ಮೈಸೂರು ಜಿಲ್ಲೆಯಾದ್ಯಂತ ರಾಗಿ ಕೊಯ್ಲಾಗಿ ಮೂರು ತಿಂಗಳೇ ಕಳೆದರು ರಾಗಿ ಖರೀದಿ ಕೇಂದ್ರ ತೆರೆಯದೆ ದಲ್ಲಾಳಿಗಳಿಗೆ ಅನುಕೂಲ ಆಗುವಂತೆ ನಡೆದುಕೊಂಡಿರುವ ಕ್ರಮವನ್ನು ಖಂಡಿಸಿ, ಕರ್ನಾಟಕ ರಾಜ್ಯ ರೈತ ಸಂಘ ಈ ಕೂಡಲೆ ರಾಗಿ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹ ಮಾಡಿದೆ.
” ರಾಗಿ ಬೆಳೆ ಬೆಳೆದು ತಿಂಗಳುಗಟ್ಟಲೆ ಕಳೆದರು ಸಹ ಸಕಾಲದಲ್ಲಿ ರಾಗಿ ಕೇಂದ್ರವನ್ನು ತೆರೆಯದೆ,ರೈತರು ತಾವು ಬೆಳೆದಿರುವ ರಾಗಿಯನ್ನು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮಾರಿಕೊಳ್ಳುವಂತೆ ಆಗಿದೆ. ಖರೀದಿ ಕೇಂದ್ರದ ಲಾಭವನ್ನು ರೈತರು ಪಡೆಯಬೇಕಿತ್ತು ಆದರೆ ಸಮಯಕ್ಕೆ ರಾಗಿ ಕೇಂದ್ರ ತೆರೆಯದ ಹಿನ್ನೆಲೆಯಲ್ಲಿ ದಲ್ಲಾಳ್ಳಿಗಳ ಪಾಲಾಗುತ್ತಿದೆ. ಈ ರೀತಿಯ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘವು ಹೋರಾಟ ಮಾಡುತ್ತಲೇ ಬರುತ್ತಿದೆ. ರೈತ ಬೆಳೆಯುವ ಬೆಳೆಗೆ ಸರಿಯಾದ ವೈಜ್ಞಾನಿಕ ಬೆಲೆಯನ್ನು ಸರ್ಕಾರ ನಿಗದಿಪಡಿಸದೆ ಹರಾಜು ಮಾಡುವಂತ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ. ಕನಿಷ್ಠ ಖರೀದಿ ಕೇಂದ್ರವನ್ನಾದರೂ ಸಕಾಲದಲ್ಲಿ ಸರ್ಕಾರ ತೆರೆದರೆ ರೈತರಿಗೆ ಬಹಳ ಅನುಕೂಲವಾಗುತ್ತದೆ.ಆದುದರಿಂದ ರಾಗಿ ಕೇಂದ್ರವನ್ನು ಶೀಘ್ರವಾಗಿ ತೆರೆಯಬೇಕೆಂದು ” ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಹೇಳಿದರು.
ಹಕ್ಕೋತ್ತಾಯಗಳು:
- ಪ್ರಸ್ತುತ ಸಾಲಿನ ರಾಗಿ ಕೇಂದ್ರವನ್ನು ಶೀಘ್ರವೇ ತೆರೆಯುವುದು ಹಾಗೂ ನಿರಂತರವಾಗಿ ಖರೀದಿ ಕೇಂದ್ರವನ್ನು ಕಾಲ ಮಿತಿಯಿಲ್ಲದೆ ವರ್ಷಪೂರ್ತಿ ತೆರೆದಿರುವಂತೆ ಕ್ರಮ ಕೈಗೊಳ್ಳಬೇಕು.
- * ಖರೀದಿ ಕೇಂದ್ರದಲ್ಲಿ ಕಾರ್ಮಿಕರ, ಅಧಿಕಾರಿಗಳ ಕೆಲವು ಸಮಸ್ಯೆಗಳಿದ್ದು, ರೈತರಿಗೆ ತೊಂದರೆಯಾಗುತ್ತಿದೆ. ಮತ್ತು ಕೆಲವು ಅಧಿಕಾರಿಗಳು ದಲ್ಲಾಳಿಗಳ ಜೊತೆ ಶಾಮೀಲಾಗಿರುತ್ತಾರೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
- ಖರೀದಿ ಕೇಂದ್ರಗಳಲ್ಲಿ ನೊಂದಾಯಿಸುವ ರೈತರಿಗೆ ಬೆಳೆ ಇಲ್ಲದ ಸಮಯದಲ್ಲಿ ಸರ್ವೆ ಕಾರ್ಯ ಮಾಡಿ, ಬೆಳೆ ಬಂದಿರುವ ಸಂದರ್ಭದಲ್ಲಿ ಪರಿಶೀಲಿಸದೆ ಬೆಂಬಲ ಬೆಲೆಗೆ ಮಾರಾಟ ಮಾಡಲು ಅನುಮತಿಯಿಂದ ವಂಚಿತರಾಗಿರುತ್ತಾರೆ. ಈ ರೀತಿಯ ತಾಂತ್ರಿಕ ದೋಷವನ್ನು ಸರಿಪಡಿಸುವುದು.
- ರಾಗಿ ಖರೀದಿ ಕೇಂದ್ರಕ್ಕೆ ರೈತರಿಗೆ ನಿರ್ಬಂಧ ಮಾಡಿರುವ ಕ್ರಮ ಸರಿಯಿಲ್ಲ. ತಾನು ಬೆಳೆದ ಎಲ್ಲಾ ರಾಗಿಯನ್ನು ಖರೀದಿ ಮಾಡುವಂತೆ ಸರ್ಕಾರವು ಅನುವು ಮಾಡಿಕೊಡಬೇಕು.
- ನಿರಂತರವಾಗಿ ಸಂಘವು ಖರೀದಿ ಕೇಂದ್ರಗಳನ್ನು ತೆರೆಯಲು ಪ್ರತಿಭಟನೆ ಮೂಲಕ ಎಚ್ಚರಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಆದುದರಿಂದ ಬೆಂಬಲ ಬೆಲೆಯ ಖರೀದಿ ಕೇಂದ್ರಗಳನ್ನು ಕಾಲ ಕಾಲಕ್ಕೆ ತೆರೆಯುವ ಮೂಲಕ ರೈತರ ಸಂಕಷ್ಟಕ್ಕೆ ರಾಜ್ಯ ಸರ್ಕಾರವು ಮುಂದಾಲೋಚನೆ ಕ್ರಮ ಕೈಗೊಳ್ಳಬೇಕು.
ಈ ಮೇಲ್ಕಂಡ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಉಪವಿಭಾಗಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲು ಉಪವಿಭಾಗಾಧಿಕಾರಿಗಳು ಹುಣಸೂರು ಉಪವಿಭಾಗ ರವರು ಮನವಿ ಸ್ವೀಕರಿಸದಿರುವ ಕಾರಣ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಉಂಟಾಗಿದ್ದು, ಪ್ರತಿಭಟನೆ ಸಂದರ್ಭದಲ್ಲಿ ರೈತ ಸಂಘದ ಕಾರ್ಯಕರ್ತರು ಹಾಗೂ ದಸಂಸ ಸಂಘಟನೆ ಕಾರ್ಯಕರ್ತರನ್ನು ಡಿವೈಎಸ್ಪಿ ಗೋಪಾಲಕೃಷ್ಣ ಅವರ ನೇತೃತ್ವದ ಪೊಲೀಸ್ ಅಧಿಕಾರಿಗಳು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.
ಮನವಿ ಪತ್ರ ಸ್ವೀಕಾರವಾಗದ ಹಿನ್ನಲೆಯಲ್ಲಿ ರೈತರ ಬೇಡಿಕೆಯನ್ನು ಸರ್ಕಾರ ಕೂಡಲೆ ಈಡೇರಿಸಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗೆ ಇಳಿಯುವುದಾಗಿ ಈದಿನ. ಕಾಮ್ ಮೂಲಕ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಎಐಎಂಎಸ್ಎಸ್ ಸಂಘಟನೆಯಿಂದ ‘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ‘
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲ್ಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ರಾಜ್ಯ ಮಹಿಳಾ ಕಾರ್ಯದರ್ಶಿ ನೇತ್ರವತಿ, ಜಿಲ್ಲಾ ಉಪಾಧ್ಯಕ್ಷ ಆಲಿಜಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಜಿಲ್ಲಾ ಖಜಾಂಚಿ ಈಶ್ವರ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಅರಸ್, ಜಿಲ್ಲಾ ಪದಾಧಿಕಾರಿ ಬಸವರಾಜೇಗೌಡ, ಹೆಚ್ ಡಿ ಕೋಟೆ ರೈತ ಸಂಘದ ಅಧ್ಯಕ್ಷ ಮಹದೇವ ನಾಯಕ, ಕೆ.ಆರ್ ನಗರ ರೈತ ಸಂಘದ ಅಧ್ಯಕ್ಷ ಮಲ್ಲೇಶ್, ಪ್ರಗತಿಪರ ಸಂಘಟನೆ ಒಕ್ಕೂಟದ ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ, ಸಿದ್ದೇಶ್, ಪ್ರಕಾಶ್, ಚಿಕ್ಕ ಹುಣಸೂರು ರಾಜು, ನಾರಾಯಣ್, ಗಿರೀಶ್, ರವಿನಾಯಕ್, ಟಿ.ಎಂ. ಮೌನೇಶ್, ಶಿವರಾಜ್ ಎನ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು
