ಭಾರತದ ಬಹು ಸಂಸ್ಕೃತಿ, ಸಂವಿಧಾನ ಅರ್ಥ ಆಗದವರು ವಕ್ಫ್ ತಿದ್ದುಪಡಿ ಮಸೂದೆಯನ್ನು ತರಲು ಹೊರಟಿದ್ದಾರೆ, ಈಗಾಗಲೇ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಸರಿಯಾದ ಪಾಠ ಕಲಿಸಿಯಾಗಿದೆ ಪಾಠ ಕಲಿತ ಸರ್ಕಾರ ನಂತರ ತನ್ನ ನಿಲುವನ್ನು ಬದಲಾಯಿಸಿ ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವ ಕಸಿಯುವುದಕ್ಕಲ್ಲ ಬದಲಾಗಿ ಪೌರತ್ವ ನೀಡಲು ತಂದಿರುವ ಕಾಯ್ದೆ ಎಂದು ತನ್ನ ಕ್ರೋನಾಲಜಿಯನ್ನೇ ಬದಲಾಯಿಸಿತು ಈಗಲೂ ಸಹ ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಮಸೂದೆಯನ್ನು ತರಲು ನಾವು ಬಿಡುವುದಿಲ್ಲ ಮತ್ತು ಎಂದೂ ಸಹ ಕಾಯ್ದೆ ಆಗಲು ಸಾಧ್ಯವಿಲ್ಲ ಎಂದು ವಕೀಲರಾದ ಸುಧೀರ್ ಕುಮಾರ್ ಮುರೋಳಿ ಹೇಳಿದರು.
ಅವರು ಬ್ರಹ್ಮಾವರದ ಮದರ್ ಪ್ಯಾಲೇಸ್ ಆಡಿಟೋರಿಯಂ ನಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್ ಉಡುಪಿ ಜಿಲ್ಲೆ ವತಿಯಿಂದ ನಡೆದ ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ಮಾತನಾಡಿದರು.

ವಕ್ಫ್ ಮತ್ತು ಇಸ್ಲಾಮೀ ಶರಿಯತ್ ವಿಷಯವಾಗಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಧರ್ಮ ಗುರುಗಳಾದ ಮುಹಮ್ಮದ್ ಅನ್ವರ್ ಅಸ್’ಅದಿ, ಕಳೆದ ಎಪ್ಪತ್ತೈದು ವರ್ಷಗಳಿಂದ ಭಾರತೀಯ ಮುಸ್ಲಿಮರನ್ನು ಕೇವಲ ಓಟ್ ಬ್ಯಾಂಕ್ ಗಾಗಿ ಉಪಯೋಗಿಸುತ್ತಿದ್ದಾರೆ. 14% ಮುಸ್ಲಿಮರು ಇಲ್ಲಿ ಹಲವಾರು ತೊಂದರೆಗಳು ಅನುಭವಿಸುತ್ತಿದ್ದೇವೆ ಎನ್ ಆರ್ ಸಿ, ಸಿಎಎ ಸಮಯದಲ್ಲಿ ಅನುಭವಿಸಿದ ತೊಂದರೆ ಇನ್ನೇನು ಮುಗಿಯಿತು ಎನ್ನುವಾಗ ವಕ್ಫ್ ತಿದ್ದುಪಡಿ ಮಸೂದೆ ನಮ್ಮ ಮುಂದೆ ತಂದಿದ್ದಾರೆ. ಮುಸ್ಲಿಮರ ಸಮಸ್ಯೆಗಳಿಗೆ ರಾಜಕೀಯವಾಗಿ ಪರಿಹಾರ ಕಂಡುಕೊಳ್ಳದೆ ನಾವೇ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಹಾಗಾಗಿ ಪ್ರತಿಯೊಬ್ಬರಿಗೂ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಮ್ ಜಮಾತ್, ಉಡುಪಿ ಜಿಲ್ಲಾಧ್ಯಕ್ಷರಾದ ಬಿಎಸ್ಎಫ್ ಮುಹಮ್ಮದ್ ರಫೀಕ್ ವಹಿಸಿದ್ದರು. ಕರ್ನಾಟಕ ಮುಸ್ಲಿಮ್ ಜಮಾತ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಸ್ವಾಗತಿಸಿದರು, ಕರ್ನಾಟಕ ಮುಸ್ಲಿಮ್ ಜಮಾತ್, ಉಡುಪಿ ಜಿಲ್ಲಾ ಸಮಿತಿಯ ಅಸೈಯ್ಯದ್ ಜಾಫರ್ ಅಸ್ಸಖಾಫ್ ತಂಗಳ್ ಕೋಟೇಶ್ವರ ಕರ್ನಾಟಕ ಮುಸ್ಲಿಮ್ ಜಮಾತ್ ಉಡುಪಿ ಜಿಲ್ಲಾ ಕಾನೂನು ಸಲಹೆಗಾರರಾದ ಅಡ್ವಕೇಟ್ ಹಂಝತ್ ಹೆಜಮಾಡಿ, ಕರ್ನಾಟಕ ಮುಸ್ಲಿಮ್ ಜಮಾತ್ ಉಡುಪಿ ಜಿಲ್ಲಾ ಹಿರಿಯ ಸಲಹೆಗಾರರಾದ ಅಬ್ದುರ್ರೆಹಮಾನ್ ರಝ್ವಿ ಕಲ್ಕಟ್ಟ ಮಾತನಾಡಿದರು. ಸುಭ್ಹಾನ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿ ಧನ್ತವಾದವಿತ್ತರು.

