ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್-ವೇ ಆರಂಭವಾದ ಬಳಿಕ ಸಾಲು-ಸಾಲು ಅಪಘಾತಗಳು ಸಂಭವಿಸುತ್ತಿವೆ. ಗುರುವಾರವೂ ಕೂಡ ರಾಮನಗರ ಬಳಿ ಅಪಘಾತ ಸಂಭವಿಸಿದ್ದು, ಆರ್‌ಬಿಐ ನೌಕರರೊಬ್ಬರು ಮೃತಪಟ್ಟಿದ್ದಾರೆ.
ರಾಮನಗರದ ಹೊರವಲಯದ ಡಿಬಿಎಲ್ ಕಚೇರಿಯ ಬಳಿ ಹಾದುಹೋಗಿರುವ ಎಕ್ಸ್‌ಪ್ರೆಸ್-ವೇನಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸಾವನ್ನಪ್ಪಿದವರನ್ನು ಆರ್‌ಬಿಐ ನೌಕರ ಜಗದೀಶ್ (48) ಎಂದು ಗುರುತಿಸಲಾಗಿದೆ.
ಜಗದೀಶ್ ಅವರು ಮೈಸೂರಿನ ಆರ್‌ಬಿಐ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಕುಟುಂಬಸ್ಥರೊಂದಿಗೆ ಗುರುವಾರ ಸಂಜೆ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ, ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ರಸ್ತೆ ಬದಿಯಲ್ಲಿ ಹಾಕಿದ್ದ ಕಬ್ಬಿಣದ ಬೇಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು, ಪಕ್ಕದ ಸರ್ವೀಸ್ ರಸ್ತೆಗೆ ಉರುಳಿದೆ. ಪರಿಣಾಮ ಜಗದೀಶ್ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜಗದೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಪತ್ನಿ ನಂದಿತಾ ಮತ್ತು ಮಕ್ಕಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕಳೆದ ಐದು ತಿಂಗಳಿನಲ್ಲಿ 570 ಅಪಘಾತಗಳು ಸಂಭವಿಸಿವೆ. 55 ಮಂದಿ ಸಾವನ್ನಪ್ಪಿದ್ದಾರೆ. 279 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, 184 ಮಂದಿಗೆ ಮೂಳೆ ಮುರಿತದಂತಹ ಸಮಸ್ಯೆಗಳಿಗೆ ಒಳಗಾಗಿದ್ದಾರೆ. 52 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.