ರಾಜ್ಯ ಬಜೆಟ್‌ | ಸಿಎಂ ಸಿದ್ದರಾಮಯ್ಯ ಎದುರು 15 ಹಕ್ಕೊತ್ತಾಯಗಳನ್ನಿಟ್ಟ ಸಂಯುಕ್ತ ಹೋರಾಟ-ಕರ್ನಾಟಕ

Date:

Advertisements

ಬಜೆಟ್ ಅಧಿವೇಶನವು ಆಯವ್ಯಯದ ಮಂಡನೆಗೆ ಮಾತ್ರ ಸೀಮಿತವಾಗದೆ ಸರ್ಕಾರದ ದಿಕ್ಸೂಚಿಯಾಗಬೇಕು. ಬಿಜೆಪಿ ತಂದಿದ್ದ ಜನವಿರೋಧಿ ನೀತಿಗಳನ್ನು ರದ್ದುಗೊಳಿಸಬೇಕು. ಜನಪರ ನೀತಿಗಳನ್ನು ರೂಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸಂಯುಕ್ತ ಹೋರಾಟ – ಕರ್ನಾಟಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. “ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಮತ್ತು ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಅನೇಕ ಜನ ವಿರೋಧಿ ನೀತಿಗಳನ್ನು ಜಾರಿಗೆ ತಂದಿದೆ. ಆ ನೀತಿಗಳಿಂದ ಜನಸಾಮಾನ್ಯರ ಬದುಕನ್ನು ಕಂಗೆಟ್ಟಿದೆ. ಜನಪರ ನೀತಿಗಳನ್ನು ಜಾರಿಗೆ ತರುತ್ತೇವೆಂದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರವು ಬಿಜೆಪಿ ಜಾರಿಗೆ ತಂದಿದ್ದ ಜನ ವಿರೋಧಿ ನೀತಿಗಳನ್ನು ಇನ್ನೂ ರದ್ದುಗೊಳಿಸಿಲ್ಲ. ಕೊಟ್ಟ ಮಾತಿನಂತೆ ಕಾಂಗ್ರೆಸ್‌ ನಡೆದುಕೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಜನರ ಬದುಕಿನಲ್ಲಿ ಭರವಸೆ ಮೂಡಿಸುವ ಹೊಸ ತೀರ್ಮಾನಗಳನ್ನು ಕಾಂಗ್ರೆಸ್‌ ಸರ್ಕಾರ ತೆಗೆದುಕೊಂಡಿಲ್ಲ. ಕೇವಲ ಭರವಸೆ ನೀಡುತ್ತಲೇ ಅಧಿಕಾರ ನಡೆಸುತ್ತಿದೆ. ವಿವಿಧ ಜನವರ್ಗಗಳ ನಡುವೆ ನಡೆಸುವ ಬಜೆಟ್‌ ಪೂರ್ವ ಮಾತುಕತೆಗಳು ಹುಸಿ ಸಮಾಧಾನ ಮೂಡಿಸುವ ಪ್ರಯಾಸ ಎನಿಸುತ್ತಿವೆ. ಕಾರ್ಮಿಕ ವರ್ಗವನ್ನಂತೂ ಕನಿಷ್ಟ ಸಮಾಲೋಚನೆಗೂ ಕರೆಯಲಿಲ್ಲ. ಸರ್ಕಾರದ ಇಂತಹ ಧೋರಣೆ ಖಂಡನೀಯವಾಗಿದೆ. ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ರೈತ, ಕಾರ್ಮಿಕ, ಮಹಿಳೆ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ತಳಸಮುದಾಯಗಳ ಅಭಿವೃದ್ಧಿ ಒತ್ತುಕೊಡಬೇಕು. ಇಲ್ಲವೇ, ಬಿಜೆಪಿಯಂತೆಯೇ ಕಾಂಗ್ರೆಸ್‌ ಕೂಡ ಜನವಿರೋಧಿಯೆ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು” ಎಂದು ಒತ್ತಾಯಿಸಿದ್ದಾರೆ.

Advertisements

ಪ್ರಮುಖ ಹಕ್ಕೊತ್ತಾಯಗಳು;

  1. ಈ ಹಿಂದಿನ ಬಿಜೆಪಿ ಸರ್ಕಾರ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಕಾಯ್ದೆಗಳಿಗೆ ತಂದಿದ್ದ ತಿದ್ದುಪಡಿಗಳನ್ನು ಈ ಕೂಡಲೇ ರದ್ದುಗೊಳಿಸಬೇಕು.
  2. ಕೇಂದ್ರ ಸರ್ಕಾರವು ಜಾರಿ ಮಾಡಿರುವ ‘ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟಿ’ನ ಕರಡನ್ನು [The National Policy Framework on Agricultural Marketing] ರಾಜ್ಯ ಸರ್ಕಾರವು ಸಾರಾಸಗಟು ತಿರಸ್ಕರಿಸಬೇಕು. ರೈತ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿ ಕೃಷಿ ಬೆಳೆ ಆಯೋಗಕ್ಕೆ ಹೊಸ ಮಾರ್ಗಸೂಚಿಯನ್ನು ನೀಡಬೇಕು.
  3. ವಿದ್ಯುತ್‌ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಖಾಸಗೀಕರಿಸಬಾರದು. ವಿದ್ಯುತ್‌ ಸಂಪರ್ಕ ಪಡೆದುಕೊಳ್ಳುವ ಆರ್ಥಿಕ ಹೊರೆಯನ್ನು ರೈತರು ಹಾಗೂ ಜನಸಾಮಾನ್ಯರ ಮೇಲೆ ಹೊರೆಸಬಾರದು.
  4. ಬಗರ್‌ ಹುಕುಂ ರೈತರ ಭೂಮಿಗಳನ್ನು ಕೂಡಲೇ ಮಂಜೂರು ಮಾಡಬೇಕು. ಕಾನೂನಿನ ತೊಡಕನ್ನು ಕಾರಣವಾಗಿ ನೀಡಿ, ಬಡ ರೈತರ ಅರ್ಜಿಗಳನ್ನು ತಿರಸ್ಕರಿಸಬಾರದು ಮತ್ತು ಒಕ್ಕಲೆಬ್ಬಿಸಬಾರದು.
  5. ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಕಾರ್ಮಿಕರ ಕುರಿತ ನಾಲ್ಕು ಕೋಡ್‌ ಗಳನ್ನು ತಿರಸ್ಕರಿಸುವ ತೀರ್ಮಾನ ತೆಗೆದುಕೊಳ್ಳಬೇಕು. ಅಂತರಾಷ್ಟ್ರೀಯ ಶ್ರಮ ಒಡಂಬಡಿಕೆಗೆ ವಿರುದ್ಧವಾಗಿ ದುಡಿಮೆಯ ಅವಧಿಯನ್ನು 8ರಿಂದ 12 ಗಂಟೆಗೆ ಏರಿಸಿರುವ ಕಾರ್ಮಿಕ ವಿರೋಧಿ ತಿದ್ದುಪಡಿಯನ್ನು ರದ್ದುಗೊಳಿಸಬೇಕು.
  6.  ಖಾಯಂ ಸ್ವರೂಪದ  ಉದ್ಯೋಗಗಳಲ್ಲಿನ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಶಾಸನ ರೂಪಿಸಬೇಕು. ವಿವಿಧ ಅಸಂಘಟಿತ ಕಾರ್ಮಿಕರ ಮಂಡಳಿಗಳಿಗೆ ಅಗತ್ಯ ಅನುದಾನ ಮೀಸಲಿಡಬೇಕು. ಕಾರ್ಮಿಕ ಸಮ್ಮೇಳನ [KL­C] ಏರ್ಪಡಿಸಿ ಕಾರ್ಮಿಕ ಸಂಘಟನೆಗಳ ಜೊತೆಗೂಡಿ ವೇತನ ಶ್ರಮಿಕ ನೀತಿಯನ್ನು ರೂಪಿಸುವ ಪರಿಪಾಠವನ್ನು ಕರ್ನಾಟಕ ಅಳವಡಿಸಿಕೊಳ್ಳಬೇಕು.
  7. ದೀರ್ಘಕಾಲದಿಂದ ಏರದೇ ನಿಂತಿರುವ ಕನಿಷ್ಟ ವೇತನವನ್ನು ಪರಿಷ್ಕರಿಸಿ ಮಾಸಿಕ 36 ಸಾವಿರ ಮಾಡಬೇಕು ಮತ್ತು ಎಲ್ಲಾ ಸೆಕ್ಟರ್‌ ನ ಕೂಲಿ ದರವನ್ನು ಒಮ್ಮೆಗೆ ಘೋಷಿಸಬೇಕು. ಕೊಟ್ಟ ಆಶ್ವಾಸನೆಯಂತೆ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ಮುಂತಾದ ಕ್ಷೇತ್ರಗಳ ದುಡಿಯುವ ಜನರಿಗೆ ವೇತನ ಹೆಚ್ಚಿಸಬೇಕು.
  8. SCSP/TSP ನಿಧಿಯ ದುರುಪಯೋಗವನ್ನು ತಡೆಯಬೇಕು. ಗ್ಯಾರಂಟಿ ಯೋಜನೆಗಳಿಗೂ ಒಳಗೊಂಡಂತೆ ಬೇರೆ ಉದ್ದೇಶಗಳಿಗೆ ಬಳಕೆಯಾಗಿದ್ದ ಹಣವನ್ನು ಮತ್ತೆ ಈ ನಿಧಿಗೆ ಮರು ಭರ್ತಿ ಮಾಡಬೇಕು. ಎಲ್ಲಾ ಹಣ ಸೂಚಿತ ಉದ್ದೇಶಕ್ಕೆ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಸಮುದಾಯದ ಯುವಜನರ ಉದ್ಯೋಗ ಸೃಷ್ಟಿಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ಮೀಸಲಾಗಬೇಕು.
  9. ಮೈಕ್ರೋಫೈನಾನ್ಸ್‌ ಹಾವಳಿಯಿಂದ ಜನರನ್ನು, ವಿಶೇಷವಾಗಿ ಮಹಿಳೆಯರನ್ನು ಪಾರುಮಾಡಲು ಸಮಗ್ರ ನೀತಿ ರೂಪಿಸಬೇಕು. ರೈತರು ಹಾಗೂ ಎಲ್ಲಾ ದುಡಿಯುವ ಜನರನ್ನು ಋಣಮುಕ್ತರನ್ನಾಗಿಸಲು ಹಾಗೂ ಅವರಿಗೆ ಸರಳ ಸಾಲಸೌಲಭ್ಯ ದೊರಕುವಂತೆ ಮಾಡಲು ಸೂಕ್ತ ನೀತಿಯನ್ನು ರೂಪಿಸಬೇಕು. ಹೈಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ರೈತ ಋಣ ಆಯೋಗವನ್ನು ರಚಿಸಬೇಕು.  ರಾಷ್ಟ್ರೀಯ ಬ್ಯಾಂಕುಗಳ ಮೂಲಕ ಸ್ವಸಹಾಯ ಸಂಘಗಳಿಗೆ 10 ಲಕ್ಷದವರೆಗೆ ದೀರ್ಘಕಾಲಿನ ಬಡ್ಡಿ ರಹಿತ ಸಾಲ ಒದಗಿಸಬೇಕು.
  10. ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರ, ಭ್ರೂಣ ಹತ್ಯೆ, ಮರ್ಯಾದೆಗೇಡು ಹತ್ಯೆ ಮುಂತಾದ ಹಿಂಸೆಗಳಿಂದ ಮಹಿಳೆಯರನ್ನು ಪಾರುಮಾಡಲು ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸಬೇಕು.
  11. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ [NEP] ಯನ್ನು ತಿರಸ್ಕರಿಸಬೇಕು. ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಸಂರಕ್ಷಿಸಲು, ಕರ್ನಾಟಕದಲ್ಲಿ ತನ್ನದೇ ಆದ ಜೀವಪರ ಶಿಕ್ಷಣ ನೀತಿಯನ್ನು ರೂಪಿಸಲು ಮುಂದಾಗಬೇಕು.
  12. ಉದ್ಯೋಗ ಸೃಷ್ಟಿಗೆ ಮತ್ತು ಉದ್ಯೋಗ ಖಾತ್ರಿಗೆ ವಿಶೇಷ ಆಯೋಗ ರಚಿಸಿ, ಸಮಗ್ರ ನೀತಿ ಮತ್ತು ಕಾರ್ಯಯೋಜನೆ ಸಿದ್ಧಪಡಿಸಬೇಕು.
  13. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ [MNREGA] ಯೋಜನೆಯನ್ನು ಬಲಪಡಿಸಿ, 200 ದಿನಕ್ಕೆ ವಿಸ್ತರಿಸಿ, ನಗರ ಪ್ರದೇಶಗಳಿಗೂ ಅನ್ವಯಿಸಿ, ದಿನಕ್ಕೆ 600 ರೂಪಾಯಿಗಳಿಗೆ ಹೆಚ್ಚಿಸಿ ಬಲಪಡಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ವಿದಾನಸಭಾ ಅಧಿವೇಶನ ತೀರ್ಮಾನ ತೆಗೆದುಕೊಳ್ಳಬೇಕು.
  14. ಬೆಲೆ ಏರಿಕೆಗೆ ಕಡಿವಾಣ ಹಾಕಲೇಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಅಗತ್ಯ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ಮೇಲೂ ಒತ್ತಡ ಹೇರಬೇಕು.
  15. ರಾಜ್ಯದ ಆರ್ಥಿಕ ಸ್ವಾವಲಂಬನೆಯನ್ನು ನಾಶಗೊಳಿಸುತ್ತಿರುವ ಮತ್ತು ಜನಸಾಮಾನ್ಯರನ್ನು ಸುಲಿಯುತ್ತಿರುವ ಜಿಎಸ್‌ಟಿ ಪದ್ದತಿಯನ್ನು ರದ್ದುಗೊಳಿಸುಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ರಾಜ್ಯದ ನ್ಯಾಯಸಮ್ಮತ ಪಾಲನ್ನು ನೀಡುವಂತೆ ಬಲವಾಗಿ ಆಗ್ರಹಿಸಿ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು. ಬೀದಿ ಹೋರಾಟಕ್ಕೂ ಸಜ್ಜಾಗಬೇಕು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜನಶಕ್ತಿ ಅಧ್ಯಕ್ಷ ನೂರ್ ಶ್ರೀಧರ್, ಸಿಐಟಿಯು ನಾಯಕಿ ಎಸ್‌ ವರಲಕ್ಷ್ಮಿ ಮತ್ತು ಸುನಂಧ, ದಸಂಸ ಸಂಚಾಲಕ ಗುರುಪ್ರಸಾದ್ ಕರೆಗೋಡು, ಕೃಷಿ ಕೂಲಿಕಾರರ ಸಂಘದ ಚಂದ್ರಪ್ಪ ಹೊಸ್ಕರ್ ರೈತಸಂಘದ ಶಿವಪ್ಪ ಮತ್ತು ಗೋಪಾಲ್ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಕಳಂಕಿತ ನೈಸ್ ಕಂಪನಿಗೆ ಯಾವುದೇ ಕಾಮಗಾರಿ ನೀಡದಂತೆ ಸರ್ಕಾರಕ್ಕೆ ನೈಸ್ ಭೂ ಸಂತ್ರಸ್ತ ರೈತರ ಆಗ್ರಹ

ಬಿಎಂಐಸಿ-ನೈಸ್ ಕಂಪನಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X