ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಶನಿವಾರ ಟೀಕಿಸಿದ್ದಾರೆ. “ರಾಜ್ಯದಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟಲು 15 ವರ್ಷಗಳಷ್ಟು ಹಳೆಯ ವಾಹನಗಳನ್ನು ಹೇಗೆ ಸ್ಕ್ರಾಪ್ (ರದ್ದಿ) ಮಾಡಲಾಯಿತೋ, ಹಾಗೆಯೇ ಬಿಹಾರದ ಜನರ ಮೇಲೆ ಹೊರೆಯಾಗಿರುವ ಎರಡು ದಶಕದ ಎನ್‌ಡಿಎ ಸರ್ಕಾರವನ್ನು ಸ್ಕ್ರಾಪ್ ಮಾಡಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಯಾದವ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದ 20 ವರ್ಷ ಹಳೆಯ ಎನ್‌ಡಿಎ ಸರ್ಕಾರವು ದುರ್ಬಲ ವಾಹನದಂತೆ ಆಗಿದೆ. ಬಿಹಾರದಾದ್ಯಂತ 15 ವರ್ಷಗಳಷ್ಟು ಹಳೆಯದಾದ ವಾಹನವನ್ನು ನಿಷೇಧಿಸಲಾಗಿದೆ. ಹಳೆಯ ವಾಹನಗಳು ಹೆಚ್ಚು ಹೊಗೆ ಉಗುಳುತ್ತದೆ, ಇದರಿಂದಾಗಿ ವಾಯುಮಾಲಿನ್ಯ ಹೆಚ್ಚಾಗುತ್ತದೆ. ಇದು ಜನರಿಗೆ ಅಪಾಯಕಾರಿ” ಎಂದು ಬಿಹಾರ ಸರ್ಕಾರವನ್ನು ಹಳೆಯ ವಾಹನಕ್ಕೆ ಹೋಲಿಸಿದ್ದಾರೆ.
ಇದನ್ನು ಓದಿದ್ದೀರಾ? ಉದ್ಯೋಗಕ್ಕಾಗಿ ಜಮೀನು ಹಗರಣ | ಲಾಲು ಪ್ರಸಾದ್, ತೇಜಸ್ವಿ ಯಾದವ್‌ಗೆ ಜಾಮೀನು
“ಹಳೆಯ ವಾಹನ ನಿಷೇಧಿಸುವಾಗ 20 ವರ್ಷ ಹಳೆಯದಾದ ದುರ್ಬಲ ಎನ್‌ಡಿಎ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಲು ಯಾಕೆ ಅವಕಾಶ ನೀಡಬೇಕು? ಈ ಸರ್ಕಾರವು ಬಿಹಾರದ ಜನರ ಮೇಲೆ ಹೊರೆಯಾಗಿದೆ. ಈ ಸರ್ಕಾರವನ್ನು ಬದಲಾವಣೆ ಮಾಡಬೇಕು” ಎಂದು ಎಕ್ಸ್ ಪೋಸ್ಟ್‌ನಲ್ಲಿ ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.
बिहार में 𝟏𝟓 साल पुरानी गाड़ी चलाने की अनुमति नहीं है क्योंकि वो ज़्यादा धुँधा फेंकती है, प्रदूषण बढ़ाती, जनता के लिए हानिकारक है तो फिर 𝐍𝐃𝐀 की 𝟐𝟎 साल पुरानी जोड़-तोड़, पलटा-पलटी वाली खटारा सरकार क्यों चलेगी?
— Tejashwi Yadav (@yadavtejashwi) March 1, 2025
𝟐𝟎 वर्षों की नीतीश सरकार ने विगत 𝟐𝟎 साल में बिहार के हर… pic.twitter.com/6j2UTKpoMy
“ಕಳೆದ 20 ವರ್ಷಗಳ ಅವಧಿಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಬಿಹಾರದಲ್ಲಿ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಅಪರಾಧ ಮತ್ತು ವಲಸೆ ಎಂಬ ಮಾರಕ ಮಾಲಿನ್ಯವನ್ನು ಹರಡಿದೆ” ಎಂದು ತೇಜಸ್ವಿ ಟೀಕಿಸಿದ್ದಾರೆ.
2013ರಲ್ಲಿ ಬಿಜೆಪಿ ಜೊತೆ ಮೈತ್ರಿ ಹೊಂದಿದ್ದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಳಿಕ ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಂಡರು. 2015ರಿಂದ 2017ರವರೆಗೆ ಆರ್‌ಜೆಡಿ ಜೊತೆ ಅಧಿಕಾರವನ್ನು ಹಂಚಿಕೊಂಡಿತ್ತು. 2017ರಲ್ಲಿ ಆರ್‌ಜೆಡಿ ಜೊತೆ ಮೈತ್ರಿ ತೊರೆದು ಮತ್ತೆ ಎನ್‌ಡಿಎ ಕೂಡ ಸೇರಿದರು. ಬಳಿಕ 2022ರ ಆಗಸ್ಟ್‌ನಲ್ಲಿ ಮತ್ತೆ ಆರ್‌ಜೆಡಿ ಮಹಾಘಟಬಂಧನ ಜೊತೆ ಮೈತ್ರಿ ಮಾಡಿಕೊಂಡರು. 2024ರಲ್ಲಿ ಮತ್ತೆ ಮಹಾಘಟಬಂಧನ ತೊರೆದು ಎನ್‌ಡಿಎ ಸೇರಿಕೊಂಡರು. ಹೀಗೆ ನಿರಂತರವಾಗಿ ಮೈತ್ರಿ ಬದಲಾಯಿಸಿಕೊಂಡ ನಿತೀಶ್ ಕುಮಾರ್ ಈಗ ಮತ್ತೆ ಯಾವಾಗ ಎನ್‌ಡಿಎ ಕೂಟ ತೊರೆಯುತ್ತಾರೆ ಎಂದು ಹೇಳಲಾಗದು.
