ಬೀದರ್ ಕೃಷಿ ಅವಲಂಬಿತ ಜಿಲ್ಲೆಯಾಗಿರುವುದರಿಂದ ರೈತರ ಆರ್ಥಿಕತೆ ಬೆಳವಣಿಗೆ ಕುರಿತು ಸರ್ಕಾರ ಹೆಜ್ಜೆ ಇಡುತ್ತಿಲ್ಲ. ಇದರಿಂದ ರೈತರು ಸಾಲದ ಸುಳಿಗೆ ಸಿಲುಕಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ʼಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಕಾರ್ಖಾನೆಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಕಬ್ಬಿಗೆ ₹2,700 ಬೆಲೆ ನಿಗದಿಯಾಗಿದೆ. ಆದರೆ ಯಾವುದೇ ಕಾರ್ಖಾನೆಗಳು ಕಬ್ಬಿಗೆ ₹2,700 ದರದಂತೆ ಖರೀದಿಸಿ ಪಾವತಿಸಿಲ್ಲ. ಕಬ್ಬು ಕಟಾವು ಆದ 15 ದಿನದಲ್ಲಿ ರೈತರಿಗೆ ಹಣ ಪಾವತಿಸಬೇಕೆಂಬ ನಿಯಮವಿದ್ದರೂ 3 ತಿಂಗಳಾದರೂ ಹಣ ಪಾವತಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕುʼ ಎಂದರು.
ʼನೆಟೆ ರೋಗದಿಂದ ತೊಗರಿ ಬೆಳೆ ಹಾನಿಯಾದ ರೈತರಿಗೆ ಪರಿಹಾರ ಪಾವತಿಸುತ್ತಿಲ್ಲ. ನೆಪ ಮಾತ್ರಕ್ಕೆ ಸೋಯಾ ಖರೀದಿ ಕೇಂದ್ರ ತೆರೆಯಲಾಗಿದ್ದು, ಕೆಲ ರೈತರ ಸೋಯಾ ಮಾತ್ರ ಖರೀದಿಸಲಾಗಿದೆ. ನೋಂದಣಿಯಾದ ಉಳಿದ ರೈತರ ಸೋಯಾ ಖರೀದಿಸಿಲ್ಲ. ಡಿಸಿಸಿ ಬ್ಯಾಂಕ್‌ನಲ್ಲಿ ರೈತರಿಗೆ ಹೊಸ ಸಾಲ, ಸರಕಾರದಿಂದ ಘೋಷಣೆಯಾದ ರಿಯಾಯಿತಿ ಸಾಲ ಸಿಗುತ್ತಿಲ್ಲ. ಬೆಳೆ ನಷ್ಟದಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ರೈತರಿಗೆ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಸರ್ಕಾರ ಯಾಕೆ ತಡೆಯುತ್ತಿಲ್ಲʼ ಎಂದು ಪ್ರಶ್ನಿಸಿದರು.
ʼಸರ್ಕಾರ ಒಮ್ಮೆಯೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತಿಲ್ಲ. ಇದರಿಂದ ಬಹಳಷ್ಟು ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಬೆಳೆ ವಿಮೆ ಪಾವತಿಸಿದ ರೈತರಿಗೆ ವಿಮೆ ಹಣ ಜಮೆ ಮಾಡಬೇಕು. ಮನರೇಗಾ ಯೋಜನೆಯಡಿ ರೈತರ ಹೊಲಗಳಲ್ಲಿ ಕಳೆ, ಕುಂಟೆ, ಔಷಧಿ, ಭತ್ತ ಕಟಾವಿಗೆ ಹಣ ಮೀಸಲಿಡಬೇಕು. ರೈತರ ಜಮೀನುಗಳಿಗೆ ಸರಿಯಾಗಿ ವಿದ್ಯುತ್ ನೀಡಬೇಕು. ಕಾಡು ಪ್ರಾಣಿಗಳಿಂದ ಮತ್ತು ಬೆಂಕಿಗಾಹುತಿಯಿಂದ ಬೆಳೆ ನಾಶವಾದ ರೈತರಿಗೆ ಸರ್ಕಾರದಿಂದ ವೈಜ್ಞಾನಿಕ ಪರಿಹಾರ ಒದಗಿಸುವ ಕಾನೂನು ಜಾರಿಗೊಳಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹಕ್ಕಿಜ್ವರ : ಜಿಲ್ಲೆಯ ಗಡಿಗಳಲ್ಲಿ 13 ಚೆಕ್‍ಪೋಸ್ಟ್ ಸ್ಥಾಪನೆ
ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರಾದ ನಾಗಶೆಟ್ಟಪ್ಪ ಲಂಜವಾಡೆ, ವೀರಾರೆಡ್ಡಿ ಪಾಟೀಲ, ರುದ್ರಯ್ಯಾ ಸ್ವಾಮಿ, ಬಸವರಾಜ ಅಷ್ಟೂರ್, ವಿಠ್ಠಲರೆಡ್ಡಿ ಆಣದೂರ, ಸೋಮನಾಥ ಎಣಕೂರ, ಖಾನ್ ಸಾಬ್, ಷಣ್ಮುಖಪ್ಪಾ ಆಣದೂರ, ರಾಜಕುಮಾರ, ಕಲ್ಲಪ್ಪಾ ಗೌದೆ, ಗುಂಡೇರಾವ ಕುಲಕರ್ಣಿ ಸೇರಿದಂತೆ ಮತ್ತಿತರರು ಇದ್ದರು.