ಕೆಪಿಸಿಸಿ ಅಧ್ಯಕ್ಷ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಡಿಸೆಂಬರ್ ತಿಂಗಳ ಒಳಗೆ ಮುಖ್ಯಮಂತ್ರಿಯಾಗಲಿದ್ದಾರೆ. ಇದನ್ನು ರಕ್ತದಲ್ಲಿ ಬೇಕಾದರೂ ನಾನು ಬರೆದುಕೊಡುತ್ತೇನೆ. ಮುಖ್ಯಮಂತ್ರಿ ಆಗುವುದು ಖಚಿತ” ಎಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಮುಖ್ಯಮಂತ್ರಿಯ ಅವಧಿಯ ಒಪ್ಪಂದದ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ವಾಗ್ಯುದ್ದ, ಆರೋಪಗಳು ನಡೆಯುತ್ತಿರುವ ಬೆನ್ನಲ್ಲೇ ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ಮಹತ್ವ ಪಡೆದುಕೊಂಡಿದ್ದು, ಖಚಿತವಾಗಿ ನುಡಿಯುತ್ತಿರುವ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಶಾಪಿಂಗ್ ಮಳಿಗೆಯಲ್ಲಿ ಕನ್ನಡ ಕಡೆಗಣನೆ; ಕನ್ನಡಪರ ಸಂಘಟನೆಗಳ ಕಿಡಿ.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಈ ಬಗ್ಗೆ ಮಾತನಾಡಿದ ಅವರು, “ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷರವರೆಗೆ ಡಿಕೆ ಶಿವಕುಮಾರ್ ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದಾರೆ. ರಾಜ್ಯದ 80 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಅವರ ಮಹತ್ವದ ಪಾತ್ರವಿದೆ. ಡಿಸೆಂಬರ್ ನಂತರ ಈ ಅವಧಿ ಸೇರಿದಂತೆ ಮುಂದಿನ ಅವಧಿಯವರೆಗೆ ಏಳೂವರೆ ವರ್ಷಗಳವರೆಗೂ ಅವರು ಸಿಎಂ ಆಗಿ ಮುಂದುವರೆಯಲಿದ್ದಾರೆ. ಅವರು ಯಾವುದೇ ನಿರ್ಧಾರ ತೆಗೆದುಕೊಂಡರು ನಾವು ಅವರನ್ನು ಬೆಂಬಲಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಕೆ. ಎನ್. ರಾಜಣ್ಣ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು “ಹಿರಿಯ ಸಚಿವರ ಹೇಳಿಕೆಯಿಂದ ಪಕ್ಷಕ್ಕೆ, ಸರ್ಕಾರಕ್ಕೆ ಭಾರೀ ಮುಜುಗರವಾಗುತ್ತದೆ. ಹೈಕಮಾಂಡ್ ನಾಯಕರು ಗಮನಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಪಕ್ಷವನ್ನು ಬಿಟ್ಟು ಯಾರೂ ದೊಡ್ಡವರಲ್ಲ. ಇಲ್ಲಿ ಪಕ್ಷ ಮಾತ್ರವೇ ದೊಡ್ಡದು” ಎಂದು ಸಚಿವ ರಾಜಣ್ಣರಿಗೆ ಟಾಂಗ್ ನೀಡಿದರು.