ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗ ಇರುವ ಕಾಂಗ್ರೆಸ್ ಸರ್ಕಾರದಲ್ಲಿಯೇ ಕಮಿಷನ್ ಹಾವಳಿ ಹೆಚ್ಚಾಗಿದೆ. ಅಧಿಕಾರಿಗಳು ಹಿಂದಿಗಿಂತ ಈಗ ಹೆಚ್ಚು ಕಮಿಷನ್ ಪಡೆಯುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಕಮಿಷನ್ ಹಾವಳಿ ವಿರುದ್ಧ ಡಿ. ಕೆಂಪಣ್ಣ ಅವರ ನೇತೃತ್ವದಲ್ಲಿ ಹೋರಾಟ ನಡೆಸಿದ್ದೆವು. ಪ್ರತಿಫಲವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿಯೂ ಹಲವು ಇಲಾಖೆಗಳಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ” ಎಂದು ಆರೋಪಿಸಿದೆ.
“ಅಧಿಕಾರಿಗಳು ಕಮಿಷನ್ ಕೇಳುತ್ತಿರುವ ಬಗ್ಗೆ ಆಯಾ ಇಲಾಖೆಗಳ ಸಚಿವರ ಗಮನಕ್ಕೆ ತಂದಿದ್ದೇವೆ. ಆದರೂ, ಸಮಸ್ಯೆ ಬಗೆಹರಿದಿಲ್ಲ. ಕಮಿಷನ್ ಹಾವಳಿ ಮತ್ತಷ್ಟು ಹೆಚ್ಚಾಗಿದೆ” ಎಂದು ಸಂಘದ ಅಧ್ಯಕ್ಷ ಆರ್ ಮಂಜುನಾಥ್ ಹೇಳಿದ್ದಾರೆ.
ಸರ್ಕಾರಕ್ಕೆ ಪತ್ರ ಬರೆದಿರುವ ಮಂಜುನಾಥ್, “ಈಗಾಗಲೇ ಹಲವಾರು ಕಾಮಗಾರಿಗಳು ಮುಗಿದಿವೆ. ಆದರೂ, ಗುತ್ತಿಗೆ ಕಾಮಗಾರಿಯ ಹಣ ಬಿಡುಗಡೆಯಾಗಿಲ್ಲ. ಮೂರು ವರ್ಷಗಳಿಂದ 32 ಸಾವಿರ ಕೋಟಿ ರೂ. ಬಿಲ್ ಪಾವತಿಯಾಗಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
ಗುತ್ತಿಗೆದಾರರ ಸಂಘದ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಮಾರ್ಚ್ 3ರಂದು ಸಭೆ ಕರೆದಿದ್ದಾರೆ ಎಂದು ವರದಿಯಾಗಿದೆ.