ಎಪ್ರಿಲ್ 14ರಂದು ನಡೆಯಲಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹಾಡು ಸರಣಿ ಏರ್ಪಡಿಸಬೇಕೆಂದು ಕಲಬುರಗಿಯ ಉಪನ್ಯಾಸಕ ಪಂಡಿತ ಬಿ.ಮದಗುಣಕಿ ಮನವಿ ಮಾಡಿದ್ದಾರೆ.
ಈ ಸಂಬಂಧ ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರ ಅವರಿಗೆ ಪತ್ರ ಬರೆದಿರುವ ಅವರು, ʼಜೀ ಕನ್ನಡ ವಾಹಿನಿಯಲ್ಲಿ ಬರುವ ಸರಿಗಮಪ ಕಾರ್ಯಕ್ರಮ ವೀಕ್ಷಕ ಅಭಿಮಾನಿಯಾಗಿದ್ದು, ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಡಾ.ಅಂಬೇಡ್ಕರ್ ಅವರ ಜೀವನಾಧಾರಿತ ʼಮಹಾನಾಯಕʼ ಧಾರವಾಹಿ ಕೋಟ್ಯಾಂತರ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ಕಿರುತೆರೆಯಲ್ಲಿಯೇ ಹೊಸ ದಾಖಲೆ ಸೃಷ್ಟಿಸಿತುʼ ಎಂದರು.
ʼಈಗ ಜೀ ಕನ್ನಡ ವಾಹಿನಿಯಲ್ಲಿ ಜರುಗುತ್ತಿರುವ ಸರಿಗಮಪ ಶೋನಲ್ಲಿ ರಾಜ್ಯದ ಎಲ್ಲಾ ಸಮುದಾಯದ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ಶ್ರೇಯಸ್ಸು ತಮ್ಮದಾಗಿದೆ. ಹೀಗಾಗಿ ಸಾವಿರಾರು ವರ್ಷಗಳಿಂದ ಜಾತಿ, ಅನ್ಯಾಯ, ಅಸಮಾನತೆ, ಅಸ್ಪೃಶ್ಯತೆ ಬೇರೂರಿದ್ದ ಸಮಾಜದಲ್ಲಿ ಶ್ರೇಷ್ಠ ಸಂವಿಧಾನ ರಚಿಸುವ ಮುಖಾಂತರ ಮಾನವೀಯ ನೆಲೆಯಲ್ಲಿ ಸಾಮಾಜಿಕ ಸಮಾನತೆ ನೀಡಿದ ಬಾಬಾ ಸಾಹೇಬ್ ಅವರ ಚಿಂತನೆಗಳು ಇಂದಿನ ಸಮಾಜಕ್ಕೆ ಮುಟ್ಟಿಸುವುದು ಅತ್ಯಂತ ಅವಶ್ಯಕವಾಗಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿಸಿದ ದುರುಳ ಪೊಲೀಸರ ಬಲೆಗೆ
ʼಸರಿಗಮಪ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಕುರಿತಾದ ಜನಪದ, ಕ್ರಾಂತಿಗೀತೆಗಳು ಲಭ್ಯವಿದ್ದು, ಏಪ್ರಿಲ್ ತಿಂಗಳಲ್ಲಿ ಡಾ.ಅಂಬೇಡ್ಕರ್ ಅವರ ಜಯಂತಿ ಆಚರಣೆಯ ವೇಳೆ ಜೀ ಕನ್ನಡ ವಾಹಿನಿಯ ಸರಿಗಮಪ ಶೋನಲ್ಲಿ ʼಡಾ.ಬಿ.ಆರ್.ಅಂಬೇಡ್ಕರ್ ಗೀತೆಗಳುʼ ಎಂಬ ಹೆಸರಿನಲ್ಲಿ ಹಾಡು ಸರಣಿ ಏರ್ಪಡಿಸಿ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಬೇಕುʼ ಎಂದು ಕೋರಿದ್ದಾರೆ.