ದಲಿತ ಯುವಕನನ್ನು ಪ್ರೀತಿಸಿದ್ದಕ್ಕಾಗಿ ಯುವತಿಯೊಬ್ಬಳನ್ನು ಆಕೆಯ ಕುಟುಂಬಸ್ಥರೇ ಹತ್ಯೆಗೈದಿರುವ ಮರ್ಯಾದಾಗೇಡು ಹತ್ಯೆ ಪ್ರಕರಣ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆದಿದೆ. ಬಾಲಕಿಯನ್ನು ಆಕೆಯ ತಂದೆ, ಚಿಕ್ಕಪ್ಪ ಹಾಗೂ ಅಣ್ಣ ಸೇರಿ ಕೊಲೆ ಮಾಡಿದ್ದಾರೆ.
ತಾಲೂಕಿನ ಚಿಕ್ಕಹೆಡಿಗೆಹಳ್ಳಿಯಲ್ಲಿ ಘಟನೆ ನಡೆದಿದ್ದು, ಮರ್ಯಾದಾಗೇಡು ಹತ್ಯೆ ಪ್ರಕರಣದಲ್ಲಿ ಬಾಲಕಿಯ ತಂದೆ ಪರಶುರಾಮ, ಚಿಕ್ಕಪ್ಪ ತುಕಾರಾಮ ಮತ್ತು ಆಕೆಯ ಅಣ್ಣ ಶಿವರಾಜು ಅವರನ್ನು ಪೊಲೀಸರು ಜೂನ್ 10 ರಂದು ಬಂಧಿಸಿದ್ದಾರೆ.
ನಾಯಕ ಸಮುದಾಯಕ್ಕೆ (ಎಸ್‌ಟಿ) ಸೇರಿದ ಯುವತಿ ಶಿರಾದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದರು. ಶಿರಾದಲ್ಲಿಯೇ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಅಲ್ಲಿಯ ಖಾಸಗಿ ಕಾಲೇಜಿನ ಅಂತಿಮ ವರ್ಷದ ಬಿಕಾಂ ಓದುತಿದ್ದ ದಲಿತ ವಿದ್ಯಾರ್ಥಿ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು.
ಇನ್ನು ಮೂರು ತಿಂಗಳಲ್ಲಿ ಯುವತಿ 18 ವರ್ಷ ತುಂಬುತ್ತಿತ್ತು. ಬಳಿಕ, ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಅವರ ಪ್ರೀತಿ ವಿಚಾರ ತಿಳಿದ ಯುವತಿಯ ಪೋಷಕರು ಆತನೊಂದಿಗಿನ ಪ್ರೀತಿಯನ್ನು ತೊರೆಯುವಂತೆ ಒತ್ತಾಯಿಸಿದ್ದರು.
“ಯುವತಿ ಪೋಷಕರಿಗೆ ತಿಳಿಸದೆ ಕೆಲಕಾಲ ಮನೆಯಿಂದ ನಾಪತ್ತೆಯಾಗಿದ್ದಳು. ಯುವತಿಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರಲಿಲ್ಲ. ಬದಲಾಗಿ, ಅವರೇ ಆಕೆಯನ್ನು ಹುಡುಕಿ, ಜೂನ್ 9ರಂದು ಮನೆಗೆ ಕರೆತಂದಿದ್ದಾರೆ” ಎಂದು ತುಮಕೂರು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಜೂನ್ 9ರಂದು ಬಾಲಕಿಯ ತಂದೆ, ಚಿಕ್ಕಪ್ಪ ಮತ್ತು ಸಹೋದರ – ಮೂವರೂ ಸೇರಿ ಆಕೆಗೆ ವಿಷ ಕುಡಿಯುವಂತೆ ಒತ್ತಾಯಿಸಿದ್ದಾರೆ. ಬಾಲಕಿ ಇದಕ್ಕೆ ನಿರಾಕರಿಸಿದಾಗ ಕುರಿ ಕಟ್ಟಲು ಬಳಸುವ ಹಗ್ಗದಿಂದ ಕತ್ತನ್ನು ಬಿಗಿದು ಕೊಲೆ ಮಾಡಿದ್ದಾರೆ. ಕೊಲೆ ಪ್ರಕರಣವನ್ನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಬಿಂಬಿಸಿದ್ದಾರೆ. ಬಳಿಕ ಆಕೆಯ ಅಂತ್ಯಕ್ರಿಯೆಯನ್ನು ಸಹ ಮಾಡಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚೇಳೂರು ಪೊಲೀಸರು ವಿಚಾರಣೆ ನಡೆಸಿದ್ದು, ಬಾಲಕಿಯನ್ನು ಮನೆಯವರೇ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ₹118 ಕೋಟಿ ಅಕ್ರಮ ಕಾಮಗಾರಿ : 8 ಎಂಜಿನಿಯರ್ ಅಮಾನತು
“ಆತ್ಮಹತ್ಯೆ ಮತ್ತು ಸಾಕ್ಷ್ಯ ನಾಶದ ಪ್ರಕರಣವನ್ನು ದಾಖಲಿಸಿದ್ದೆವು. ವಿಚಾರಣೆ ನಡೆಸಿದ ನಂತರ ಕೊಲೆ ಪ್ರಕರಣ ದಾಖಲಿಸಲಾಗಿದೆ” ಎಂದು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ತಿಳಿಸಿದ್ದಾರೆ.