ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ದಿಗೆ ಮೀಸಲಾಗಿರುವ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಳ ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ರಾಯಚೂರು ನಗರದಲ್ಲಿಂದು ಬಿಜೆಪಿ ಪ್ರತಿಭಟನೆ ನಡೆಸಿತು.
ನಗರದ ವೀರಶೈವ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಪ್ರತಿಭಟನಾ ರ‍್ಯಾಲಿ ನಗರದ ವಿವಿಧ ರಸ್ತೆಗಳ ಮೂಲಕ ಡಾ. ಬಿ ಆರ್ ಅಂಬೇಡ್ಕರ ವೃತ್ತಕ್ಕೆ ತಲುಪಿ ಸರ್ಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿತು. “ಪರಿಶಿಷ್ಟ ಜಾತಿಗಳಿಗೆ ಮೀಸಲಾದ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಒಟ್ಟು 11,144 ಸಾವಿರ ಕೋಟಿ ರೂಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. 2024ರಲ್ಲಿಯೂ 14,282.68 ಸಾವಿರ ಕೋಟಿ ರೂ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ” ಹೀಗಾದರೆ ಕೆಳ ಸ್ತರದಲ್ಲಿರುವ ಪಜಾತಿ ಹಾಗೂ ಪಪಂಗಡ ಸಮುದಾಯಗಳ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
“ಹಿಂದುಳಿದ ವರ್ಗದವರೂ ಸೇರಿದಂತೆ ಎಲ್ಲರಿಗೂ ಗ್ಯಾರಂಟಿ ಯೋಜನೆ ನೀಡುತ್ತಿದೆ. ಆದರೆ ಎಸ್‌ಸಿ ಎಸ್‌ಟಿ ಅನುದಾನ ಮಾತ್ರ ಬಳಸಿಕೊಂಡು ಸಮೂದಾಯಗಳಿಗೆ ದ್ರೋಹ ಎಸಗಿದೆ. ಅಂಬೇಡ್ಕರ ಅಭಿವೃದ್ದಿ ನಿಗಮ, ಆದಿಜಾಂಬವ ಅಭಿವೃದ್ದಿ ನಿಗಮ, ತಾಂಡಾ ಅಭಿವೃದ್ದಿ ನಿಗಮ, ಭೋವಿ ಅಭಿವೃದ್ದಿ ನಿಗಮ, ವಾಲ್ಮೀಕಿ ಅಭಿವೃದ್ದಿ ನಿಗಮ, ಲಿಡ್ಕರ್, ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮಗಳಿಗೆ ಅನುದಾನ ನೀಡದೇ ವಂಚಿಸಿ ಎಸ್‌ಸಿ ಎಸ್‌ಟಿ ಸಮುದಾಯಗಳ ಅಭಿವೃದ್ದಿಯನ್ನು ಸರ್ಕಾರ ಕಡೆಗಣಿಸಿದೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
ದುರ್ಬಳಕೆ ಮಾಡಿಕೊಂಡ ಅನುದಾನವನ್ನು ಕೂಡಲೇ ಮರಳಿ ನೀಡಬೇಕು. ದಲಿತರ ಮೀಸಲು ನಿಧಿಯನ್ನು ಅದೇ ಸಮುದಾಯಗಳ ಅಭಿವೃದ್ದಿಗೆ ಬಳಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಸುರೇಶ ವರ್ಮಾರಿಗೆ ನೀಡಲಾಯಿತು.
ಇದನ್ನೂ ಓದಿ: ರಾಯಚೂರು | ಆಟೋ ನಿಲ್ದಾಣ ನಿರ್ಮಿಸಿ ಪೊಲೀಸರ ಕಿರುಕುಳ ತಪ್ಪಿಸುವಂತೆ ಆಟೋ ಚಾಲಕರ ಮನವಿ
ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕರಪ್ಪ, ಮಾಜಿ ಶಾಸಕ ತಿಪ್ಪರಾಜ ಹವಲ್ದಾರ, ಮಾಜಿ ಸಂಸದ ಬಿ.ವಿ.ನಾಯಕ, ರವೀಂದ್ರ ಜಲ್ದಾರ, ರಾಜಕುಮಾರ, ಪಿ.ಯಲ್ಲಪ್ಪ, ಮೌನೇಶ, ಜಿ.ಶಂಕರರೆಡ್ಡಿ, ಶರಣಮ್ಮ ಕಾಮರೆಡ್ಡಿ, ವಿಜಯಕುಮಾರ ಸಜ್ಜನ, ಅಮರೇಶ ಬಲ್ಲಿದವ, ರಾಮಚಂದ್ರ ಕಡಗೋಳ, ಯು.ನರಸರೆಡ್ಡಿ, ಪ್ರಕಾಶ ಸೇರಿದಂತೆ ಅನೇಕ ಮುಖಂಡರುಗಳು, ಮೋರ್ಚಾಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
