ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು ಎಂದು ಖಾಝಿಗಳಾದ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಝೈನುಲ್ ಉಲಮಾ ಮಾಣಿ ಉಸ್ತಾದ್ ಸೇರಿದಂತೆ ಪ್ರಮುಖ ಉಲಮಾಗಳು ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ವತಿಯಿಂದ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, “ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ನೀಡಲಾಗಿತ್ತು. ಆದರೆ ಪ್ರಸಕ್ತ ಸಮಿತಿಯು ವಿರೋಧ ಪಕ್ಷಗಳ ಪ್ರತಿನಿಧಿಗಳು ಸೂಚಿಸಿದ ತಿದ್ದುಪಡಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ಮೊದಲಿಗಿಂತಲೂ ಅಪಾಯಕಾರಿ ಅಂಶಗಳನ್ನು ಸೇರಿಸಿ ಮಂಡಿಸಿದೆ. ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರಲ್ಲಿ ಅಸುರಕ್ಷತೆಯನ್ನು ಮೂಡಿಸುವ ಮತ್ತು ಅವರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಒದಗಿಸಿರುವ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ ಈ ವಕ್ಫ್ ತಿದ್ದುಪಡಿಯನ್ನು ಕೂಡಲೇ ಕೇಂದ್ರ ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.

ಸಂವಿಧಾನದಲ್ಲಿರುವ ಆರ್ಟಿಕಲ್ 25, 26, 27 ಮತ್ತು 28, ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕು ಎಂದಿವೆ. ಆರ್ಟಿಕಲ್ 26ರ ಎ, ಬಿ, ಸಿ, ಡಿ ಕಲಮುಗಳು ಧಾರ್ಮಿಕ ಆಚರಣೆಯ ಭಾಗವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಉದ್ದೇಶಗಳಿಗೆ ಸಂಸ್ಥೆಗಳನ್ನು ಕಟ್ಟಿಕೊಳ್ಳುವ, ಧಾರ್ಮಿಕ ವಿಷಯದಲ್ಲಿ ಅದನ್ನು ತಮ್ಮ ಧರ್ಮಾನುಸಾರ ಪಾಲನೆ ಮಾಡುವ, ಸ್ಥಿರ ಹಾಗೂ ಚರಾಸ್ತಿಗಳನ್ನು ಹೊಂದುವ, ಅವುಗಳನ್ನು ಕಾನೂನು ರೀತಿ ನಿರ್ವಹಣೆ ಮಾಡುವ ಹಕ್ಕನ್ನು ನೀಡುತ್ತದೆ.
ಅದರಂತೆ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಸೇರಿದಂತೆ ಎಲ್ಲಾ ಧರ್ಮೀಯರು ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿಕೊಂಡು ದೇಣಿಗೆಗಳನ್ನು ಸ್ವೀಕರಿಸುತ್ತಿದ್ದಾರೆ. ಮುಸ್ಲಿಂ ಸಮುದಾಯದ ಧಾರ್ಮಿಕ ದಾನಗಳ ಆಚಾರಗಳನ್ನು ಮುನ್ನಡೆಸಲು ವಕ್ಫ್ ಬೋರ್ಡ್ ಕಾಯ್ದೆಯನ್ನು ರೂಪಿಸಲಾಗಿದೆ. ಇದೀಗ ಕೇಂದ್ರ ಬಿಜೆಪಿ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿದೆ. ಅದರ ವಿರುದ್ಧದ ಹೋರಾಟದ ಮುಂದಿನ ರೂಪುರೇಷೆಗಳನ್ನು ಖಾಝಿಗಳ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ಮಂಗಳೂರು | ಮಾಡೂರು ಶಾಖಾ ಅಂಚೆ ಕಚೇರಿ ಉದ್ಘಾಟನೆ
ಸುದ್ದಿಗೋಷ್ಠಿಯಲ್ಲಿ ಸೈಯದ್ ಇಸ್ಮಾಯೀಲ್ ತಂಙಳ್ ಉಜಿರೆ, ಉಸ್ಮಾನುಲ್ ಫೈಝಿ ತೋಡಾರು, ಯು.ಕೆ.ಮುಹಮ್ಮದ್ ಸಅದಿ ವಳವೂರು, ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಎಸ್.ಪಿ. ಹಂಝ ಖಾಫಿ ಬಂಟ್ವಾಳ, ಎನ್.ಕೆ.ಎಂ.ಶಾಫಿ ಸಅದಿ ಬೆಂಗಳೂರು, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ, ಕೆ.ಐ.ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಪಿ.ಎಂ. ಉಸ್ಮಾನ ಸಅದಿ ಸೇರಿದಂತೆ ಹಲವು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
