“ಹಾನಗಲ್ಲ ಜನರ ಬಳಿಗೆ ಆಡಳಿತ ತರುವ ಜನಸ್ಪಂದನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ತಾಲೂಕಿನಲ್ಲಿ ಈ ವರೆಗೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳ ಪೈಕಿ 600ಕ್ಕೂ ಅಧಿಕ ಅರ್ಜಿಗಳ ವಿಲೇವಾರಿ ಮಾಡಲಾಗಿದೆ” ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಆಡೂರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತ ಹಾಗೂ ತಾಪಂ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಕಂದಾಯ ಹಾಗೂ ಕೃಷಿ ಇಲಾಖೆ ಜನರ ಜೀವನಾಡಿ, ಹಾಗಾಗಿ ಈ ಇಲಾಖೆಗಳಿಗೆ ಚುರುಕು ಮುಟ್ಟಿಸುವ ಹಾಗೂ ಬದಲಾವಣೆ ಕೆಲಸ ಮಾಡಲಾಗುತ್ತಿದೆ. ಬಿ ಖಾತೆ ಸೇರಿದಂತೆ ಎಲ್ಲ ದಾಖಲೆಗಳನ್ನು ಕಂಪ್ಯೂಟರೀಕರಣಗೊಳಿಸಲಾಗುತ್ತಿದೆ. 30ರಿಂದ 40 ವರ್ಷಗಳಿಂದ ವಾಸಿಸುವವರಿಗೆ ಪಟ್ಟಾ ನೀಡುವ ಕೆಲಸ ಮಾಡಲಾಗುತ್ತಿದೆ” ಎಂದರು.
ಜಿಲ್ಲಾಧಿಕಾರಿಗಳು ಡಾ. ವಿಜಯ ಮಹಾಂತೇಶ್ ದಾನಮ್ಮನವರ ಮಾತನಾಡಿ, “ಹಾನಗಲ್ಲ ತಾಲೂಕಿನಲ್ಲಿ ಈಗಾಗಲೇ ಆರರಿಂದ ಏಳು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಸ್ವೀಕರಿಸುವ ಅಹವಾಲುಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗುವುದು” ಎಂದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಮನೆಹಾನಿ ಪರಿಹಾರ, ಹೊಲಕ್ಕೆ ದಾರಿ, ಭೂಸ್ವಾಧೀನ ಪರಿಹಾರ, ಪಹಣಿಯಲ್ಲಿನ ಸರ್ಕಾರ ಕಡಿಮೆ ಮಾಡಲು ಹಾಗೂ ಕಣ್ಣಿನ ಶಸ್ತ್ರಚಿಕಿತ್ಸೆ ಹಣದ ಬೇಡಿಕೆ, ಬಿ ಖಾತಾ ಪಹಣಿ, ಬಸ್ ಸೌಲಭ್ಯ ಮುಂತಾದವುಗಳು ಅರ್ಜಿಗಳು ಬಂದಿವೆ.
819 ಮನೆಗಳ ವರದಿ ಸಲ್ಲಿಕೆ: “ಮಳೆಯಿಂದ ಹಾನಿಯಾದ 2,300 ಮನೆಗಳ ಪಟ್ಟ ಬ್ಲಾಕ್ ಆಗಿತ್ತು. ನಿಗದಿತ ಸಮಯದಲ್ಲಿ ತಳಪಾಯ ಹಾಕದ ಹಿನ್ನಲೆಯಲ್ಲಿ ಅಂತಹ ಮನೆಗಳ ಪಟ್ಟಿ ಬ್ಲಾಕ್ ಆಗಿತ್ತು. ಈ ಪೈಕಿ 819 ಮನೆಗಳ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ಎನ್ ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಅನುದಾನ ಮಂಜೂರಾಗಲಿದೆ” ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹಾನಗಲ್ಲ ತಾಲೂಕಿನ ಆಡೂರ ಗ್ರಾಮದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಜಿಲ್ಲಾಧಿಕಾರಿ ಸಾರ್ವಜನಿಕರ ವಿವಿಧ ಸಮಸ್ಯೆಗಳ ಅಹವಾಲು ಆಲಿಸಿದ ನಂತರ ಸುಕನ್ಯಾ ಸಮೃದ್ಧಿ ಯೋಜನೆ ಪಾಸ್ ಪುಸ್ತಕವನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ಗದಗ | ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ನೀಡಿ ಬಲಪಡಿಸಬೇಕು: ಎಸ್ ಎಫ್ ಐ ಒತ್ತಾಯ
ಜನಸ್ಪಂದನ ಕಾರ್ಯಕ್ರಮದಲ್ಲಿ ಆಡೂರ ಗ್ರಾಪಂ ಅಧ್ಯಕ್ಷ ಮಾರ್ತಾಂಡಪ್ಪ ಬಾರ್ಕಿ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಅಕ್ರಮ-ಸಕ್ರಮ ಮತ್ತು ಬಗರಹುಕುಂ ಸಮಿತಿ ಸದಸ್ಯ ಪುಟ್ಟಪ್ಪ ನರೇಗಲ್ಲ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ತಿರಕೋಳ, ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ತಹಸೀಲ್ದಾರ್ ರೇಣುಕಮ್ಮ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ, ತಾಪಂ ಮಾಜಿ ಸದಸ್ಯ ಎನ್.ಪಿ. ಪೂಜಾರ, ಇತರರು ಇದ್ದರು.
