ಅತ್ತ ಉನ್ನತ ಶಿಕ್ಷಣ ಸಂಸ್ಥೆ ಇಲ್ಲದೆ, ಇತ್ತ ಸಾಕ್ಷರತೆ ಪ್ರಮಾಣವೂ ಅಧಿಕವಿಲ್ಲವೇ ಯಾದಗಿರಿ ಇಂದಿಗೂ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿದೆ. ಕಳೆದ ವರ್ಷ (2024) ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉಡುಪಿ ಮೊದಲ ಸ್ಥಾನ ಪಡೆದಿದ್ದರೆ, ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ 35ನೇ ಅಂದರೆ ಕೊನೆಯ ಸ್ಥಾನವನ್ನು ಪಡೆದಿತ್ತು. 2023ರಲ್ಲಿಯೂ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದು, ಈವರೆಗೂ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಸಬಲಗೊಳಿಸುವ ಪ್ರಯತ್ನಗಳು ನಡೆದಿಲ್ಲ.
ಯಾದಗಿರಿಯಲ್ಲಿ ಸುಮಾರು 1050 ಪ್ರಾಥಮಿಕ ಶಾಲೆಗಳು, 148 ಪ್ರೌಢ ಶಾಲೆಗಳುಮ, 42 ಪದವಿ ಪೂರ್ವ ಕಾಲೇಜುಗಳಿದ್ದರೆ, ಇಡೀ ಜಿಲ್ಲೆಯಲ್ಲಿ ಬರೀ ಆರು ಪದವಿ ಕಾಲೇಜುಗಳಿವೆ. ಆದರೆ ಒಂದೇ ಒಂದು ಉನ್ನತ ಶಿಕ್ಷಣ ಸಂಸ್ಥೆಗಳಿಲ್ಲ. ಅದರಲ್ಲೂ ವಿಜ್ಞಾನ ಬೋಧಿಸುವ ಕಾಲೇಜುಗಳು ಅತೀ ಕಡಿಮೆಯಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಯಾದಗಿರಿ| ವಿಶ್ವ ವಿಖ್ಯಾತ ಹಂಪಿ ಉತ್ಸವ ಮಹಿಳಾ ಕವಿಗೋಷ್ಠಿಗೆ ನೀಲಮ್ಮ ಬಿ. ಮಲ್ಲೆ ಆಯ್ಕೆ
ಸುಮಾರು ಮೂರು ವರ್ಷಗಳ ಹಿಂದೆಯೇ ಯಾದಗಿರಿ ಜಿಲ್ಲೆಯನ್ನು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿ ಘೋಷಿಸಲಾಗಿದೆ. ಆದರೆ ಈಗವರೆಗೂ ಜಿಲ್ಲೆಯಲ್ಲಿ ಯಾವುದೇ ಸುಧಾರಣೆ ಕ್ರಮಗಳು ನಡೆದಿಲ್ಲ. ಕಳೆದ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಕಡಿಮೆ ಫಲಿತಾಂಶ ಪಡೆದ ಜಿಲ್ಲೆ (ಶೇಕಡ 51.87) ಎಂಬ ಅಪಖ್ಯಾತಿಯನ್ನು ಪಡೆದ ಯಾದಗಿರಿಯ ಒಟ್ಟು ಸಾಕ್ಷರತಾ ಪ್ರಮಾಣ ಶೇಕಡ 39.8ರಷ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಶೇಕಡ 34.56 ಮತ್ತು ನಗರ ಪ್ರದೇಶದಲ್ಲಿ ಶೇಕಡ 63.5ರಷ್ಟು ಸಾಕ್ಷರರಿದ್ದಾರೆ.
ಇನ್ನು ಜಿಲ್ಲೆಯ ಈ ಸಾಕ್ಷರತೆ ಪ್ರಮಾಣ ಕಡಿಮೆ ಇರುವುದಕ್ಕೆ ಪ್ರಮುಖ ಸಮಸ್ಯೆ ಗುಳೇ ಹೋಗುವುದಾಗಿದೆ ಎಂಬ ವಾದವಿದೆ. ಈ ಜಿಲ್ಲೆಯ ಜನರು ಹೆಚ್ಚಾಗಿ ಗುಳೇ ಯೋಗುತ್ತಾರೆ. ಆದ್ದರಿಂದ ಮಕ್ಕಳು ಶಿಕ್ಷಣ ಪಡೆಯಲಾಗುತ್ತಿಲ್ಲ ಎಂದು ಹೇಳಲಾಗಿದೆ. ಆದರೆ ಸರ್ಕಾರದ ಕಡೆಗಣನೆಯನ್ನೂ ನಾವು ಅಲ್ಲಗಳೆಯುವಂತಿಲ್ಲ.
ಕಳೆದ ವರ್ಷ (2024-25ನೇ ಶೈಕ್ಷಣಿಕ ವರ್ಷ) ಶಾಲೆ ಆರಂಭವಾಗಿ ಒಂದುವರೆ ತಿಂಗಳು ಕಳೆದರೂ ಕೂಡಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಮವಸ್ತ್ರ ಲಭಿಸಿರಲಿಲ್ಲ. ಕೆಲ ಮಕ್ಕಳಿಗೆ ಪಠ್ಯಪುಸ್ತಕವೂ ವಿತರಣೆಯಾಗಿರಲಿಲ್ಲ. ಜೊತೆಗೆ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯೂ ಅಧಿಕವಾಗಿದೆ.
