‘ಸ್ವಾಧ್ಯಾಯ ಪರಿವಾರ’ ಎಂಬ ಆಧ್ಯಾತ್ಮಿಕ ಸಂಸ್ಥೆಯಲ್ಲಿ ನಡೆದಿದ್ದ ಅವ್ಯವಹಾರವನ್ನು ಪ್ರಶ್ನಿಸಿದ್ದ ಕಾರಣಕ್ಕೆ ಅನಿವಾಸಿ ಭಾರತೀಯನನ್ನು ಕೊಲೆ ಮಾಡಿದ ಪ್ರಕರಣದಲ್ಲಿ 10 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ 2006ರಲ್ಲಿ ಅನಿವಾಸಿ ಭಾರತೀಯ ಪಂಕಜ್ ತ್ರಿವೇದಿ ಎಂಬಾತನನ್ನು ಕೊಲೆ ಮಾಡಲಾಗಿತ್ತು. ‘ಸ್ವಾಧ್ಯಾಯ ಪರಿವಾರ’ ಆಧ್ಯಾತ್ಮಿಕ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದ ತ್ರಿವೇದಿ, ಸಂಸ್ಥೆಗೆ ಬಂದಿದ್ದ ವಿದೇಶಿ ದೇಣಿಗೆಯಲ್ಲಿನ ಅವ್ಯವಹಾರದ ಬಗ್ಗೆ ಪ್ರಶ್ನಿಸಿದ್ದರು ಎಂದು ಹೇಳಲಾಗಿದೆ.
ಸಂಸ್ಥೆಗೆ ಬಂದ ದೇಣಿಗೆ ಕುರಿತು ಪ್ರಶ್ನಿಸಿದ್ದಕ್ಕಾಗಿಯೇ ಅವರನ್ನು ಕೊಲೆ ಮಾಡಲಾಗಿತ್ತು ಎಂದು ಆರೋಪಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಹಮದಾಬಾದ್ ಸೆಷನ್ಸ್ ಕೋರ್ಟ್, ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿದೆ. 10 ಮಂದಿಗೂ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.
2001ರಲ್ಲಿ ಸಂಭವಿಸಿದ್ದ ಭುಜ್ ಭೂಕಂಪದಿಂದಾದ ನಷ್ಟಕ್ಕೆ ಪರಿಹಾರವಾಗಿ ‘ಸ್ವಾಧ್ಯಾಯ ಪರಿವಾರ’ ಸಂಸ್ಥೆಯು ವಿದೇಶಿ ದೇಣಿಗೆ ಪಡೆಯಲು ತ್ರಿವೇದಿ ಸಹಾಯ ಮಾಡಿದ್ದರು. ಆದಾಗ್ಯೂ, ಹಣದ ಬಳಕೆ ಬಗ್ಗೆ ಸಂಸ್ಥಯನ್ನು ತ್ರಿವೇದಿ ಪ್ರಶ್ನಿಸಿದ್ದರು. ಆ ಕಾರಣಕ್ಕೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು.