ತುಂಗಭದ್ರ ಎಡದಂಡೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಏಪ್ರಿಲ್ 20 ರವರೆಗೆ ನೀರು ಹರಿಸಿ ರೈತರ ಬೆಳೆಗಳನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕೆಂದು ಸಂಯುಕ್ತ ಹೋರಾಟ ಸಮಿತಿ ಮುಖಂಡ ಹಾಗೂ ಕೆಪಿಆರ್‌ಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, “ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ತೆಲಂಗಾಣಕ್ಕೆ ಹರಿಸಿರುವ ಸರ್ಕಾರ, ನಮ್ಮ ರೈತರ ಬೆಳೆಗಳಿಗೂ ನೀರು ಒದಗಿಸುವ ಮೂಲಕ ಬದ್ದತೆ ಪ್ರದರ್ಶಿಸಬೇಕು. ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿಯ ಆರ್ಥಿಕ ನೀತಿಗಳನ್ನೇ ಮುಂದುವರೆಸುತ್ತಿದೆ. ಬಿಜೆಪಿ ಕೇಂದ್ರ ಸರ್ಕಾರ ಮೂರು ಮಾರಕ ಕಾಯ್ದೆಗಳನ್ನು ರದ್ದುಗೊಳಿಸಿದ್ದರೂ ರಾಜ್ಯ ಸರ್ಕಾರ ಮಾತ್ರ ಅದೇ ಕಾಯ್ದೆಗಳನ್ನು ಮುಂದುವರೆಸಿದೆ. ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಮೂರು ಕಾಯ್ದೆಗಳನ್ನು ರಾಜ್ಯದಲ್ಲಿಯೂ ರದ್ದುಗೊಳಿಸಬೇಕು. ಪಂಜಾಬ ಸರ್ಕಾರ ತಿರಸ್ಕರಿಸಿರುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ನೀತಿ ಚೌಕಟ್ಟನ್ನು ರಾಜ್ಯ ಸರ್ಕಾರವೂ ತಿರಸ್ಕರಿಸಬೇಕು, ಬಗರ್ ಹುಕುಂ ರೈತರಿಗೆ ಸಾಗುವಳಿ ಚೀಟಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ರಾಜ್ಯ ಕಾಂಗ್ರೆಸ್ ಸ್ಪಂದಿಸಬೇಕು. ಕೇಂದ್ರ ಸರ್ಕಾರ ಮಂಡಿಸಿರುವ ಜನವಿರೋಧಿ ಬಜೆಟ್ ಹಾಗೂ ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್ ಮೇಲೆ ಮಾ.12 ಮತ್ತು13 ರಂದು ಬೆಂಗಳೂರಿನಲ್ಲಿ ಚರ್ಚೆ ನಡೆಸಿ ಮುಂದಿನ ಹೋರಾಟ ರೂಪಿಸಲಾಗುತ್ತದೆ” ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಮಾತನಾಡಿ, “ಜಿಲ್ಲೆಯ ಆರ್ಥಿಕ ಸ್ಥಿತಿ ನಾರಾಯಣಪುರ ಬಲದಂಡೆ ಮತ್ತು ತುಂಗಭದ್ರ ಎಡದಂಡೆ ಕಾಲುವೆ ನೀರಿನ ಮೇಲೆ ಅವಲಂಬಿತವಾಗಿದೆ. ಸರ್ಕಾರಗಳು ಕಾಲುವೆ ನೀರು ಹರಿಸಲು ಸ್ಥಗಿತಗೊಳಿಸುವುದಾಗಿ ಹೇಳುತ್ತಿವೆ. ಜಲಾಶಯದಲ್ಲಿ ನೀರಿನ ಲಭ್ಯತೆಯಿದ್ದು ಏ 20 ರವರೆಗೆ ಕಾಲುವೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಿಸಬೇಕು. ಇಲ್ಲದೇ ಹೋದರೆ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಇದನ್ನೂ ಓದಿ: ರಾಯಚೂರು | ಏ.10ವರೆಗೆ ಕಾಲುವೆ ನೀರು ಬಂದ್ ಮಾಡದಂತೆ ರೈತರ ಪ್ರತಿಭಟನೆ
ಈ ಸಂದರ್ಭದಲ್ಲಿ ಶಾಂತರಾಮ ನಾಯಕ, ಖಾಜಾ ಅಸ್ಲಂ ಅಹ್ಮದ್, ಮಾರೆಪ್ಪ ಹರವಿ, ನರಸಣ್ಣ ನಾಯಕ, ಕೆ.ಜಿ.ವೀರೇಶ, ಚನ್ನಪ್ಪಗೌಡ ಇದ್ದರು.
