ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಮುಕ್ತೈನಗರ ಪ್ರದೇಶದಲ್ಲಿ ನಡೆದ ಜಾತ್ರೆಯೊಂದರಲ್ಲಿ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆ ರಾಜ್ಯ ಸಚಿವೆ ರಕ್ಷಾ ಖಡ್ಸೆ ಅವರ ಪುತ್ರಿಗೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಈ ಕುರಿತು ಸಚಿವೆ ರಕ್ಷಾ ಖಡ್ಸೆ ಮುಕ್ತಾನಗರದ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡ ಯಾತ್ರೆ ವೇಳೆ ತನ್ನಪುತ್ರಿಗೆ ಕಿರುಕುಳ ನೀಡಲಾಗಿದೆ ಎಂದು ಸಚಿವರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್, ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಮಾತನಾಡಿದ ರಕ್ಷಾ ಖಡ್ಸೆ, ಶಿವರಾತ್ರಿ ಹಬ್ಬದ ಪ್ರಯುಕ್ತ ಮುಕ್ತೈನಗರ ಪ್ರದೇಶದ ಕೋಥಾಲಿಯಲ್ಲಿ ಪ್ರತಿ ವರ್ಷ ಯಾತ್ರೆಯನ್ನು ಆಯೋಜಿಸಲಾಗುತ್ತದೆ. ಎರಡು ದಿನಗಳ ಹಿಂದೆ ನನ್ನ ಮಗಳು ಜಾತ್ರೆಗೆ ಆಗಮಿಸಿದ್ದಾಳೆ. ಕೆಲವು ಹುಡುಗರು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ನಾನು ಸಂಸದೆ ಹಾಗೂ ಕೇಂದ್ರ ಸಚಿವೆಯಾಗಿ ಬಾರದೆ ಒಬ್ಬ ತಾಯಿಯಾಗಿ ನ್ಯಾಯ ಪಡೆಯಲು ಬಂದಿದ್ದೇನೆ. ನಾನು ಗುಜರಾತಿನಲ್ಲಿದ್ದಾಗ, ನನ್ನ ಮಗಳು ಕರೆ ಮಾಡಿ ಜಾತ್ರೆಯಿಂದ ಮನೆಗೆ ಹೋಗುವುದಾಗಿ ತಿಳಿಸಿದಳು. ನಾನು ಭದ್ರತಾ ಸಿಬ್ಬಂದಿಯೊಂದಿಗೆ ತೆರಳುವಂತೆ ಸೂಚಿಸಿದೆ. ನನ್ನ ಮಗಳು ಹಾಗೂ ಆಕೆಯ ಸ್ನೇಹಿತೆಯರು ವಾಪಸ್ ತೆರಳುತ್ತಿದ್ದಾಗ ಒಂದಷ್ಟು ಹುಡುಗರು ಆಕೆಯನ್ನು ಹಿಂಬಾಲಿಸಿ ತಳ್ಳಿ ಕಿರುಕುಳ ನೀಡಿದ್ದಾರೆ. ಫೋಟೊ ಹಾಗೂ ವಿಡಿಯೋಗಳನ್ನು ತೆಗೆದುಕೊಂಡಿದ್ದಾರೆ. ನಮ್ಮ ಭದ್ರತಾ ಸಿಬ್ಬಂದಿ ಪ್ರಶ್ನಿಸಿದಾಗ ಹುಡುಗರು ಕೆಟ್ಟದಾಗಿ ವರ್ತಿಸಿದ್ದಾರೆ. 30 ರಿಂದ 40 ಜನರ ದುಷ್ಕರ್ಮಿಗಳ ಗುಂಪು ಸ್ಥಳದಲ್ಲಿತ್ತು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯ ‘ಗುಜರಾತ್ ಮಾಡೆಲ್’ ಬಚ್ಚಿಟ್ಟ ಸತ್ಯಗಳು!
ಮುಕ್ತೈನಗರ ಉಪವಿಭಾಗೀಯ ಪೊಲೀಸ್ ಅಧಿಕಾರಿ ಕೃಷ್ಣತ್ ಪಿಂಗಳೆ ಈ ಕುರಿತು ಪ್ರತಿಕ್ರಿಯಿಸಿ, 2025ರ ಫೆಬ್ರವರಿ 28ರಂದು ಕೊತ್ತಲಿ ಗ್ರಾಮದಲ್ಲಿ ಯಾತ್ರೆ ನಡೆದಿತ್ತು. ಯಾತ್ರೆಯಲ್ಲಿ ಅನಿಕೇತ್ ಘುಯಿ ಮತ್ತು ಆತನ 6 ಮಂದಿ ಸ್ನೇಹಿತರು ಬಾಲಕಿಯರಿಗೆ ಕಿರುಕುಳ ನೀಡಿದ್ದಾರೆ. ನಾವು ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸಿದ್ದೇವೆ. ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ ಆರು ಮಂದಿ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.
