ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧಿ ಮೂರು ಕೃಷಿ ಕಾಯ್ದೆ – ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಭಂಧಕ ಮತ್ತು ಸಂರಕ್ಷಣಾ ಕಾಯ್ದೆ, ಭೂಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ರೈತ ಸಂಘದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಈ ಮೂರು ಕಾಯ್ದೆಗಳ ವಿರುದ್ಧ 2020ರಿಂದಲೂ ನಿರಂತರವಾಗಿ ರಾಜ್ಯದಲ್ಲಿ ರೈತರು, ದಲಿತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ ಯುವಜನರು ಮತ್ತು ಪ್ರಗತಿಪರರು ಹೋರಾಟ ನಡೆಸುತ್ತಿದ್ದಾರೆ. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋರಾಟಕ್ಕೆ ಬೆಂಬಲ ನೀಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ತಿದ್ದಪಡಿ ಕಾಯ್ದೆಗಳನ್ನು ರದ್ದುಗೊಳಿಸುದಾಗಿ ಘೋಷಣೆ ಮಾಡಿದ್ದರು. ಈಗ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಈ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಮುಖಂಡ ನುಲೇನೂರು ಶಂಕ್ರಪ್ಪ, “ಈ ಹಿಂದೆ ರೈತ ಸಂಘ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಡಿ.ಕೆ ಶಿವಕುಮಾರ್ ಭಾಗವಹಿಸಿದ್ದರು. ಮೂರು ಕಾಯ್ದೆಗಳನ್ನು ಹಿಂಪಡೆಯುವುದಾಗಿ ತಮ್ಮ ಪ್ರಣಾಳಿಕೆಯನಲ್ಲಿ ಘೋಷಿಸಿದ್ದರು. ಜನ ವಿರೋದಿ, ಬಿಜೆಪಿ ಸರ್ಕಾರವನ್ನು ರಾಜ್ಯದ ಜನತೆ ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್‌ಗೆ ಅಭೂತಪೂರ್ವ ಬಹುಮತ ನೀಡಿ ಅಧಿಕಾರ ಕೊಟ್ಟಿದ್ದಾರೆ. ಎಲ್ಲ ಸಮಯದಾಯಗಳ ಹಿತಕ್ಕಾಗಿ ಸರ್ಕಾರ ಕೆಲಸ ಮಾಡಬೇಕು” ಎಂದು ಒತ್ತಾಯಿಸಿದರು.
- ಎಪಿಎಂಸಿ ಮಾರುಕಟ್ಟೆಯನ್ನು ರೈತ ಸ್ನೇಹಿಯಾಗಿ ರೂಪಿಸಬೇಕು. ಮಾರುಕಟ್ಟೆ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಿ ರೈತರಿಗೆ ಆಗುತ್ತಿರುವ ವಂಚನೆ, ಮೋಸವನ್ನು ತಪ್ಪಿಸಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು. ಭೂ ಸುಧಾರಣಾ ಕಾಯ್ದೆಯನ್ನು ಉಳುವ ರೈತನ ಕೇಂದ್ರಿತ ದೃಷ್ಟಿಯಿಂದ ಮತ್ತಷ್ಟು ಬಲಯುತಗೊಳಸಬೇಕು.
- ಭೂಸ್ವಾಧೀನ ಕಾಯ್ದೆ-2013ಕ್ಕೆ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೂಪಿಸಿರುವ ನಿಯಮಗಳು ರೈತ ವಿರೋಧಿಯಾಗಿವೆ. ಇದನ್ನು ಮಾರ್ಪಾಡು ಮಾಡಿ ರೈತಪರ ನಿಯಮಗಳನ್ನು ರೂಪಿಸಬೇಕು.
- ಹಿಂದಿನ ಸರ್ಕಾರ ಭೂ ಮಂಜೂರಾತಿ ಕಾಯ್ದೆಯ ನಿಯಮಗಳನ್ನು ಮೀರಿ ಸರ್ಕಾರಿ ಭೂಮಿಯನ್ನು ಸಂಘ ಪರಿವಾರಕ್ಕೆ ಮಂಜೂರು ಮಾಡಿದೆ ಅವುಗಳನ್ನೆಲ್ಲಾ ರದ್ದುಪಡಿಸಿ ಆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು.
- ಸಿದ್ದರಾಮಯ್ಯ ಅವರು 2013ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲಿ ಮೊದಲನೇ ಬಾರಿಗೆ ಕೃಷಿ ಬೆಲೆ ಆಯೋಗವನ್ನು ಮಾಡಿರುತ್ತೀರಿ ಇದು ಸ್ವಾಗತಾರ್ಹ ವಿಚಾರ, ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಸ್ವರೂಪ ನೀಡಿ, ಸ್ವಾಯತ್ತತೆ ಮತ್ತು ಸವಲತ್ತು ನೀಡುವುದರ ಮೂಲಕ ಸಬಲೀಕರಿಸಿ ಓರ್ವ ಸಮರ್ಥ ರೈತ ಪರ ಅಧ್ಯಕ್ಷರನ್ನು ಶೀಘ್ರವಾಗಿ ನೇಮಿಸಿ ಸ್ವಾಮಿನಾಥನ್ ಸಮಿತಿ ವರದಿ ಆಧರಿಸಿ ರೈತರ ಹಕ್ಕಾಗಿರುವ ಕನಿಷ್ಟ ಬೆಂಬಲ ಬೆಲೆಯನ್ನು ಅನುಷ್ಠಾನ ಗೊಳಿಸಬೇಕು. ಇದಕ್ಕೆ ಪೂರಕವಾಗಿ ಕನಿಷ್ಟ 5 ಸಾವಿರ ಕೋಟಿ ರೂಗಳ “ಬೆಲೆ ಆವರ್ತ ನಿಧಿ” ಸ್ಥಾಪಿಸಿ ಕೃಷಿ ಉತ್ಪನ್ನಗಳ ಧಾರಣೆ ಸ್ಥಿರೀಕರಣಕ್ಕೆ ಸಮರ್ಥ ಖರೀದಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
- ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 2022 ವಿದ್ಯುಚ್ಛಕ್ತಿ, ತಿದ್ದುಪಡಿ ಮಸೂದೆಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲವೆಂದು ಮುಂಬರುವ ಅಧಿವೇಶನದಲ್ಲ ತೀರ್ಮಾನಿಸಬೇಕು, ಮತ್ತು 10 ಹೆಚ್ ಪಿ ಕೃಷಿ ಪಂಪ್ ಸೆಟ್ ಗಳಿಗೆ ಉಚಿತವಾಗಿ ಗುಣಾತ್ಮಕ ವಿದ್ಯುತ್ ಸರಬರಾಜು ಮಾಡುವ ಬದ್ಧತೆಯನ್ನು ಉಳಿಸಿಕೊಳ್ಳಬೇಕು. ಕೃಷಿ ವಿದ್ಯುತ್ ಮೀಟರ್‌ಗಳಿಗೆ ಆಧಾರ್ ಜೋಡಣೆ ಮಾಡುವುದನ್ನು ತಡೆಹಿಡಿಯಬೇಕು.
- ವಿಶ್ವ ರೈತ ಚೇತನ ಪ್ರೊ ಎಂ ಡಿ ನಂಜುಂಡಸ್ವಾಮಿಯವರ ಕರೆಯ ಮೇರೆಗೆ ತಾರತಮ್ಯ ವಿದ್ಯುತ್ ನೀತಿಯನ್ನು ವಿರೋಧಿಸಿ ರೈತರು ಗೃಹ ಬಳಕೆ ವಿದ್ಯುತ್ ಕರವನ್ನು ಪಾವತಿಸದೆ ಕರಾ ನಿರಾಕರಣ ‘ಚಳುವಳಿ ಮಾಡಿದ್ದರು, ಈ ಸಂಬಂಧ 2017 ರಲ್ಲಿ ತಮ್ಮ ನೇತೃತ್ವದ ಸರ್ಕಾರ ಇದ್ದಾಗ ಮಾತುಕತೆ ನಡೆದು ಹಳೇ ಬಾಕಿಯನ್ನು ತಡೆಹಿಡಿದು (ಮನ್ನಾ ಮಾಡಿ) ನಂತರದ ಬಿಲ್ಲನ್ನು ಪಾವತಿಸಿಕೊಂಡು ಹೋಗಲು ಬೆಸ್ಕಾಂ ನಿರ್ಧರಿಸಿತ್ತು. ಆದರೆ ಹಳೇ ಬಾಕಿಯನ್ನು ಸಹ ವಸೂಲಿಗೆ ಎಸ್ಕಾಂಗಳು ಮುಂದಾಗಿದ್ದು, ಅದನ್ನು ತಡೆಹಿಡಿದು ರೈತ ಕುಟುಂಬದ ನೆರವಿಗೆ ಬರಬೇಕು. ಮತ್ತು ಕೆ ಇ ಆರ್ ಸಿ ಅವೈಜ್ಞಾನಿಕವಾಗಿ ವಿದ್ಯುತ್ ದರವನ್ನು ಹೆಚ್ಚಿಸಿದ್ದು ಅದನ್ನು ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಬೇಕು.
- ಮುಂಗಾರು ಮಳೆ ಕೆಲವು ಕಡೆ ಬದ್ದಿದ್ದು, ಸಮರ್ಪಕವಾಗಿ ಭಿತ್ತನೆ ಬೀಜ, ರಸಗೊಬ್ಬರ. ಕೀಟನಾಶಕಗಳನ್ನು ರೈತರಿಗೆ ಸಕಾಲದಲ್ಲಿ ನಿಗಧಿತ ಬೆಲೆಯಲ್ಲಿ ಸರಬರಾಜು ಮಾಡಬೇಕು ಕಳಪೆ ಪೂರೈಕೆ ಮತ್ತು ಮೋಸದ ವಸೂಲಿಗೆ ತಡೆಯೊಡ್ಡಬೇಕು.
- ಹಸಿರು ಕಾರಣಕ್ಕಾಗಿ ರೈತರು ಅವರ ಜಮೀನುಗಳಲ್ಲಿ ಮರಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ರಿಯಾಯಿತಿ ದರದಲ್ಲಿ ಅಗತ್ಯ ಸಸಿಗಳನ್ನು ನೀಡುತ್ತಿತ್ತು ಆದರೆ ಈ ಸಾಲಿನಲ್ಲಿ ಸಸಿಗಳ ಬೆಲೆಯನ್ನು ಹೆಚ್ಚು ಮಾಡಿದೆ ಅದನ್ನು ಹಿಂಪಡೆಯಬೇಕು.
- ಭಿತ್ತನೆ ಬೀಜ ಬೆಳೆದು ರೈತರು ಸಂಬಂಧಪಟ್ಟ ಬೀಜ ಕೇಂದ್ರಗಳಿಗೆ ನೀಡಿದ್ದು, ಅವರಿಗೆ ಬರಬೇಕಾದ ಹಣ ಒಂದೂವರೆ ವರ್ಷಗಳು ಕಳೆದರೂ ಪಾವತಿಯಾಗಿಲ್ಲ. ಕೂಡಲೇ ಅಂತಹ ರೈತರಿಗೆ ಹಣ ಪಾವತಿ ಮಾಡಿ ರೈತರೇ ಸ್ವತಃ ಬೀಜ ಬೆಳೆದುಕೊಳ್ಳಲು ಉತ್ತೇಜನ ನೀಡಬೇಕು.
- ಖರೀದಿ ಕೇಂದ್ರಗಳ ಮುಖಾಂತರ ರಾಗಿಯನ್ನು ಮಾರಾಟ ಮಾಡಿದ ರೈತರಿಗೆ ಹಿಂದಿನ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಬಾಕಿಯನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಬೇಕು.
- ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಅಡಿ ವಿಮೆ ತುಂಬಿದ ರೈತರಿಗೆ ನಷ್ಟ ಫಲಹಾರದ ಬಾಕಿ ವಿಮಾ ಕಂಪನಿಗಳು ಉಳಿಸಿಕೊಂಡಿದ್ದು, ಬಾಕಿಯನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು.
- ರಾಜ್ಯದ 12 ಜಿಲ್ಲೆಗಳಲ್ಲಿ ತೆಂಗು ಬೆಳೆಯುತ್ತಿದ್ದು, ಕೊಬ್ಬರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಕಳೆದ ವರ್ಷ ಕೊಟ್ಟು ಕ್ವಿಂಟಾಲ್ಲೆ 19,000 ರೂ. ಈ ವರ್ಷ ಕೆವಲ 8,500 ರೂಪಾಯಿ ಆಗಿದ್ದು ಸರಕಾರದ ಲೆಕ್ಕಾಚಾರದ ಪ್ರಕಾರವೇ ಕೊಬ್ಬರಿ ಕ್ವಿಂಟಾಲ್ ಉತ್ಪಾದನೆ ವೆಚ್ಚ 15,760 ರೂ. ಇದ್ದು ಕನಿಷ್ಠ ಕ್ವಿಂಟಾಲ್ ಗೆ 20,000 ರೂ. ದೊರಕಿಸಿಕೊಡಬೇಕು.
ಪ್ರತಿಭಟನೆಯಲ್ಲಿ ಧನಂಜಯ ರುದ್ರಸ್ವಾಮಿ ನಾಗರಾಜ ಹಂಪಣ್ಣ ಸುರೇಶ್ ಬಾಬು ಹೊರಕೆರಪ್ಪ ಶಿವಕುಮಾರ್ ಚೇತನ್ ಲಕ್ಷ್ಮಿಕಾಂತ್ ಅವಿನಾಶ್ ತಿಪ್ಪೇಸ್ವಾಮಿ ಮೇಟಿಕುರ್ಕೆ ಇತರ ರೈತ ಸಂಘದ ಸದಸ್ಯರು ಭಾಗವಹಿಸಿದ್ದರು.