ಗ್ಯಾಸ್ ಕಟರ್ ಮೂಲಕ ಎಟಿಎಂ ಯಂತ್ರ ಕಟ್ ಮಾಡಿರುವ ಖದೀಮರು, ಎಟಿಎಂನಲ್ಲಿದ್ದ 30 ಲಕ್ಷ ಹಣದೊಂದಿಗೆ ಪರಾರಿಯಾಗಿರುವ ಘಟನೆ ಹೊಸಕೋಟೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಹೊಸಕೋಟೆಯ ಸೂಲಿಬೆಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂನಲ್ಲಿ ಇಂದು ನಸುಕಿನ ಜಾವ 3 ಗಂಟೆ ಸಮಯದಲ್ಲಿ ಕೃತ್ಯ ನಡೆದಿದೆ.
ಆಂಧ್ರ ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದಿರುವ ಖದೀಮರು, ಕಾರಿನಿಂದ ಗ್ಯಾಸ್ ಕಟರ್ ಬಳಸಿ, ಎಟಿಎಂ ಯಂತ್ರವನ್ನು ಕತ್ತರಿಸಿ ಅದರದಲ್ಲಿದ್ದ 30 ಲಕ್ಷ ರೂ. ಹಣವನ್ನು ದೋಚಿದ್ದಾರೆ.
ಗುರುತು ಸಿಗಬಾರದೆಂಬ ಕಾರಣಕ್ಕೆ ಸಿಸಿ ಕ್ಯಾಮರಾಕ್ಕೆ ಸ್ಪ್ರೇ ಹೊಡೆದಿದ್ದಾರೆ. ಕಳವು ಮಾಡಿದ ನಂತರ ಹೊಸಕೋಟೆ ಮಾರ್ಗವಾಗಿ ಕಳ್ಳರು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಸಾಕ್ಷ್ಯ ಸಂಗ್ರಹ ಮಾಡಿದ್ದು, ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.