ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ವಜಾ ಮಾಡಿದ್ದಾರೆ.
ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಇಂದು ನಡೆದ ಲಖನೌದಲ್ಲಿ ನಡೆದ ಅಖಿಲ ಭಾರತ ಪಕ್ಷದ ಸಭೆಯಲ್ಲಿ, ತಾವು ಬದುಕಿರುವವರೆಗೂ ಪಕ್ಷದಲ್ಲಿ ಯಾರೂ ತಮ್ಮ ಉತ್ತರಾಧಿಕಾರಿಯಾಗುವುದಿಲ್ಲ ಎಂದು ಘೋಷಿಸಿದರು. ಆ ಮೂಲಕ ಅವರು ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಮಾಯಾವತಿಯವರ ರಾಜಕೀಯ ಉತ್ತರಾಧಿಕಾರಿ ಮತ್ತು ಬಿಎಸ್‌ಪಿಯ ರಾಷ್ಟ್ರೀಯ ಸಂಯೋಜಕ ಜವಾಬ್ದಾರಿಗಳಿಂದ ಬಿಡುಗಡೆ ಮಾಡಿದರು.
ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ರಾಜ್ಯಸಭಾ ಸಂಸದ ಅಶೋಕ್ ಸಿದ್ಧಾರ್ಥ್ ಅವರನ್ನು ಪಕ್ಷದಿಂದ ಹೊರಹಾಕಿದ ಕೆಲವೇ ದಿನಗಳಲ್ಲಿ ಮಾಯಾವತಿಯವರ ನಿರ್ಧಾರ ಹೊರಬಿದ್ದಿದೆ. ಅಶೋಕ್ ಸಿದ್ಧಾರ್ಥ್ ಅವರು ಆಕಾಶ್ ಆನಂದ್ ಅವರ ಮಾವ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯ ‘ಗುಜರಾತ್ ಮಾಡೆಲ್’ ಬಚ್ಚಿಟ್ಟ ಸತ್ಯಗಳು!
ಭಾನುವಾರ, ಆಕಾಶ್ ಆನಂದ್ ಅವರ ರಾಜಕೀಯ ಜೀವನದ ಮೇಲೆ ಅವರ ಮಾವ ಪ್ರಭಾವ ಬೀರಿದ್ದಾರೆ. ಅವರು ಆಕಾಶ್ ಆನಂದ್ ಅವರ ಪತ್ನಿ, ತಮ್ಮ ಮಗಳು ಪ್ರಜ್ಞಾ ಮೂಲಕ ಆಕಾಶ್ ಅವರ ಮೇಲೆ ಇನ್ನೂ ಪ್ರಭಾವ ಬೀರುತ್ತಿರಬಹುದು ಎಂದು ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಸಭಾ ಸಂಸದ ರಾಮ್‌ಜಿ ಗೌತಮ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕರನ್ನಾಗಿ ಮತ್ತೆ ನೇಮಕ ಮಾಡಲಾಗಿದೆ. ರಾಮ್‌ಜಿ ಗೌತಮ್ ಅವರು 2019 ರವರೆಗೆ ಈ ಹುದ್ದೆಯನ್ನು ನಿಭಾಯಿಸಿದ್ದರು. ಅವರು ಈಗ ಮಾಯಾವತಿಯವರ ಕಿರಿಯ ಸಹೋದರ ಆನಂದ್ ಕುಮಾರ್ ಅವರೊಂದಿಗೆ ಈ ಹುದ್ದೆಯನ್ನು ಹಂಚಿಕೊಳ್ಳಲಿದ್ದಾರೆ.
ಆಕಾಶ್ ಆನಂದ್ ಅವರನ್ನು ತಮ್ಮ ಜವಾಬ್ದಾರಿಗಳಿಂದ ವಜಾಗೊಳಿಸುತ್ತಿರುವುದು ಇದು ಎರಡನೇ ಬಾರಿ. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಮೊದಲ ಬಾರಿಗೆ ಮೇ ತಿಂಗಳಲ್ಲಿ ಅವರನ್ನು ವಜಾಗೊಳಿಸಲಾಗಿತ್ತು. ಆ ಬಳಿಕ ಜುಲೈನಲ್ಲಿ, ಮಾಯಾವತಿ ಅವರನ್ನು ಮತ್ತೆ ನೇಮಿಸಿದ್ದರು.