ಕೆಇಆರ್‌ಸಿ ಆದೇಶದಂತೆ ಈ ತಿಂಗಳು ವಿದ್ಯುತ್ ದರ ಏರಿಕೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಮನೆಯೊಂದಕ್ಕೆ ಬರೋಬ್ಬರಿ 7.71 ಲಕ್ಷ ರೂ. ವಿದ್ಯುತ್ ಬಿಲ್ ನೀಡಲಾಗಿತ್ತು. ಮೀಟರ್ ರೀಡರ್‌ನಿಂದ ಎಡವಟ್ಟಾಗಿ ಆ ಮೊತ್ತದ ಬಿಲ್ ನೀಡಿದ್ದು, ತಪ್ಪು ಗಮನಕ್ಕೆ ಬರುತ್ತಿದ್ದಂತೆಯೇ ಮೆಸ್ಕಾಂ ಅಧಿಕಾರಿಗಳು ತಪ್ಪನ್ನು ಸರಿಪಡಿಸಿ, ಪರಿಷ್ಕೃತ ಬಿಲ್ಲು ನೀಡಿದ್ದಾರೆ.
“ವಿದ್ಯುತ್ ಬಿಲ್ ರಸೀದಿಯಲ್ಲಿ 99,338 ಯೂನಿಟ್ ಖರ್ಚಾಗಿದ್ದು, 7,71,072 ರೂಪಾಯಿ ಬಿಲ್ ನಮೂದಿಸಲಾಗಿದೆ. ತಮಗೆ ಈ ಮೊದಲು 3,000 ದಷ್ಟು ಮಾಸಿಕ ವಿದ್ಯುತ್ ಬಿಲ್ ಬರುತ್ತಿತ್ತು. ನಾವು ಪ್ರತಿ ತಿಂಗಳು ಬಿಲ್ಲನ್ನ ಕಟ್ಟುತ್ತೇವೆ. ಈ ತಿಂಗಳು ಬಂದ ಬಿಲ್ಲನ್ನ ನೋಡಿ ಮನೆ ಮಂದಿಯೆಲ್ಲ ತಬ್ಬಿಬ್ಬಾದೆವು” ಎಂದು ಮನೆ ಮಾಲೀಕ ಸದಾಶಿವ ಆಚಾರ್ಯ ಹೇಳಿದ್ದಾರೆ.
“ಬಿಲ್ ರೀಡಿಂಗ್ ಮಾಡಿದ ವ್ಯಕ್ತಿಯಲ್ಲಿ ವಿಚಾರಿಸಿದಾಗ ಅದೆಲ್ಲ ನನಗೆ ಗೊತ್ತಿಲ್ಲ. ಮೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿ ಎಂದು ಉಡಾಫೆಯ ಉತ್ತರ ನೀಡಿ ತೆರಳಿದ್ದರು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸೇವೆ ಒದಗಿಸಲು ವಿಮಾ ಕಂಪನಿ ವಿಫಲ; ಪರಿಹಾರ ನೀಡುವಂತೆ ಆದೇಶ
“ಏಜೆನ್ಸಿಗಳ ಮುಖಾಂತರ ಬಿಲ್ ಕಲೆಕ್ಷನ್ ಮಾಡಲಾಗುತ್ತದೆ. ಬಿಲ್ ರೀಡರ್ ಎಡವಟ್ಟಿನಿಂದ ತಪ್ಪಾಗಿ ವಿದ್ಯುತ್ ಬಿಲ್ ಮುದ್ರಣ ಆಗಿದೆ. ಬಿಲ್ಲಲ್ಲಿ ಲೋಪ ಕಂಡು ಬಂದರೆ ಅದನ್ನು ಗ್ರಾಹಕರಿಗೆ ಕೊಡುವಂತಿಲ್ಲ. ಆದರೂ ಆತ ಕೊಟ್ಟಿದ್ದಾರೆ. ನಮಗೆ ಮಾಹಿತಿ ಲಭಿಸಿದ ಕೂಡಲೇ ನಾವು ಪರಿಷ್ಕೃತ ಬಿಲ್ಲನ್ನು ಸದಾಶಿವ ಅವರ ಮನೆಗೆ ತಲಪುಸಿದ್ದೇವೆ” ಎಂದು ಮೆಸ್ಕಾಂನ ಉಳ್ಳಾಲ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ದಯಾನಂದ ತಿಳಿಸಿದ್ದಾರೆ.