ಬಂಟ್ವಾಳ | ಖಾಸಗಿ‌ ಬಸ್‌ಗಳದ್ದೇ ಕಾರುಬಾರು: ವಿಟ್ಲದಲ್ಲಿ ಮರೀಚಿಕೆಯಾಗಿಯೇ ಉಳಿದ ಸರ್ಕಾರಿ ಬಸ್‌ ಸೇವೆ!

Date:

Advertisements

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ-ಸಾಲೆತ್ತೂರು-ಮುಡಿಪು ಮಾರ್ಗವಾಗಿ ಮಂಗಳೂರಿಗೆ ಒಂದೇ ಒಂದು ಸರ್ಕಾರಿ ಬಸ್ ಸಂಚರಿಸುತ್ತಿಲ್ಲ.‌ ಬಸ್ ಸೇವೆ ಲಭ್ಯ ಇರದಿರುವುದರಿಂದ ಸರ್ಕಾರದ ‘ಶಕ್ತಿ ಯೋಜನೆʼ ಇಲ್ಲಿನ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ನಯಾಪೈಸೆಯ ಪ್ರಯೋಜನಕ್ಕೂ ಬಂದಿಲ್ಲ. ಹಾಗಾಗಿ, ಸರ್ಕಾರ ಹಾಗೂ ಕೆಎಸ್‌ಆರ್‌ಟಿಸಿ ಕೂಡಲೇ ಗಮನಹರಿಸಿ, ಸರ್ಕಾರಿ ಬಸ್ ಸೌಲಭ್ಯ ನೀಡುವಂತೆ ಒತ್ತಾಯ ಕೇಳಿಬಂದಿದೆ.

ಇಷ್ಟು ವರ್ಷದವರೆಗೆ ಒಂದು ಸರ್ಕಾರಿ‌ ಬಸ್ ಕೂಡ ಈ ಮಾರ್ಗವಾಗಿ ಸಂಚರಿಸದಂತೆ ಕೆಲವು ದುಷ್ಟಶಕ್ತಿಗಳು ನೋಡಿಕೊಂಡು ಬಂದಿವೆ. ಇಲ್ಲಿ ಸಂಪೂರ್ಣ ಖಾಸಗಿ‌ ಬಸ್‌ಗಳದ್ದೇ ಕಾರುಬಾರು ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.

ಈ ಕುರಿತು ಸ್ಥಳೀಯ ನಿವಾಸಿ ಹಾಗೂ ಯುವ ಪತ್ರಕರ್ತ ಶರೀಫ್ ಕಾಡುಮಠ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಊರಿನ ಸಾರಿಗೆ ಸಮಸ್ಯೆಯನ್ನು ಬರೆದುಕೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

Advertisements

“ವಿಟ್ಲದಿಂದ ಮುಡಿಪು ಪ್ರದೇಶದವರೆಗೆ ಇಪ್ಪತ್ತೈದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಲವು ಊರುಗಳಿವೆ. ಅಲ್ಲಿನ ಬಹುತೇಕ ವಿದ್ಯಾರ್ಥಿಗಳು ಮಂಗಳೂರು ನಗರದ ಸರ್ಕಾರಿ ಕಾಲೇಜು ಹಾಗೂ ಇತರೆ ಕಾಲೇಜುಗಳಿಗೆ ಕಲಿಯಲು ಬರುತ್ತಾರೆ. ಅವರೆಲ್ಲ ಗ್ರಾಮೀಣ ಪ್ರದೇಶದ, ಬಡಕುಟುಂಬದ ಮಕ್ಕಳು. ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಈ ಮಾರ್ಗವಾಗಿ ಸಂಚರಿಸುವ ಪ್ರತಿ ಖಾಸಗಿ ಬಸ್‌ಗಳೂ ಕೂಡ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ. ಹಲವು ಬಸ್‌ಗಳಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಮೆಟ್ಟಿಲಿನಲ್ಲಿ ನಿಂತುಕೊಂಡು ಅಸುರಕ್ಷಿತವಾಗಿ ಪ್ರಯಾಣಿಸುವ ದೃಶ್ಯಗಳೂ ಕಾಣಿಸುತ್ತವೆ. ಖಾಸಗಿ ಬಸ್‌ಗಳಿಗೆ ಬಾಗಿಲು ಕೂಡಾ ಇರುವುದಿಲ್ಲ” ಎಂದು ಈ ದಿನ.ಕಾಮ್‌ಗೆ ಶರೀಫ್ ತಿಳಿಸಿದ್ದಾರೆ.‌

ಖಾಸಗಿ ಬಸ್ 2

“ಮಂಗಳೂರಿನಲ್ಲಿ ಖಾಸಗಿ ಬಸ್‌ಗಳು ತುಂಬಾ ವೇಗವಾಗಿ ಸಂಚರಿಸುವುದರಿಂದ ತಿರುವುಗಳಲ್ಲಿ ತುಂಬಾ ಅಚಾತುರ್ಯ ಘಟನೆಗಳು ನಡೆದಿರುವುದೂ ಉಂಟು. ಬಾಗಿಲಿಲ್ಲದ ಈ ಬಸ್‌ಗಳು ಅತಿವೇಗದಿಂದ ಚಲಿಸುವುದರಿಂದ ಬಸ್ ಮೆಟ್ಟಿಲಿನಲ್ಲಿ ನಿಂತಿದ್ದ ವಿದ್ಯಾರ್ಥಿನಿಯರನ್ನು ನಮ್ಮ ಊರಿನ‌ ಕಡೆ ತಿರುವಿನಲ್ಲಿ ರಸ್ತೆ ಬದಿಗೆ ಎಸೆಯಲ್ಪಟ್ಟ ಘಟನೆಗಳೂ ಸಂಭವಿಸಿವೆ. ಹಲವು ಬಾರಿ ವಿದ್ಯಾರ್ಥಿನಿಯರು ಬಸ್ಸಿನಿಂದ ಕೆಳಗೆ ಬಿದ್ದಿರುವ ಘಟನೆಗಳಾಗಿಳಿವೆ” ಎಂದು ದೂರಿದ್ದಾರೆ.

“ಈ ಖಾಸಗಿ‌ ಬಸ್ಸಿನವರ ಇನ್ನೊಂದು ಕಾಟವೂ ಇದೆ. ವಿಟ್ಲದಿಂದ ಅಥವಾ ಸಾಲೆತ್ತೂರಿನಿಂದ ಮಂಗಳೂರಿಗೆಂದು ಬಸ್ಸಿಗೆ ಹತ್ತಿಸಿಕೊಂಡು, ನೇರವಾಗಿ ಮಂಗಳೂರಿನ ಬಸ್ ನಿಲ್ದಾಣದವರೆಗೆ ತಲುಪಿಸದೆ, ಅರ್ಧ ದಾರಿಯಲ್ಲಿ, ಅವರಿಗೆ ಇಷ್ಟ ಬಂದಲ್ಲಿ ಇಳಿಸಿ ಬೇರೆ ಬಸ್‌ಗೆ ಕ್ರಾಸಿಂಗ್ ನೀಡುವುದನ್ನೂ ಮಾಡುತ್ತಾರೆ. ಬಹುತೇಕ ಪಂಪ್‌ವೆಲ್‌ನಲ್ಲಿ ಕ್ರಾಸಿಂಗ್ ಕೊಡಲಾಗುತ್ತದೆ. ಅದೂ ಕೂಡ ಅತಿ ಗಡಿಬಿಡಿಯಲ್ಲಿ ಈ ಕೆಲಸ ಮಾಡುತ್ತಾರೆ. ಊರಿನಿಂದ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗಳಿಗೆಂದು ಬರುವ 70, 80ರ ವಯಸ್ಸಿನವರು ಇವರ ಕ್ರಾಸಿಂಗ್ ಕಾಟಕ್ಕೆ ದಿಕ್ಕೆಟ್ಟು ಹೋಗುತ್ತಾರೆ. ಅವರು ಹೇಳುವ ವೇಗಕ್ಕೆ ಥಟ್ಟನೆ ಬಸ್ಸಿನಿಂದಿಳಿದು, ಎದುರು ಇರುವ ಇನ್ನೊಂದು ಬಸ್ಸನ್ನು ಅದೇ ವೇಗದಲ್ಲಿ ಹತ್ತಿ ನಿಲ್ಲಬೇಕು. ಎದುರಿನ ಬಸ್ ಮೊದಲೇ ಜನರಿಂದ ತುಂಬಿರುತ್ತದೆ, ನೆಮ್ಮದಿಯಾಗಿ ಕೂರಲು ಬಿಡಿ, ಆಧಾರಕ್ಕೆ ಕಂಬ ಹಿಡಿದುಕೊಂಡು ನಿಲ್ಲುವುದಕ್ಕೂ ಆಗದ ಪರಿಸ್ಥಿತಿ ಇರುತ್ತದೆ. ಅಲ್ಲಿಯವರೆಗೆ ಊರಿನಿಂದ ಆರಾಮವಾಗಿ ಪ್ರಯಾಣಿಸಿದ ಅವರ ನೆಮ್ಮದಿ ಒಂದು ಕ್ಷಣದೊಳಗೆ ಕಳೆದುಹೋಗುತ್ತದೆ. ಪಂಪ್‌ವೆಲ್‌ನಿಂದ ಸ್ಟೇಟ್ ಬ್ಯಾಂಕ್‌ವರೆಗಿನ ಪ್ರಯಾಣಿಸುವಷ್ಟರಲ್ಲಿ ಜೀವನ ಸಾಕೆನಿಸಿ, ಅವರ ನೆಮ್ಮದಿ ಹಾಳಾಗಿರುತ್ತದೆ” ಎಂದು ಕಿಡಿಕಾರಿದ್ದಾರೆ.

“ಸಮಯಕ್ಕೆ ಸರಿಯಾಗಿ ಬಸ್‌ಗಳು ಬರುವುದಿಲ್ಲ, ಅವರಿಗೆ ಬೇಕಾದಾಗ ಕೆಲವು ಹೊತ್ತಿನ ಪ್ರಯಾಣವನ್ನು ಮೊಟಕುಗೊಳಿಸುತ್ತಾರೆ. ಇದು ಪ್ರಯಾಣಿಕರನ್ನು ತೀವ್ರ ತೊಂದರೆಗೆ ಸಿಲುಕಿಸುತ್ತದೆ. ಬೆಳಗ್ಗಿನ ಹೊತ್ತು ನಿರ್ದಿಷ್ಟ ಸಮಯದ ಬಸ್ ನಂಬಿ ಕಾಲೇಜಿಗೆ ಹೊರಡುವವರು ಆ ಬಸ್ ಇಲ್ಲದಾದಾಗ ಇನ್ನರ್ಧ ಗಂಟೆ ಕಾಯಬೇಕು. ಹೀಗೆ ಇಪ್ಪತ್ತೈದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಊರುಗಳಲ್ಲಿಯೂ ಆ ಬಸ್ಸಿಗೆ‌ ಕಾಯುವವರು ಇರುತ್ತಾರೆ. ಅವರೆಲ್ಲ ಅನಿವಾರ್ಯವಾಗಿ ಮುಂದಿನ ಬಸ್‌ಗೆ ಹತ್ತಲೇಬೇಕು. ಆಗ ಒಂದೇ ಬಸ್ಸಿನಲ್ಲಿ ಎರಡು ಬಸ್ಸಿನ ಪ್ರಯಾಣಿಕರು ತುಂಬಿಕೊಳ್ಳುತ್ತಾರೆ” ಎಂದು ತಿಳಿಸಿದ್ದಾರೆ.

ಖಾಸಗಿ ಬಸ್‌ ನಿಲ್ದಾಣ

“ಕಷ್ಟದ ಪ್ರಯಾಣ ಹಾಗೂ ಸಮಯದ ವ್ಯತ್ಯಾಸದಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗುತ್ತದೆ. ಇದು ಬೆಳಗಿನ ಕಥೆಯಾದರೆ ಸಂಜೆಯದ್ದು ಇನ್ನೊಂದು. ಮಂಗಳೂರಿನ ಸ್ಟೇಟ್‌ ಬ್ಯಾಂಕ್‌ನಿಂದ ಸಂಜೆ 7.15ಕ್ಕೆ ನಮ್ಮೂರಿಗೆ ಕೊನೆಯ ಬಸ್ ಹೊರಡುತ್ತಿತ್ತು. ಈಗ ಅದೂ ಇಲ್ಲವೆಂಬ ಮಾಹಿತಿ ಇದೆ. ಅದಕ್ಕೆ ಮೊದಲು 6.40ಕ್ಕೆ ಬಸ್ ಇದೆ. 7.15ರ ಬಸ್ಸಿನವನು ತೊಕ್ಕೊಟ್ಟು ಅಥವಾ ಮುಡಿಪುವಿನಲ್ಲಿಯೇ ಪ್ರಯಾಣ ಮೊಟಕುಗೊಳಿಸಿ(ಟ್ರಿಪ್ ಕಟ್) ಆರಾಮವಾಗಿ ಹಿಂದಿರುಗುತ್ತಾನೆ. ಇತ್ತ ಸ್ಟೇಟ್ ಬ್ಯಾಂಕಿನಲ್ಲಿ‌ ಕೊನೆಯ ಬಸ್ಸಿಗಾಗಿ ನಿಂತು ಕಾಯುವವರು ಅತಂತ್ರ ಸ್ಥಿತಿ ಅನುಭವಿಸುತ್ತಾರೆ. ಅವರು ಬೇರೆ ಬೇರೆ ಊರಿಗೆ ಹೊರಡುವ ಬಸ್ ಹತ್ತಿ, ಅಲ್ಲಿಂದ ಅರ್ಧದಲ್ಲಿ ಇಳಿದು, ಇನ್ನು ಯಾವುದೋ ವಾಹನ‌ ಹಿಡಿದು ಏನೇನೋ ಒದ್ದಾಟ ಅನುಭವಿಸಿ ಮನೆ ತಲುಪುತ್ತಾರೆ. ಪುರುಷರಾದರೆ ಏನಾದರೊಂದು ಮಾಡಿ ಮನೆ ತಲುಪಬಹುದು. ಈ ಬಸ್‌ಗಳನ್ನೇ ನಂಬಿಕೊಂಡು ಮಂಗಳೂರಿಗೆ ಉದ್ಯೋಗಕ್ಕೆ ಬರುವ ಮಹಿಳೆಯರ ಪಾಡೇನು?” ಎಂದು ಕಳವಳ ವ್ಯಕ್ತಪಡಿಸಿದರು.

“ಖಾಸಗಿ ಬಸ್ಸಿನವರ ಯಾವುದೇ ನಡೆ, ನಿರ್ಧಾರವನ್ನೂ ಅಧಿಕೃತವಾಗಿ ಇಲ್ಲಿನ ಸಾರ್ವಜನಿಕರು ಪ್ರಶ್ನಿಸುವ ಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಅದು ಖಾಸಗಿ. ಸಾರ್ವಜನಿಕ ವಲಯದಲ್ಲಿ ‘ಖಾಸಗಿ’ ಎನ್ನುವುದು ಜನರಿಗೆ ನೀಡುವ ಹೊಡೆತ ಹೇಗಿರುತ್ತದೆ ಎಂಬುದಕ್ಕೆ ಇದು ಉದಾಹರಣೆ. ಇದು ಪರೋಕ್ಷವಾಗಿ ಸರ್ಕಾರವೇ ಜನರಿಗೆ ನೀಡುತ್ತಿರುವ ಹೊಡೆತ ಎಂದರೂ ತಪ್ಪಲ್ಲ” ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ
ಕೆಎಸ್‌ಆರ್‌ಟಿಸಿ

“ಸರ್ಕಾರಿ ಬಸ್ ಬಂದರೆ, ಈಗ ಶಕ್ತಿ ಯೋಜನೆ ಇರುವುದರಿಂದ ಬಡವರ ಮನೆಯ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಟಿಕೆಟ್ ಹಣ ಉಳಿಯುತ್ತದೆ. ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಆಗುತ್ತದೆ. ಏನೇ ಆದರೂ ಟ್ರಿಪ್ ಕಟ್ ಆಗುವುದಿಲ್ಲ ಎಂಬ ಭರವಸೆ, ಕ್ರಾಸಿಂಗ್ ಸಮಸ್ಯೆ ಇಲ್ಲ ಎಂಬ ಸಮಾಧಾನ ಇರುತ್ತದೆ. ಆದಾಗ್ಯೂ ಏನಾದರೂ ಆಯಿತೆಂದರೆ ಪ್ರಶ್ನಿಸುವ ಎಲ್ಲ ಹಕ್ಕು ಸಾರ್ವಜನಿಕರ ಕೈಯಲ್ಲಿಯೇ ಇರುತ್ತದೆಂಬ ಧೈರ್ಯ. ಜನಪರ ಸರ್ಕಾರ, ಮಹಿಳೆಯರ ಧ್ವನಿ ಎಂದೆಲ್ಲ ಹೇಳುವ ಸರ್ಕಾರ, ಇದೀಗ ಶಕ್ತಿ ಯೋಜನೆಯು ಇಲ್ಲಿಯ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ತಲುಪುವಂತಾಗಬೇಕು. ನಾಡಿನ ಜನಪ್ರಿಯ ನಾಯಕರೆಂದು ಕರೆಸಿಕೊಳ್ಳುವ ಆಡಳಿತಾರೂಢರು ಜನಪ್ರಿಯತೆಯನ್ನು ಉಳಿಸಿಕೊಳ್ಳಬೇಕು” ಎಂದು ಸಾಲೆತ್ತೂರು ನಿವಾಸಿ ಶರೀಫ್ ಆಗ್ರಹ ವ್ಯಕ್ತಪಡಿಸಿದ್ದಾರೆ.

“ನಮ್ಮೂರಿಗೆ ಸರ್ಕಾರಿ ಬಸ್ ಅತ್ಯಂತ ತುರ್ತಾಗಿ ಆಗಬೇಕಿದೆ. ಗ್ರಾಮೀಣ ಜನರ ಸಂಕಷ್ಟಗಳು ಎಷ್ಟು ಹೇಳಿದರೂ ಹೇಳತೀರದಂತಿವೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹಾಗೂ ನಮ್ಮ ಜಿಲ್ಲೆಯವರೇ ಆದ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಇತ್ತ ಗಮನಹರಿಸಿ, ಬಸ್ ಸೌಲಭ್ಯ ಒದಗಿಸಲು ಕ್ರಮವಹಿಸಿದರೆ ಸಾವಿರಾರು ಮಕ್ಕಳಿಗೆ, ಕೂಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಅನುಕೂಲವಾಗುತ್ತದೆ” ಎಂದು ಶರೀಫ್ ಕಾಡುಮಠ ಹೇಳಿದರೆ.

ಫೈಝ್ ವಿಟ್ಲ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಲವು ವರ್ಷಗಳಿಂದ ಈ ಭಾಗದ ವಿದ್ಯಾರ್ಥಿಗಳು ಪ್ರತಿಭಟನೆಗಳನ್ನು ಮಾಡುವ ಮೂಲಕ ಜಿಲ್ಲಾಧಿಕಾರಿ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಮ್ಯಾನೇಜರ್‌ಗಳಿಗೂ ಮನವಿ ನೀಡಲಾಗಿದೆ. ಆದರೆ ಬಸ್‌ಗಳನ್ನು ಬಿಡುವ ವ್ಯವಸ್ಥೆಯನ್ನು ಮಾಡುತ್ತೇವೆಂದು ಹುಸಿ ಭರವಸೆ ನೀಡುತ್ತಾರೆಯೇ ಹೊರತು ಈವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯಪಾಲರ ಹೆಸರಲ್ಲಿ ಬಿಜೆಪಿ ಅಧಿಕ ಪ್ರಸಂಗ

“ಮಂಗಳೂರಿನಿಂದ ವಿಟ್ಲದವರೆಗೆ ಹಲವು ಜಂಕ್ಷನ್‌ಗಳು ಸಿಗುತ್ತವೆ. ಸುಮಾರು 45-45 ಕಿಮೀ ದೂರ ಒಂದೇ ಒಂದು ಸರ್ಕಾರಿ ಬಸ್‌ಗಳು ಸಂಚರಿಸುವುದಿಲ್ಲ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ವೃದ್ಧರು ಓಡಾಡಲು ತುಂಬಾ ಕಷ್ಟವಾಗುತ್ತಿದೆ. ಖಾಸಗಿ ವಿದ್ಯಾಸಂಸ್ಥೆಗಳು ತಮ್ಮ ಶಾಲೆ ಕಾಲೇಜುಗಳ ವಾಹನಗಳಲ್ಲಿಯೇ ಮಕ್ಕಳನ್ನು ಕರೆದೊಯ್ಯುತ್ತಾರೆ. ಪೋಷಕರಿಗೆ ಶಿಕ್ಷಣದ ಶುಲ್ಕ ಕಟ್ಟುವಷ್ಟರಲ್ಲಿ ಜೀವ ಸವೆಸಿರುತ್ತಾರೆ. ಅದರಲ್ಲಿ ವಾಹನಕ್ಕೂ ಹೆಚ್ಚಿನ ಶುಲ್ಕ ನೀಡುವುದು ಇನ್ನಷ್ಟು ಹೊರೆಯಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

40ರಿಂದ 45 ಕಿಮೀ ದೂರದ ಪ್ರದೇಶಕ್ಕೆ ಒಂದೂ ಕೂಡಾ ಸರ್ಕಾರಿ ಬಸ್‌ಗಳಿಲ್ಲವೆಂದರೆ ಆಳುವ ಸರ್ಕಾರಗಳಿಗೆ ನಾಚಿಕೆಯಾಗಬೇಕು. ಸರ್ಕಾರ ಖಾಸಗಿದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಡಜನರನ್ನು ಸುಲಿಗೆ ಮಾಡುತ್ತಿದೆ. ಮಕ್ಕಳು, ಕಾರ್ಮಿಕರು ಹೋಗುವ ಮತ್ತು ಬರುವ ಸಮಯಕ್ಕಾದರೂ ಸರ್ಕಾರಿ ಬಸ್‌ ಬಿಡಬೇಕು. ಶಕ್ತಿ ಯೋಜನೆಯ ಆದ್ಯತೆ ಮಹಿಳೆಯರಿಗೆ ದೊರೆಯುವಂತಾಗಬೇಕು. ಇಲ್ಲಿಯವರೂ ಕೂಡಾ ಟ್ಯಾಕ್ಸ್‌ಗಳನ್ನು ಕಟ್ಟುತ್ತೇವೆ. ಆದರೆ ಯೋಜನೆಗಳ ಸಿಗುವುದಿಲ್ಲವೆಂದರೆ ಹೇಗೆ?. ಸರ್ಕಾರ ಒಂಚೂರಾದರೂ ಜನಪರ ಕಾಳಜಿ ಉಳಿಸಿಕೊಂಡಿದ್ದರೆ ವಿಟ್ಲ-ಸಾಲೆತ್ತೂರು-ಮುಡಿಪು ಮಾರ್ಗವಾಗಿ ಮಂಗಳೂರಿಗೆ ಸರ್ಕಾರಿ ಬಸ್‌ ವ್ಯವಸ್ತೆ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.

ಈ ಕುರಿತು ಈ ದಿನ.ಕಾಮ್‌ ದಕ್ಷಿಣ ಕನ್ನಡ ಜಿಲ್ಲಾ ಡಿಪೋ ಮ್ಯಾನೇಜರ್‌ ಅವರನ್ನು ಸಂಪರ್ಕಿಸಿದೆಯಾದರೂ ಕರೆಗೆ ಲಭ್ಯವಾಗಿಲ್ಲ. ಇನ್ನಾದರೂ ಕೆಎಸ್‌ಆರ್‌ಟಿಸಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಲಿದ್ದಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X