ರಾಜ್ಯ ಕಾಂಗ್ರೆಸ್ ಸರ್ಕಾರವು ಯುವ ಜನತೆಗೆ ಹೆಚ್ಚಿನ ಆದ್ಯತೆ ನೀಡಿ, ಅವರಿಗೆ ಉದ್ಯೋಗ ಸೃಷ್ಟಿ ಜತೆಗೆ ಕೌಶಲ್ಯಾಭಿವೃದ್ಧಿ ಮಾಡುವಲ್ಲಿ ಯಶಸ್ವೀ ಹೆಜ್ಜೆಗಳನ್ನಿಡುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ನಡೆದ ಉದ್ಯೋಗ ಮೇಳ-2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ದೇಶದಲ್ಲಿರುವ ದೊಡ್ಡ ನಿರುದ್ಯೋಗದ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸಲು ಸರ್ಕಾರವು ಯುವನಿಧಿಯಂತರ ಯುವಜನಪರ ಯೋಜನೆ ಜಾರಿಗೊಳಿಸಿ ದೇಶಕ್ಕೇ ಮಾದರಿಯಾಗಿದೆ. ಜೊತೆಗೆ 25 ಸಾವಿರ ಜನರಿಗೆ ವಿಶೇಷ ಕೌಶಲ್ಯ ತರಬೇತಿ ನೀಡಲಾಗಿದೆ. ರಾಜ್ಯಕ್ಕೆ ದೇಶ ವಿದೇಶಗಳಿಂದ ವಿವಿಧ ಕಂಪನಿಗಳು ಬಂಡವಾಳ ಹೂಡಲು ಹರಿದು ಬರುತ್ತಿವೆ” ಎಂದರು.
“ಬೆಂಗಳೂರು ನಗರದಲ್ಲಿ 47 ಸಾವಿರ ಜನರನ್ನೊಳಗೊಂಡ ಉದ್ಯೋಗ ಮೇಳ ಹಮ್ಮಿಕೊಂಡು, ಅದರಲ್ಲಿ ಸುಮಾರು 25 ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ. ಅದೇ ರೀತಿ ಮಾರ್ಚ್ 28ಕ್ಕೆ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ಅರ್ಹ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮಾತನಾಡಿ, “ಜಿಲ್ಲೆಯಲ್ಲಿ ಉದ್ಯೋಗಕ್ಕಾಗಿ ಅನೇಕ ಅಭ್ಯರ್ಥಿಗಳು ಮುಂದೆ ಬರುತ್ತಾರೆ. ಅಂತವರಿಗೆ ಈ ವೇದಿಕೆ ಉತ್ತಮ ದಾರಿದೀಪವಾಗಿದೆ. ವಿವಿಧ ಕಂಪನಿಗಳು ಜಿಲ್ಲಾಡಳಿತದೊಂದಿಗೆ ಮುಂದೆ ಬಂದಿದ್ದು, ಅಭ್ಯರ್ಥಿಗಳು ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅಲ್ಲದೆ ಜಿಲ್ಲೆಯಲ್ಲಿ ಅನೇಕ ಕಂಪನಿಗಳಿದ್ದು, ಅವುಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಕನಿಷ್ಠ ಶೇ.50% ರಷ್ಟು ಆದ್ಯತೆ ನೀಡಬೇಕು. ಉದ್ಯೋಗ ನೀಡಿದ ಕಂಪನಿಯಲ್ಲಿ ಅಭ್ಯರ್ಥಿಗಳು ಪ್ರಾಮಾಣಿಕವಾಗಿ ಸೇವೆ ಮಾಡಿ ತಂದೆ-ತಾಯಿಯರ ಆಸೆ ಈಡೇರಿಸಬೇಕೆಂದು” ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದ ಆವರಣದಲ್ಲಿ ಶನಿವಾರ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ 65ಕ್ಕೂ ಹೆಚ್ಚು ವಿವಿಧ ಕಂಪನಿಗಳು ಪಾಲ್ಗೊಂಡಿದ್ದು, 6,196 ಅಭ್ಯರ್ಥಿಗಳು ಆನ್ಲೈನ್ ನೋಂದಣಿಯಾಗಿದ್ದು, 693 ಮಂದಿಗೆ ಸ್ಥಳದಲ್ಲೇ ಉದ್ಯೋಗ ಪತ್ರ ವಿತರಿಸಲಾಯಿತು. 820 ಅಭ್ಯರ್ಥಿಗಳ ಕಿರು ಪಟ್ಟಿಯನ್ನು ಮಾಡಲಾಗಿದೆ. 1043 ಯುವನಿಧಿ ಫಲಾನುಭವಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ರಾಯಚೂರು| ಕೈಗಾರಿಕೆ ಭೂಮಿಯನ್ನು ಮಾರಾಟ ಮಾಡಿದ ಕಂಪನಿ; ಕ್ರಿಮಿನಲ್ ಕೇಸ್ ದಾಖಲಿಸಲು ಆಗ್ರಹ
ಈ ವೇಳೆ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಜಿಲ್ಲಾಧಿಕಾರಿ ನಿತೀಶ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಿ.ಯು.ಹುಡೇದ್, ಜಿಲ್ಲಾ ಕೈಗಾರಿಕಾ ಅಧಿಕಾರಿ ಬಸವರಾಜ ಯರಕಂಚಿ, ಜಿಲ್ಲಾ ಉದ್ಯೋಗಾಧಿಕಾರಿ ನವೀನ್ ಕುಮಾರ್ ಸೇರಿದಂತೆ ಇತರರು ಇದ್ದರು.
