ಕರ್ನಾಟಕ ಜಾನಪದ ಅಕಾಡೆಮಿಯು 2024ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಜನಪದ ಗಾಯನ’ ಕ್ಷೇತ್ರದಲ್ಲಿ ಬೀದರ್ ತಾಲ್ಲೂಕಿನ ಚಾಂಬೋಳ ಗ್ರಾಮದ ಮಾರುತಿ ಕೋಳಿ ಅವರು ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
1970ರಲ್ಲಿ ಜನಿಸಿದ ಜಾನಪದ ಕಲಾವಿದರಾದ ಮಾರುತಿ ಕೋಳಿ ಅವರು ಎಸ್ಸೆಸ್ಸೆಲ್ಸಿ ತನಕ ಓದಿದ್ದು, ಕಳೆದ 35 ವರ್ಷಗಳಿಂದ ಜಾನಪದ, ವಚನ, ತತ್ವಪದ ಹಾಗೂ ಭಜನೆ ಪದ ಮೈಗೂಡಿಸಿಕೊಂಡು ರಾಜ್ಯ ಅಲ್ಲದೆ ಪಕ್ಕದ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಜರುಗಿದ ವಿವಿಧ ಕಾರ್ಯಕ್ರಮ, ಉತ್ಸವಗಳಲ್ಲಿ ಭಾಗವಹಿಸಿ ಸಂಗೀತ ಸೇವೆ ಸಲ್ಲಿಸಿದ್ದಾರೆ.
ಇದೀಗ ಅವರ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ಈ ಕುರಿತು ಮಾರುತಿ ಕೋಳಿ ಅವರು ‘ಈದಿನ.ಕಾಮ್’ ಜೊತೆ ಮಾತನಾಡಿ, ʼಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿದ ಅಕಾಡೆಮಿ ಅಧ್ಯಕ್ಷ ಹಾಗೂ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ ಅವರಿಗೆ ಧನ್ಯವಾದ ಸಲ್ಲಿಸುವೆ. ಸುಮಾರು ಮೂರು ದಶಕಗಳಿಂದ ಜಾನಪದ ಸಾಹಿತ್ಯ, ಸಂಸ್ಕೃತಿ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಈಗ ಗುರುತಿಸಿ ಆಯ್ಕೆ ಮಾಡಿದ್ದು ಖುಷಿ ನೀಡಿದೆʼ ಎಂದರು.