ಸರ್ಕಾರದ ಆದೇಶಕ್ಕೆ ಮನ್ನಣೆ ನೀಡದೆ, ದಾವಣಗೆರೆ ನಗರದ ನೂತನ ‘ಚೆನ್ನೈ ಶಾಂಪಿಂಗ್ ಮಾಲ್’ ನಲ್ಲಿ ಕನ್ನಡದ ಕಡೆಗಣನೆ ಮಾಡಿರುವುದರ ವಿರುದ್ಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ದಾವಣಗೆರೆ ನಗರದಲ್ಲಿ ಹೊಸದಾಗಿ ಪ್ರಾರಂಭಸಿರುವ ದಿ ಚೆನ್ನೈ ಶಾಪಿಂಗ್ ಮಾಲ್ ನಲ್ಲಿ ಕನ್ನಡ ನಾಮಫಲಕ ಬಳಸದಿರುವುದು ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
‘ದಾವಣಗೆರೆಯಲ್ಲಿ ಚೆನೈ ಶಾಪಿಂಗ್ ಮಾಲ್ ಉದ್ಘಾಟನೆಯಾಗಿದ್ದು, ಆದರೆ ಶಾಪಿಂಗ್ ಮಾಲ್ ಮೇಲಿನ ಫಲಕದಲ್ಲಿ ಒಂದೂ ಕನ್ನಡ ಅಕ್ಷರವಿಲ್ಲ ಹಾಗೂ ಶಾಪಿಂಗ್ ಮಾಲ್ ನ ಮೆಟ್ಟಲುಗಳನ್ನು ಪಾಲಿಕೆ ಜಾಗವನ್ನು ಒತ್ತುವರಿ ಮಾಡಿ ಕಟ್ಟಲಾಗಿದೆ’ ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ. ಕರ್ನಾಟಕ ಸರ್ಕಾರದ ಆದೇಶದಂತೆ ಯಾವುದೇ ಅಂಗಡಿ ಮಳಿಗೆಗಳ ಮೇಲೆ ಅಗ್ರಸ್ಥಾನವನ್ನು ಕನ್ನಡ ನಾಮಫಲಕಕ್ಕೆ ಕೊಡಬೇಕು. ದಾವಣಗೆರೆಯಂತಹ ಮಧ್ಯ ಭಾಗದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯವನ್ನು ಕೊಟ್ಟಿಲ್ಲ ಎಂದು ಆರೋಪಿಸಿ ಮಾಲೀಕರಿಗೆ ಆಂಗ್ಲ ನಾಮಫಲಕ ಬದಲಾಯಿಸಲು ಹಾಗೂ ನಗರಪಾಲಿಕೆಯ ಜಾಗದಲ್ಲಿರುವ ಮೆಟ್ಟಿಲುಗಳನ್ನು ತೆರವುಗೊಳಿಸಲು ಒತ್ತಾಯಿಸಿತು.

ಈ ವೇಳೆ ವಿಕರವೇ ರಾಜ್ಯಾಧ್ಯಕ್ಷ ಕೆ ಜಿ ಯಲ್ಲಪ್ಪ ಮಾತನಾಡಿ, “ಶೇಕಡಾ 60ರಷ್ಟು ಕನ್ನಡ ಭಾಷೆಯ ಪದಗಳು ನಾಮಫಲಕಗಳು ಇರಬೇಕು. ಶಾಪ್ ಮೇಲೆ ಅಳವಡಿಸಲಾಗಿರುವ ಫ್ಲೆಕ್ಸ್ ನಲ್ಲಿ ಕನ್ನಡ ಅಕ್ಷರಗಳೇ ಕಾಣುತ್ತಿಲ್ಲ. ಮುಖ್ಯದ್ವಾರದ ಮೇಲೆ ಅಳವಡಿಸಿರುವ ನಾಮಫಲಕದಲ್ಲಿ ಕನ್ನಡ ಇರಬೇಕು. ಮೊದಲು ಅದನ್ನು ತೆಗೆಸಬೇಕು. ಕನ್ನಡ ವಿರೋಧಿ ಧೋರಣೆ ನೀತಿ ಅನುಸರಿಸಿದರೆ ನಾವು ಸಹಿಸುವ ಪ್ರಶ್ನೆಯೇ ಇಲ್ಲ” ಎಂದು ಎಚ್ಚರಿಕೆ ನೀಡಿದರು.
“ಪುಟ್ ಪಾತ್ ಮೇಲೆ ಶಾಪಿಂಗ್ ಮಾಲ್ ನವರು ಕಟ್ಟಡ ಕಟ್ಟಿದ್ದಾರೆ. ಒಬ್ಬ ಬಡ ವ್ಯಾಪಾರಿ ಪುಟ್ ಪಾತ್ ಮೇಲೆ ತಿಂಡಿ, ಸಣ್ಣಪುಟ್ಟ ಅಂಗಡಿ ಇಟ್ಟುಕೊಂಡರೆ ಕಾರ್ಪೊರೇಷನ್ ಅಧಿಕಾರಿಗಳು ಬಂದು ತೆರವುಗೊಳಿಸುತ್ತಾರೆ. ಇದು ದೊಡ್ಡ ಮಾಲ್ ಎಂಬ ಕಾರಣಕ್ಕೆ ಸುಮ್ಮನಿದ್ದಾರಾ? ನಗರದ ತುಂಬಾ ಫ್ಲೆಕ್ಸ್ ಹಾಕಲು ಅವಕಾಶ ನೀಡಿರುವುದು ಭ್ರಷ್ಟಾಚಾರದ ಸಂಶಯ ಬರುತ್ತಿದೆ” ಎಂದು ಆರೋಪಿಸಿದರು.
“ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ರಾಜ್ಯ ಸರ್ಕಾರವು ಸಹ ಕನ್ನಡ ಭಾಷೆಯ ನಾಮಫಲಕಗಳು ಕಾಣುವಂತೆ ಹಾಗೂ ದೊಡ್ಡದಾಗಿ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದರೂ ಕನ್ನಡ ವಿರೋಧಿ ಧೋರಣೆ ತಾಳಿರುವುದು ನಿಜಕ್ಕೂ ಖಂಡನೀಯ. ಇಂಥ ಕನ್ನಡ ವಿರೋಧಿ ಮನಸ್ಥಿತಿ ಅನುಸರಿಸಿದರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಇನ್ನೆರಡು ದಿನಗಳವರೆಗೆ ಕಾದು ನೋಡುತ್ತೇವೆ. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು” ಎಂದು ಯಲ್ಲಪ್ಪ ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸ್ಮಶಾನ, ಕೆರೆ, ಗೋಮಾಳದಲ್ಲಿ ಅಕ್ರಮ ಮಣ್ಣು ಸಾಗಾಟ; ಕ್ರಮಕ್ಕೆ ದಸಂಸ ಆಗ್ರಹ.
ಈ ವೇಳೆ ಮಾಲ್ ಮಾಲೀಕರಾದ, “ಜನಾರ್ದನ ರೆಡ್ಡಿ ಮಾತನಾಡಿ, ಕನ್ನಡಪರ ಸಂಘಟನೆಗಳು ಹೇಳಿದ್ದನ್ನು ಸರಿಪಡಿಸುತ್ತೇವೆ. ಕನ್ನಡ ಭಾಷೆಯಲ್ಲಿ ನಾಮಫಲಕ ಇಲ್ಲ ಎಂದು ಹೇಳುತ್ತಿದ್ದಾರೆ. ಕೂಡಲೇ ಆಗಿರುವ ಪ್ರಮಾದ ಸರಿಪಡಿಸಿಕೊಂಡು ಕನ್ನಡ ಭಾಷೆಗೆ ಮಾನ್ಯತೆ ನೀಡುತ್ತೇವೆ. ಕನ್ನಡ ಭಾಷೆ ಕಾಣುವಂತೆ ದೊಡ್ಡದಾಗಿ ಅಳವಡಿಸುತ್ತೇವೆ. ನಾವು ಬಾಡಿಗೆ ಕಟ್ಟಡದಲ್ಲಿ ಶಾಪಿಂಗ್. ಮಾಲ್ ಪ್ರಾರಂಭಿಸಿದ್ದೇವೆ. ಇನ್ನೆರಡು ದಿನಗಳ ಕಾಲಾವಕಾಶ ನೀಡಿ” ಎಂದು ಮನವಿ ಮಾಡಿದರು.
ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಾಬುರಾವ್ ಗಿರೀಶ್, ರಮೇಶ್, ರಂಗನಾಥ್ ಹಾಗೂ ಇತರರು ಹಾಜರಿದ್ದರು.