ಕ್ರೀಡಾ ಕ್ಷೇತ್ರದಲ್ಲಿ ನಿರಂತರ 45 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದ ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಆರ್.ಶಂಕರ್ ಕುಮಾರ್ ಅವರಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಜೀವಮಾನದ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕ್ರೀಡಾ ರಂಗದಲ್ಲಿ ಯುವಕ ಸಂಘ ಕಟ್ಟಿ ಸಾವಿರಾರು ಯುವಕರಿಗೆ ಕೊಕ್ಕೋ, ವಾಲಿಬಾಲ್, ಕಬಡ್ಡಿ ಹಾಗೂ ವೈಯಕ್ತಿಕ ಅಥ್ಲೆಟಿಕ್ ಕ್ರೀಡೆಯಲ್ಲಿ ನೂರಾರು ಪ್ರತಿಭೆಯನ್ನು ತರಬೇತಿ ನೀಡಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಪಟುವಾಗಿ ತಯಾರು ಮಾಡಿದ ಕೀರ್ತಿ ಶಂಕರ್ ಕುಮಾರ್ ಅವರಿಗೆ ಸಲ್ಲುತ್ತದೆ.

ಗುಬ್ಬಿ ತಾಲ್ಲೂಕಿನ ಹಲವು ಕ್ರೀಡಾಪಟುಗಳು ಇಂದಿಗೂ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮತ್ತೆ ಕೆಲವರು ಉತ್ತಮ ಸ್ಥಾನಮಾನ ಗಳಿಸಿ ಉನ್ನತ ಹುದ್ದೆ ಅಲಂಕರಿಸಿದ ನಿದರ್ಶನಗಳಿವೆ. ಗುಬ್ಬಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದಿಗೂ ಮಕ್ಕಳಿಗೆ ತರಬೇತಿ ಕಾರ್ಯ ನಡೆಸುತ್ತಿರುವ ಅವರನ್ನು ಜಿಲ್ಲಾ ಪಂಚಾಯಿತಿ ಗುರುತಿಸಿ ಜೀವಮಾನದ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತುಮಕೂರು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್, ಶಾಸಕರಾದ ಟಿ.ಜೆ.ಜಯಚಂದ್ರ, ಎಂ.ಟಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಓ ಪ್ರಭು ಇತರರು ಇದ್ದರು.