಂಟಾಗುವುದು ಸಹಜ. ಈ ಹೆಚ್ಚುವರಿ ಸಂಖ್ಯೆಯಿಂದ ಉಂಟಾಗುವ ಜನಸಂಚಾರ ನಿಯಂತ್ರಣ ಹಾಗೂ ಪರಿಸರ ಸಂರಕ್ಷಣೆಗಾಗಿ, 2024ರಿಂದ ಜಪಾನ್ ಸರ್ಕಾರ JPY 2,000 ಕಡ್ಡಾಯ ಪ್ರವೇಶ ಶುಲ್ಕವನ್ನು ಜಾರಿ ಮಾಡಿದೆ. ಹಾಗೆಯೇ, ಪ್ರವಾಸಿಗರ ಸುರಕ್ಷತೆ ಮತ್ತು ಪರಿಸರ ಸಮತೋಲನವನ್ನು ಕಾಪಾಡಲು, ಜನಪ್ರಿಯ ಯೋಶಿದಾ ಹಾದಿಯಿಂದ ಪ್ರವೇಶಕ್ಕೆ ನಿರ್ದಿಷ್ಟ ಮಿತಿಯನ್ನು ಕೂಡ ವಿಧಿಸಲಾಗಿದೆ.

ಮೌಂಟ್ ಫುಜಿಯ ಶಿಖರವು ವರ್ಷದಾದ್ಯಂತ ಹೆಚ್ಚಿನ ಸಮಯ ಹಿಮಾವೃತವಾಗಿರುತ್ತದೆ. ಆದರೆ, ಹವಾಮಾನ ಪರಿಸ್ಥಿತಿಗಳು ತೀಕ್ಷ್ಣವಾಗಿ ಬದಲಾಗಬಹುದಾದ ಕಾರಣ, ಆಫ್-ಸೀಸನ್‌ನಲ್ಲಿ ಪರ್ವತಾರೋಹಣ ಬಹಳ ಅಪಾಯಕಾರಿ. ಇದಲ್ಲದೆ, ಆ ಕಾಲದಲ್ಲಿ ಮೌಂಟನ್ ಹುಟ್ಸ್ ಮುಚ್ಚಿರುತ್ತವೆ, ಇದರಿಂದಾಗಿ ಸುರಕ್ಷಿತವಾಗಿ ವಿಶ್ರಾಂತಿ ಪಡೆಯಲು ಅವಕಾಶವೂ ಇರುವುದಿಲ್ಲ. ನಾವು ಜುಲೈ ಅಂತ್ಯದಲ್ಲಿ ಚಾರಣ ಕೈಗೊಂಡಿದ್ದು, ಆ ವೇಳೆಗೆ ಹಿಮದ ಅಪಾಯ ಕಡಿಮೆಯಾಗಿತ್ತು, ಚಾರಣದ ಅನುಭವ ಸುಗಮವಾಗಿತ್ತು.

ಹಗಲಿನಲ್ಲಿಯೂ ಚಾರಣ ಮಾಡಬಹುದಾದರೂ, ತೀವ್ರ ಬಿಸಿಲಿನ ಕಾರಣದಿಂದ ಮತ್ತು ಯೋಶಿದಾ ಹಾದಿಗೆ ಸಂಜೆ 5:00ರಿಂದ ಮಧ್ಯರಾತ್ರಿ 2:00ರವರೆಗೆ ಪ್ರವೇಶ ನಿರ್ಬಂಧಿತವಾಗಿರುವುದರಿಂದ, ಹೆಚ್ಚಿನವರು ರಾತ್ರಿಚಾರಣವನ್ನೇ ಆಯ್ಕೆ ಮಾಡುತ್ತಾರೆ. ಹಾಗೆಯೇ ಫುಜಿಯಾ ಇನ್ನೊಂದು ಆಕರ್ಷಣೆ ಬೆಳಗಿನ ಸೂರ್ಯೋದಯ. ಶಿಖರದಿಂದ ಸೂರ್ಯೋದಯದ ಅದ್ಭುತ ಕ್ಷಣವನ್ನು ಕಾಣಲು, ನೀವು ಬೆಳಿಗ್ಗೆ 5ನೇ ಸ್ಟೇಷನ್‌ನಿಂದ ಚಾರಣ ಪ್ರಾರಂಭಿಸಿ, ಮಧ್ಯರಾತ್ರಿ ಕೆಲವು ಗಂಟೆಗಳ ಕಾಲ ವಿಶ್ರಾಂತಿ ಪಡೆಯಲು ಮೌಂಟನ್ ಹುಟ್ ಕಾಯ್ದಿರಿಸುವುದು ಉತ್ತಮ.

೨೨೨

ಬೇಸ್ ಸ್ಟೇಷನ್‌ನಿಂದ ಬೆಳಿಗ್ಗೆ ಚಾರಣ ಆರಂಭಿಸಿದರೆ, ಸುಮಾರು ಸಂಜೆ 3 ಗಂಟೆಯ ವೇಳೆಗೆ ಮೌಂಟನ್ ಹಟ್ ತಲುಪಬಹುದು. ಈ ಆಶ್ರಯದಲ್ಲಿ ಊಟದ ವ್ಯವಸ್ಥೆ, ಸ್ಲೀಪಿಂಗ್ ಬ್ಯಾಗ್, ಡಾರ್ಮಿಟರಿ ಮತ್ತು ಟಾಯ್ಲೆಟ್ ಸೇರಿದಂತೆ ಅಗತ್ಯ ಸೌಲಭ್ಯಗಳಿವೆ. ಇಲ್ಲಿ ರಾತ್ರಿ 1 ಗಂಟೆಯವರೆಗೆ ವಿಶ್ರಾಂತಿ ಪಡೆದು, ನಂತರ ಹಲ್ಲುಜ್ಜಿ, ರಿಫ್ರೆಶ್ ಆಗಿ (ಈ ಹಂತದಿಂದ ಮುಂದೆ ಟಾಯ್ಲೆಟ್ ವ್ಯವಸ್ಥೆ ಇಲ್ಲ), ಬೆಳಗಿನ 2 ಗಂಟೆಗೆ ಪುನಃ ಚಾರಣ ಪ್ರಾರಂಭಿಸಬಹುದು. ಮಧ್ಯರಾತ್ರಿಯ ತೀಕ್ಷ್ಣ ಹಿಮಗಾಳಿ, ಜ್ವಾಲಾಮುಖಿಯಿಂದ ಕೆಳಗಿಳಿದ ಸಣ್ಣ ಗುಳ್ಳೆ ಕಲ್ಲುಗಳು, ಜಾರುವ ಕಪ್ಪು ಮಿಶ್ರಿತ ಮಣ್ಣು – ಈ ಎಲ್ಲ ಅಡಚಣೆಗಳ ನಡುವೆಯೂ ಹೆಡ್ಲ್ಯಾಂಪ್‌ನ ಬೆಳಕಿನಲ್ಲಿ ದಾರಿ ಹುಡುಕುತ್ತಲೇ ಸಾಗಬೇಕಾಗುತ್ತದೆ. ಇದರ ಜೊತೆಗೆ, ಜನಸಂಚಾರವೂ ಹೆಚ್ಚಿರುವುದರಿಂದ ದಾರಿಯಲ್ಲಿ ನಿಧಾನವಾಗಿ ಹಾಗೂ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದು ಅಗತ್ಯ. ಕತ್ತಲಲ್ಲಿ ನಡಿಗೆ ಹೆಚ್ಚು ಸಮಯ ತೆಗೆದುಕೊಳ್ಳುವ ಕಾರಣ, ಸಮಯವನ್ನು ಸರಿಯಾಗಿ ನಿರ್ವಹಿಸುವುದು ಮತ್ತು ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ. ಇಲ್ಲವಾದರೆ ಒಂದೋ ಕಾಲು ತಪ್ಪಿ ಬೀಳಬಹುದು, ಅಥವಾ ಸೂರ್ಯೋದಯ ಕಾಣುವ ಕ್ಷಣ ಕಳೆದು ಹೋಗುವ ಸಾಧ್ಯತೆಯೂ ಇದೆ.

ಸುಮಾರು ಬೆಳಗಿನ 6 ಗಂಟೆಯ ಹೊತ್ತಿಗೆ, ಸೂರ್ಯೋದಯಕ್ಕೂ ಸ್ವಲ್ಪ ಮುಂಚೆ, ನಾವು ಶಿಖರವನ್ನು ತಲುಪಿದೆವು. ಆಗಸದ ಬಣ್ಣಗಳು ನಿಧಾನವಾಗಿ ಬದಲಾಗುತ್ತಾ, ಆ ಕ್ಷಣ ನಮ್ಮ ಕಣ್ಮುಂದೆ ಇದ್ದ ಅದ್ಭುತ ದೃಶ್ಯ ಮನಸ್ಸಿನೊಳಗಣದ ಎಲ್ಲ ಬಗೆಯ ಆಲೋಚನೆಗಳನ್ನೂ ಮಂಕುಗೊಳಿಸಿ, ಅಪಾರ ಆನಂದದ ಕ್ಷಣ ಸೃಷ್ಟಿಸಿತ್ತು. ರಾಶಿ ರಾಶಿಯಾಗಿ ಚೆಲ್ಲಿದ ಮೋಡಗಳ ಮಧ್ಯೆ ನಸುಕಿನ ತಣ್ಣನೆಯ ಗಾಳಿ, ಬೆಚ್ಚಗಿನ ಜಾಕೆಟಿನೊಳಗೂ ನುಸುಳುವ ಚಳಿ, ಮತ್ತು ಅದನ್ನು ಸವಿಯುತ್ತಿರುವ ಜನರ ಆನಂದಭಾವ—ಇವೆಲ್ಲವೂ ಆ ಕ್ಷಣವನ್ನು ಮರೆಯಲಾಗದ ಕ್ಷಣವನ್ನಾಗಿಸಿತ್ತು. ದಿನನಿತ್ಯ ಸೂರ್ಯನನ್ನು ನೋಡುವವರಿಗೂ, ಆ ಹೊತ್ತಿಗೆ, ಸೂರ್ಯನನ್ನು ಮೊದಲ ಬಾರಿಗೆ ಕಾಣುತ್ತಿರುವಂತಹ ಸಂಭ್ರಮ. ಅಷ್ಟು ಜನಸ್ತೋಮವೂ ಕೂಡ ಶಿಖರದ ನಿಶ್ಶಬ್ದ, ಪ್ರಬುದ್ಧ ವಾತಾವರಣ, ನಿಸರ್ಗದ ಅದ್ಭುತ ವೈಭವಕ್ಕೆ ಮೌನದ ಮಾತೃಕೆಯಾಗಿ ನಿಂತಿರುವಂತೆ ಭಾಸವಾಗುತಿತ್ತು.

೫೫೫ 1

ಜಪಾನಿನ ಅತೀ ಎತ್ತರದ ಪೋಸ್ಟ್ ಆಫೀಸ್ ಕೂಡ ಇಲ್ಲಿ ಇದೆ. ಇಲ್ಲಿಂದ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಪೋಸ್ಟ್ ಸ್ಟ್ಯಾಂಪ್ ಅಂಟಿಸಿದ ಕಾರ್ಡುಗಳನ್ನೂ ಕಳಿಸಬಹುದು. ಇಲ್ಲಿನ ಪೋಸ್ಟ್‌ಮಾರ್ಕ್ “ಫುಜಿಸಾನ್”. ಜಪಾನಿನ ಜನ ಮೌಂಟ್ ಫ್ಯೂಜಿಯನ್ನು ಬಹು ಗೌರವದಿಂದ ಕರೆಯುವ ಪದವದು. ಮೌಂಟ್ ಫ್ಯೂಜಿ ಒಂದು ನಿಷ್ಕ್ರಿಯ ಜ್ವಾಲಾಮುಖಿ ಪರ್ವತವಾಗಿದ್ದು, ಇದರ ಕುಳಿ (ಕ್ರೇಟರ್) ಯ ಪರಿಧಿಯ ಸುತ್ತಲೂ ಸುಮಾರು ಒಂದು ಗಂಟೆ ಹೈಕಿಂಗ್ ಮಾಡಲು ಕೂಡ ಅನುಮತಿ ಇದೆ. ಈ ಕ್ರೇಟರ್‌ನ ಮೇಲೆ ಎಂಟು ಶಿಖರಗಳಿದ್ದು, ಪ್ರತಿಯೊಂದರ ಮೇಲೂ ಒಂದು ಸಣ್ಣ ಬಲಿಪೀಠ ಹಾಗೂ ಬುದ್ಧನ ಪ್ರತಿಮೆಯಿದೆ. ಮೌಂಟ್ ಫ್ಯೂಜಿ ಜಪಾನಿನ ಮೂವರು ಪವಿತ್ರ ಪರ್ವತಗಳಲ್ಲಿ ಒಂದಾಗಿದ್ದು, ವಿಶಿಷ್ಟ ಭೂದೃಶ್ಯವನ್ನು ಹೊಂದಿದೆ.

ಪುಜಿ ನೋಡಲು ಬಹಳ ಆಕರ್ಷಕ ಪರ್ವತ. ಹಿಮಾವೃತ ಶಿಖರ, ಅದನ್ನು ಸುತ್ತುವ ನಿಸರ್ಗದ ನೋಟ—ಎಲ್ಲವೂ ಅತ್ಯಂತ ಮನಮೋಹಕ. ಫುಜಿಯು ಮೈಲುಗಳಷ್ಟು ದೂರದಿಂದಲೂ ಗೋಚರಿಸುವ ಪರ್ವತವಾಗಿದ್ದು, ಫ್ಯೂಜಿ ನಗರದಲ್ಲಿಯೇ ಬಹುತೇಕ ಕಡೆಗಳಿಂದ ಈ ಅದ್ಭುತ ಶಿಖರವನ್ನು ಕಾಣಬಹುದು. ಫುಜಿಯ ಶಿಖರದಿಂದ ಕಾಣುವ ಸೂರ್ಯೋದಯದ ದೃಶ್ಯ ನಿಜಕ್ಕೂ ಅನನ್ಯ. ಚಾರಣ ಪ್ರಪಂಚದಲ್ಲಿ ಅತ್ಯಂತ ಸುಂದರ ಹಾಗೂ ಅದ್ಭುತ ಸೂರ್ಯೋದಯ ಎಂದೇ ಹೆಸರುವಾಸಿ. ಬಹುಶಃ ಇಲ್ಲಿನ ನಿಸರ್ಗದ ನಿಷ್ಕಲ್ಮಶ, ಸ್ವಚ್ಛಂದ ವಾತಾವರಣ, ಮತ್ತು ಮೋಡಗಳ ಅರಮನೆಯಂತಿರುವ ಶಿಖರ ಇದನ್ನು ಮತ್ತಷ್ಟು ಮನಮೋಹಕವಾಗಿಸುತ್ತದೆ. ಆ ಕ್ಷಣದ ಸೌಂದರ್ಯವನ್ನರ್ಥಮಾಡಿಕೊಳ್ಳಲು ಶಬ್ದಗಳೇ ಸಾಲದು. ಇಂತಹ ಕ್ಷಣ, ಮನಸ್ಸಿನಲ್ಲೊಂದು ‘ಛೆ ನಾನೂ ಕವಿಯಾಗಬಾರದಿತ್ತೇ?’ ಎನ್ನುವ ಯೋಚನೆ ಬಂದೆ ಬರುತ್ತದೆ. ಅಂತಹ ಕಾವ್ಯಮಯ ಸೂರ್ಯೋದಯ ನಾವು ಕಂಡಿದ್ದು ಫುಜಿಸಾನ್ ನಲ್ಲಿ.

ಇದನ್ನೂ ಓದಿ ಸುತ್ತಾಟ | ಸಾರಮತಿಯ ಹಾದಿಯಲ್ಲಿ ಜೀವನ ಪಾಠ!

ಸುಚಿತ್ರಾ
ಸುಚಿತ್ರಾ ಎಸ್‌ ಎ
+ posts

ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುಚಿತ್ರಾ ಎಸ್‌ ಎ
ಸುಚಿತ್ರಾ ಎಸ್‌ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X