ಷೇರು ಮಾರುಕಟ್ಟೆ ವಂಚನೆ ಮತ್ತು ನಿಯಂತ್ರಕ ಉಲ್ಲಂಘನೆ ಆರೋಪದ ಮೇಲೆ ಮಾಜಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಇತರ ಐವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಶನಿವಾರ ಮುಂಬೈನ ವಿಶೇಷ ನ್ಯಾಯಾಲಯವು ಆದೇಶಿಸಿದೆ ಎಂದು ವರದಿಯಾಗಿದೆ.
ಬುಚ್ ಮತ್ತು ಇತರರ ಮೇಲಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸ್ಥಳೀಯ ಪತ್ರಕರ್ತರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶ ಶಶಿಕಾಂತ್ ಏಕನಾಥರಾವ್ ಅವರ ಪೀಠ ನಡೆಸಿದ್ದು, ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದಾರೆ. ಸೆಬಿ ಮಾಜಿ ಅಧ್ಯಕ್ಷೆ ಮೇಲೆ ವಿರುದ್ಧ ಆರ್ಥಿಕ ವಂಚನೆ, ನಿಯಂತ್ರಕ ಉಲ್ಲಂಘನೆ ಮತ್ತು ಭ್ರಷ್ಟಾಚಾರದಂತಹ ಗಂಭೀರ ಆರೋಪವಿದೆ.
ಇದನ್ನು ಓದಿದ್ದೀರಾ? ಪಿಎಸಿ ಸಭೆಗೆ ಎರಡನೇ ಬಾರಿಯೂ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಗೈರು
“ನಿಯಂತ್ರಣ ವೈಫಲ್ಯಗಳು ಮತ್ತು ಒಪ್ಪಂದದ ಪ್ರಾಥಮಿಕ ಪುರಾವೆಗಳಿವೆ. ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ. ಈ ಪ್ರಕರಣದಲ್ಲಿ ನ್ಯಾಯಾಂಗ ಹಸ್ತಕ್ಷೇಪದ ಅಗತ್ಯವಿದೆ” ಎಂದು ನ್ಯಾಯಾಧೀಶ ಏಕನಾಥರಾವ್ ತೀರ್ಪು ನೀಡಿದ್ದಾರೆ.
ಶುಕ್ರವಾರ ಸೆಬಿ ಮುಖ್ಯಸ್ಥೆಯಾಗಿ ಬುಚ್ ತಮ್ಮ ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಇದಾದ ಒಂದು ದಿನದ ಬಳಿಕವೇ ಕೋರ್ಟ್ ಬುಚ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿದೆ. ತುಹಿನ್ ಕಾಂತ ಪಾಂಡೆ ಸದ್ಯ ಸೆಬಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಮಾಧವಿ ಮೇಲಿರುವ ಆರೋಪವೇನು?
ಸೆಬಿ ಅಧ್ಯಕ್ಷೆಯಾಗಿದ್ದಾಗ ಮಾಧವಿ ಅವರು ಮಾನದಂಡಗಳನ್ನು ಪಾಲಿಸದ ಸಂಸ್ಥೆಗಳನ್ನು ಪಟ್ಟಿ ಮಾಡಲು ಅನುಮತಿ ನೀಡಿದ್ದು ಇದರಿಂದಾಗಿ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ನಷ್ಟವಾಗಿದೆ. ಸೆಬಿ ಮತ್ತು ಕಾರ್ಪೊರೇಟ್ ಸಂಸ್ಥೆಗಳ ನಡುವಿನ ಒಪ್ಪಂದ, ಆಂತರಿಕ ವ್ಯಾಪಾರದಿಂದಾಗಿ ಜನರಿಗೆ ವಂಚನೆಯಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಅದಾನಿಗಾಗಿ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ರಕ್ಷಣೆಗೆ ನಿಂತರೆ ಮೋದಿ?
ಹಲವು ಬಾರಿ ಸಂಬಂಧಪಟ್ಟ ಪೊಲೀಸ್ ಠಾಣೆ ಮತ್ತು ನಿಯಂತ್ರಕ ಸಂಸ್ಥೆಗಳನ್ನು ಸಂಪರ್ಕಿಸಿದರೂ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ. ಈ ಬೆನ್ನಲ್ಲೇ ತನಿಖೆಯನ್ನು ಮೇಲ್ವಿಚಾರಣೆ ಮಾಡುವುದಾಗಿ ನ್ಯಾಯಾಲಯ ಹೇಳಿದೆ. ಹಾಗೆಯೇ 30 ದಿನಗಳಲ್ಲಿ ವರದಿ ನೀಡುವಂತೆ ಆದೇಶಿಸಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಹಿಂಡನ್‌ಬರ್ಗ್ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ವಿರುದ್ಧ ಗಂಭೀರ ಆರೋಪವನ್ನು ಮಾಡಿತ್ತು. ದಂಪತಿ ಅದಾನಿ ಗ್ರೂಪ್‌ಗೆ ಸಂಬಂಧಿಸಿದ ವಿದೇಶಿ ಸಂಸ್ಥೆಗಳಲ್ಲಿ ಹೂಡಿಕೆ ಹೊಂದಿದ್ದಾರೆ, ಆದರೆ ಅದು ಬಹಿರಂಗಪಡಿಸಿಲ್ಲ ಎಂದು ದೂರಿತ್ತು.
